ಬೆಂಗಳೂರು(ಸೆ.06): ಮಾದಕ ವಸ್ತು ಜಾಲದ ಸುಳಿಗೆ ಸಿಲುಕಿರುವ ನಟಿ ರಾಗಿಣಿ ದ್ವಿವೇದಿಗೆ ಈಗ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಜಾರಿ ನಿರ್ದೇಶನಾಲಯದ (ಇಡಿ) ತನಿಖೆ ಸಂಕಷ್ಟ ಎದುರಾಗುವ ಸಾಧ್ಯತಗಳಿವೆ ಎನ್ನಲಾಗಿದೆ.

ಮಾದಕ ವಸ್ತು ಮಾರಾಟದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂಬ ಆರೋಪ ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ಹಾಗೂ ತಮ್ಮ ಆದಾಯಕ್ಕೂ ಮಿಗಿಲಾದ ಆಸ್ತಿ ಸಂಪಾದನೆ ಆರೋಪದಡಿ ರಾಗಿಣಿ ವಿರುದ್ಧ ಇ.ಡಿ. ತನಿಖೆ ನಡೆಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಪಂಜಾಬ್‌ ಮೂಲದ ರಾಗಿಣಿ, 2009ರಲ್ಲಿ ಕನ್ನಡ ಚಲನಚಿತ್ರ ರಂಗ ಪ್ರವೇಶಿಸಿದ್ದರು. ಕನ್ನಡ ಮಾತ್ರವಲ್ಲದೆ ತೆಲಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಸಹ ನಟಿಸಿರುವ ರಾಗಿಣಿ, ಸದಾ ಒಂದಿಲ್ಲೊಂದು ವಿವಾದಗಳಿಂದಲೂ ಸುದ್ದಿಯಲ್ಲಿದ್ದರು. ಹಲವು ಜಾಹೀರಾತುಗಳಲ್ಲಿ ಸಹ ನಟಿಸಿದ್ದರು. ಚಲನಚಿತ್ರ ರಂಗಕ್ಕೆ ಪ್ರವೇಶಿಸಿದ ಆರಂಭದಲ್ಲಿ ಕೆಲವೇ ಲಕ್ಷಗಳ ಸಂಭಾವನೆ ಪಡೆಯುತ್ತಿದ್ದ ರಾಗಿಣಿ, ಈಗ ಬೆಂಗಳೂರಿನಲ್ಲಿ ಐಷಾರಾಮಿ ಮನೆ ಸೇರಿದಂತೆ ಕೋಟ್ಯಂತರ ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆ. 

ಡ್ರಗ್ಗಿಣಿಗೆ ಬೇಲೋ? ಜೈಲೋ? ಸೋಮವಾರ ನಿರ್ಧಾರವಾಗಲಿದೆ ನಟಿಯ ಭವಿಷ್ಯ..!

ವೈಭವೋಪೇತ ಜೀವನ ಸಾಗಿಸುತ್ತಿದ್ದ ಆಕೆ, ಕೆಲ ದಿನಗಳ ಹಿಂದೆ ಮಿನರಲ್‌ ವಾಟರ್‌ ಕಂಪನಿಯನ್ನು ಕೂಡಾ ಆರಂಭಿಸಿದ್ದರು. ಬಳ್ಳಾರಿ ಕೆಪಿಎಲ್‌ ಕ್ರಿಕೆಟ್‌ ತಂಡದ ಮಾಲೀಕನ ಜತೆ ಪಾಲುದಾರಿಕೆ ಹೊಂದಿದ್ದ ಆರೋಪವೂ ಇದೆ. ಹೀಗಾಗಿ ಮಾದಕ ವಸ್ತು ಜಾಲದ ಪ್ರಕರಣದಲ್ಲಿ ಸಿಸಿಬಿಯಿಂದ ಬಂಧನಕ್ಕೊಳಗಾಗಿರುವ ರಾಗಿಣಿಯ ಆರ್ಥಿಕ ವ್ಯವಹಾರಗಳ ಬಗ್ಗೆ ಸಹ ತನಿಖೆ ನಡೆದಿದೆ ಎನ್ನಲಾಗಿದೆ. ಈ ವೇಳೆ ಕೆಲವು ಬೇನಾಮಿ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಲಭಿಸಿವೆ. ಈ ಬಗ್ಗೆ ಸಿಸಿಬಿ ವರದಿ ಸಲ್ಲಿಸಿದ ಬಳಿಕ ಇ.ಡಿ. ಕಾರ್ಯಾಚರಣೆ ಶುರು ಮಾಡಲಿದೆ ಎಂದು ತಿಳಿದು ಬಂದಿದೆ.