Asianet Suvarna News Asianet Suvarna News

ಬೆಂಗಳೂರು: ಓಡಿ ಹೋದ ಪುತ್ರಿಯ ‘ಮಾರ್ಯಾದಾಗೇಡು’ ಹತ್ಯೆ

ಮೈಸೂರಿನ ಎಚ್‌.ಡಿ.ಕೋಟೆ ಮೂಲದ ಪಲ್ಲವಿ ಕೊಲೆಯಾದ ದುರ್ದೈವಿ. ಆಕೆಯ ತಂದೆ ಗಣೇಶ್‌(50) ಬಂಧಿತ. ಪರಪ್ಪನ ಅಗ್ರಹಾರ ಸಮೀಪದ ನಾಗನಾಥಪುರದ ಡಾಕ್ಟರ್ಸ್‌ ಲೇಔಟ್‌ನಲ್ಲಿ ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ.

Father Killed Daughter in Bengaluru grg
Author
First Published Oct 23, 2023, 4:27 AM IST

ಬೆಂಗಳೂರು(ಅ.23): ಪ್ರಿಯಕರನ ಜತೆಗೆ ಮಗಳು ಓಡಿ ಹೋಗಿದ್ದರಿಂದ ಊರಲ್ಲಿ ತನ್ನ ಮರ್ಯಾದೆ ಹೋಯಿತು ಎಂದು ತಂದೆಯೇ ಆ ಮಗಳನ್ನು ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದಿರುವ ಅಮಾನುಷ ಘಟನೆ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೈಸೂರಿನ ಎಚ್‌.ಡಿ.ಕೋಟೆ ಮೂಲದ ಪಲ್ಲವಿ(17) ಕೊಲೆಯಾದ ದುರ್ದೈವಿ. ಆಕೆಯ ತಂದೆ ಗಣೇಶ್‌(50) ಬಂಧಿತ. ಪರಪ್ಪನ ಅಗ್ರಹಾರ ಸಮೀಪದ ನಾಗನಾಥಪುರದ ಡಾಕ್ಟರ್ಸ್‌ ಲೇಔಟ್‌ನಲ್ಲಿ ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ.

ಉತ್ತರ ಕನ್ನಡ: ಮದುವೆಯಾಗಿ ಮಕ್ಕಳಿದ್ರೂ ಬಿಡದ ಆ ಒಂದು ಚಟ, ಹೆಂಡತಿಯ ಕತ್ತು ಸೀಳಿ ಕೊಲೆ‌ ಮಾಡಿದ ಗಂಡ

ಏನಿದು ಪ್ರಕರಣ?:

ಎಚ್.ಡಿ.ಕೋಟೆಯ ರೈತ ಗಣೇಶ್ ಮತ್ತು ಶಾರದಮ್ಮ ದಂಪತಿಯ ಪುತ್ರಿ ಪಲ್ಲವಿ, ಮನೆ ಸಮೀಪದ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾಗ ಮನೋಜ್‌ ಎಂಬ ಯುವಕ ಪರಿಚಯವಾಗಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ತಂದೆ ಗಣೇಶ್‌ಗೆ ಗೊತ್ತಾಗಿ ಪ್ರಶ್ನಿಸಿದಾಗ ಪಲ್ಲವಿ, ಪ್ರಿಯಕರ ಮನೋಜ್‌ ಜತೆಗೆ ಓಡಿಹೋಗಿದ್ದಳು. ಬಳಿಕ ಆಕೆಯನ್ನು ಪತ್ತೆಹಚ್ಚಿ ಮನೆಗೆ ಕರೆತಂದು ಕಾಲೇಜು ವ್ಯಾಸಂಗ ಅರ್ಧಕ್ಕೆ ಬಿಡಿಸಿದ್ದರು.

ಪ್ರಿಯಕರ ಮನೋಜ್‌ನಿಂದ ಪಲ್ಲವಿಯನ್ನು ದೂರ ಮಾಡುವ ಉದ್ದೇಶದಿಂದ ಗಣೇಶ್‌, ಪಲ್ಲವಿಯನ್ನು ಪರಪ್ಪನ ಅಗ್ರಹಾರದ ಡಾಕ್ಟರ್ಸ್‌ ಲೇಔಟ್‌ ನಿವಾಸಿಯಾಗಿರುವ ನಾದಿನಿ ಗೀತಾ(ಶಾರದಮ್ಮನ ತಂಗಿ) ಅವರ ಮನೆಯಲ್ಲಿ ಬಿಟ್ಟಿದ್ದರು. ಅ.14ರಂದು ಪಲ್ಲವಿ ಚಿಕ್ಕಮ್ಮನ ಮನೆಯಿಂದ ನಾಪತ್ತೆಯಾಗಿದ್ದಳು. ಈ ವಿಚಾರ ಗೊತ್ತಾಗಿ ಗಣೇಶ್‌ ದಂಪತಿ ಬೆಂಗಳೂರಿಗೆ ಬಂದು ಅ.18ರಂದು ಮಗಳು ನಾಪತ್ತೆಯಾಗಿರುವ ಸಂಬಂಧ ದೂರು ನೀಡಿದ್ದರು. ಇದರ ಬೆನ್ನಲ್ಲೇ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಿಯಕರನ ಜತೆಗೆ ಇದ್ದ ಪಲ್ಲವಿಯನ್ನು ಪತ್ತೆಹಚ್ಚಿ ಅ.20ರಂದು ಗಣೇಶ್‌ ದಂಪತಿಯ ಸುಪರ್ದಿಗೆ ಒಪ್ಪಿಸಿದ್ದರು.

