ಬೆಂಗಳೂರು(ಫೆ.20): ಪೂಜೆ ಮಾಡುವ ನೆಪದಲ್ಲಿ, ಹೋಮ ಹವನ ಮಾಡಿಸಿ ಮನೆಗಳ್ಳತನ ಮಾಡುತ್ತಿದ್ದ ನಕಲಿ ಸ್ವಾಮೀಜಿಗಳನ್ನ ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನ ನಾಗರಾಜ್ ಹಾಗೂ ಲಕ್ಷ್ಮಣ್ ಎಂದು ಗುರುತಿಸಲಾಗಿದೆ. 

ಬಂಧಿತ ಆರೋಪಿಗಳು ಮೊದಲು ಸ್ವಾಮೀಜಿಗಳ ರೀತಿ ಎಂಟ್ರಿ ಕೊಡುತ್ತಿದ್ದರು. ಬಳಿಕ ಮನೆಯ ವಿಚಾರಗಳನ್ನು ಅರೆತು ಮರುದಿನ ಕಳ್ಳತನ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.  ಈ ಖದೀಮರ ಗ್ಯಾಂಗ್‌ ದೊಡ್ಡ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸ್ವಾಮೀಜಿಗಳ ವೇಶದಲ್ಲಿ ಮನೆಗೆ ತೆರಳುತಿದ್ದ ಈ ಗ್ಯಾಂಗ್‌, ನಿಮ್ಮ ಮನೆಯಲ್ಲಿ ದೋಷ ಇದೆ ಎಂದು ಹೇಳಿ, ದೋಷ ನಿವಾರಣೆಗೆ ಮಹಾ ಪೂಜೆ ಮಾಡಬೇಕು ಎಂದು ನಂಬಿಸುತ್ತಿದ್ದರು. ಇವರ ಮಾತು ಕೇಳಿದ ಮನೆ ಮಾಲೀಕರು ಪೂಜೆಗೆ ಒಪ್ಪುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ನಕಲಿ ಸ್ವಾಮೀಜಗಳು ಮನೆಯಲ್ಲಿದ್ದ ಚಿನ್ನವನ್ನು ಒಂದೆಡೆ ಇಡುವಂತೆ ಹೇಳುತ್ತಿದ್ದರು. ಇವರ ಮಾತಿಗೆ ಒಪ್ಪಿದ ಮನೆಯ ಮಾಲೀಕರು ಚಿನ್ನವನ್ನೆಲ್ಲಾ ಒಂದು ಕಡೆ ಇಡುತ್ತಿದ್ದರು. 

ಈ ವೇಳೆ ಇವರ ಮನೆಯಲ್ಲಿ ಎಷ್ಟು ಚಿನ್ನ, ಒಡವೆ ಇದೆ ಎಂದು ಲೆಕ್ಕ ಹಾಕುತ್ತಿದ್ದರು. ಇದೇ ವೇಳೆ ಮನೆಯ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದರು. ಬಳಿಕ ರಾತ್ರಿ ವೇಳೆ ಮನೆಗೆ ಎಂಟ್ರಿ ಕೊಟ್ಟು ಕಳ್ಳತನ ಮಾಡುತ್ತಿದ್ದರು. ಸದ್ಯ ಬಂಧಿತರಿಂದ 180 ಗ್ರಾಂ ಚಿನ್ನಭರಣಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.