China Apps Fraud: ಚೀನಾ ಆ್ಯಪ್ ಕಂಪನಿಗಳ ವ್ಯಾಲೆಟ್‌ನಲ್ಲಿದ್ದ 6 ಕೋಟಿ ಜಪ್ತಿ
* ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವುದಾಗಿ, ಹೆಚ್ಚಿನ ಲಾಭಾಂಶದ ಆಸೆ ತೋರಿಸುತ್ತಿದ್ದ ಕಂಪನಿಗಳಿಗೆ ಇಡಿ ಶಾಕ್
* ಚೀನಾದಲ್ಲೇ ಕುಳಿತು ವ್ಯವಹಾರ
* ಜನರಿಂದ ಸುಲಿಗೆ ಮಾಡಿದ ಹಣ ವಿದೇಶಿ ಬ್ಯಾಂಕ್ ಖಾತೆಗೆ ಅಕ್ರಮವಾಗಿ ವರ್ಗಾವಣೆ
ಬೆಂಗಳೂರು(ಏ.28): ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವುದಾಗಿ ಹೇಳಿ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದ ಮತ್ತು ಹೆಚ್ಚಿನ ಲಾಭಾಂಶ ನೀಡುವುದಾಗಿ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ ಚೀನಾ ಆ್ಯಪ್ ಕಂಪನಿಗಳ(China App Companies) ಹಾಗೂ ವಂಚಕರ ಬ್ಯಾಂಕ್ ಖಾತೆ ಮತ್ತು ವ್ಯಾಲೇಟ್‌ನಲ್ಲಿದ್ದ 6.17 ಕೋಟಿ ರು. ಅನ್ನು ಜಾರಿ ನಿರ್ದೇಶನಾಲಯ(ED) ಜಪ್ತಿ ಮಾಡಿದೆ.
ಹೆಚ್ಚಿನ ಲಾಭಾಂಶ ನೀಡುವುದಾಗಿ ಆಮಿಷವೊಡ್ಡಿ ಸಾರ್ವಜನಿಕರಿಂದ ಹೂಡಿಕೆ(Investment) ಮಾಡಿಸಿಕೊಳ್ಳುತ್ತಿದ್ದ ಮತ್ತು ಕಡಿಮೆ ಬಡ್ಡಿ ದರಕ್ಕೆ ಸಾಲ(Loan) ನೀಡಿ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿರುವ ಆ್ಯಪ್ ಕಂಪನಿಗಳು ಮತ್ತು ವಂಚಕರ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಮತ್ತು ಮಾರತ್‌ಹಳ್ಳಿ ಪೊಲೀಸ್(Police) ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್‌ಗಳು(FIR) ದಾಖಲಾಗಿದ್ದವು. ಅಕ್ರಮ ಹಣ ವರ್ಗಾವಣೆ ಹಿನ್ನೆಲೆಯಲ್ಲಿ ಪ್ರಕರಣವನ್ನು ಇ.ಡಿ. ತನಿಖೆ ಕೈಗೊಂಡು ಚೀನಾ ಆ್ಯಪ್ ಕಂಪನಿಗಳ ಮತ್ತು ವಂಚಕರ ಬ್ಯಾಂಕ್ ಖಾತೆ ಮತ್ತು ವ್ಯಾಲೇಟ್‌ನಲ್ಲಿನ 6.17 ಕೋಟಿ ರು. ಜಪ್ತಿ ಮಾಡಿಕೊಂಡಿದೆ.
ಮತ್ತೆ ಚೀನಾ ಆ್ಯಪ್ ಹಾವಳಿ: ಸಾಲ ಕಟ್ಟಿದ್ರೂ ನಿಲ್ಲದ ಕಿರುಕುಳ
ಕ್ರೇಜಿ ರುಪಿ, ಕ್ಯಾಷಿನ್, ರುಪೇ ಮೆನು, ಕ್ಯಾಶ್ ಮಾಸ್ಟರ್ ಸೇರಿದಂತೆ ಇತರೆ ಹೆಸರಲ್ಲಿ ಆ್ಯಪ್‌ಗಳ ಕಂಪನಿಗಳು ಸಾಲ ನೀಡುವುದು ಮತ್ತು ಸಾರ್ವಜನಿಕರಿಂದ ಹೂಡಿಕೆ ಮಾಡಿಕೊಳ್ಳುತ್ತಿದ್ದವು. ಆ್ಯಪ್ ಮೂಲಕ ಐದು ಸಾವಿರ ರು.ನಿಂದ ಒಂದು ಲಕ್ಷ ರು.ವರೆಗೆ ಸಾಲ ಸಿಗುತ್ತಿತ್ತು. ಕೋವಿಡ್ ಸಮಯದಲ್ಲಿ ಲಾಕ್‌ಡೌನ್ ಮಾಡಿದ್ದರಿಂದ ಸಾರ್ವಜನಿಕರು ಆರ್ಥಿಕ ಸಂಕಷ್ಟಎದುರಿಸಿದ್ದರು. ಅಲ್ಲದೇ, ನಿರುದ್ಯೋಗ ಸಮಸ್ಯೆಯೂ ಎದುರಾಗಿತ್ತು. ಚೀನಾ ದೇಶದ ಪ್ರಜೆಗಳು ಭಾರತದಲ್ಲಿ ಸ್ಥಳೀಯರನ್ನು ಬಳಿಸಿಕೊಂಡು ಅವರ ಹೆಸರಲ್ಲಿ ಹಣಕಾಸು ವ್ಯವಹಾರ ನಡೆಸಿದ್ದವು ಎಂದು ಇ.ಡಿ. ತಿಳಿಸಿದೆ.
ಚೀನಾದಲ್ಲೇ ಕುಳಿತು ವ್ಯವಹಾರ
ಕಂಪನಿ ಆರಂಭಿಸಲು ಆ್ಯಪ್ ಕಂಪನಿಗಳು ಲೆಕ್ಕ ಪರಿಶೋಧಕರ ಸಹಾಯ ಪಡೆದುಕೊಂಡಿದ್ದಾರೆ. ಭಾರತೀಯ ಪ್ರಜೆಗಳ ಕೆವೈಸಿ ಮೂಲಕ ಬ್ಯಾಂಕ್ ತೆರೆದಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಚೀನಿಯರು ಚೀನಾ ದೇಶದಲ್ಲಿಯೇ ಕುಳಿತು ವ್ಯವಹಾರ ನಡೆಸುತ್ತಿದ್ದರು. ಜನರಿಂದ ಸುಲಿಗೆ ಮಾಡಿದ ಹಣವನ್ನು ವಿದೇಶಿ ಬ್ಯಾಂಕ್ ಖಾತೆಗೆ ಅಕ್ರಮವಾಗಿ ವರ್ಗಾಯಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಇ.ಡಿ. ಹೇಳಿದೆ.