ಮರ್ಯಾದೆ ಹೋಯಿತು ಎಂದು ಹತ್ಯೆ

ಅ.21ರಂದು ಇದೇ ವಿಚಾರವಾಗಿ ಗಣೇಶ್‌, ಪುತ್ರಿ ಪಲ್ಲವಿ ಜತೆಗೆ ಜಗಳ ತೆಗೆದಿದ್ದ. ‘ನೀನು ನಾಪತ್ತೆ ಆಗಿದ್ದರಿಂದ ಊರಿನಲ್ಲಿ ನನ್ನ ಮರ್ಯಾದೆ ಹೋಯಿತು’ ಎಂದು ಕೋಪೋದ್ರಿಕ್ತನಾಗಿ ಮಚ್ಚಿನಿಂದ ಪಲ್ಲವಿ ಮೇಲೆ ಹಲ್ಲೆ ನಡೆಸಿದ್ದ. ಈ ವೇಳೆ ಜಗಳ ಬಿಡಿಸಲು ಮುಂದಾದ ಪತ್ನಿ ಶಾರದಮ್ಮ ಮೇಲೂ ಕೋಪಗೊಂಡ ಗಣೇಶ್‌, ‘ನೀನು ಮಗಳನ್ನು ಸರಿಯಾಗಿ ಬೆಳೆಸಲಿಲ್ಲ’ ಎಂದು ಆಕೆಯ ಮೇಲೂ ಮಚ್ಚಿನಿಂದ ಹಲ್ಲೆ ನಡೆಸಿದ್ದ. ಇದೇ ಸಮಯಕ್ಕೆ ನಾದಿನಿಯ ಗಂಡ ಶಾಂತಕುಮಾರ್‌ ಮನೆಗೆ ಬಂದಾಗ, ‘ನನ್ನ ಮಗಳನ್ನು ನೀವು ಸರಿಯಾಗಿ ನೋಡಿಕೊಂಡಿಲ್ಲ’ ಎಂದು ಆತನ ಮೇಲೂ ಮಚ್ಚಿನಿಂದ ಹಲ್ಲೆಗೈದು ಪರಾರಿಯಾಗಿದ್ದ.

ಹಲ್ಲೆಯಿಂದ ತೀವ್ರ ರಕ್ತಸ್ರಾವವಾಗಿ ಪಲ್ಲವಿ ಮೃತಪಟ್ಟರೆ, ಶಾರದಮ್ಮ ಮತ್ತು ಶಾಂತಕುಮಾರ್‌ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಯಿಯನ್ನೇ ಮುಗಿಸಿದ ಹೆಂಡತಿ, ತಿಥಿ ದಿನ ರಟ್ಟಾಯ್ತು ಕೊಲೆಯ ರಹಸ್ಯ!

ಈ ನಡುವೆ ಗಣೇಶ್‌, ಪರಪ್ಪನ ಅಗ್ರಹಾರ ಠಾಣೆಗೆ ತೆರಳಿ ಶರಣಾಗಿದ್ದಾನೆ. ಕೊಲೆಯಾದ ಪಲ್ಲವಿಯ ಚಿಕ್ಕಮ್ಮ ಗೀತಾ ಅವರಿಂದ ದೂರು ಪಡೆದು ಕೊಲೆ, ಕೊಲೆಗೆ ಯತ್ನ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿ ಗಣೇಶ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೋಕ್ಸೋ ಕಾಯ್ದೆಯಡಿ ಪ್ರಿಯಕರನ ಬಂಧನ

ನಾಗನಾಥಪುರದ ಡಾಕ್ಟರ್ಸ್‌ ಲೇಔಟ್‌ನ ಚಿಕ್ಕಮ್ಮನ ಮನೆಯಲ್ಲಿದ್ದ ಪಲ್ಲವಿಯನ್ನು ಪ್ರಿಯಕರ ಮನೋಜ್‌ ಸಂಪರ್ಕಿಸಿ ಅ.14ರಂದು ಆಕೆಯನ್ನು ಎಚ್‌.ಡಿ.ಕೋಟೆಯ ಅಜ್ಜಿಯ ಮನೆಗೆ ಕರೆದುಕೊಂಡು ಹೋಗಿದ್ದ. ಮತ್ತೊಂದೆಡೆ ನಾಪತ್ತೆ ದೂರು ಪಡೆದ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು, ಪಲ್ಲವಿ ಮತ್ತು ಮನೋಜ್‌ನನ್ನು ಪತ್ತೆಹಚ್ಚಿದ್ದರು. ಮನೋಜ್‌ ಅಜ್ಜಿಯ ಮನೆಯಲ್ಲಿ ಪಲ್ಲವಿ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದಾನೆ ಎನ್ನಲಾಗಿದೆ. ಪಲ್ಲವಿ ಅಪ್ರಾಪ್ತೆಯಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಮನೋಜ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Follow Us:
Download App:
  • android
  • ios