ಬೆಂಗಳೂರು(ಸೆ.22): ರಾಜ್ಯದಲ್ಲಿ ಬೇರೂರಿರುವ ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಸಿಸಿಬಿ, ಎನ್‌ಸಿಬಿ ಬಳಿಕ ಇದೀಗ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಕಾರ್ಯಾಚರಣೆ ಆರಂಭಿಸಿದ್ದು, ಖ್ಯಾತ ನಟ ಯೋಗೇಶ್‌ (ಲೂಸ್‌ ಮÞದ ಖ್ಯಾತಿಯ ಯೋಗಿ) ಹಾಗೂ ನಟಿ ಪ್ರೇಮಾ ಸೋದರ, ಕ್ರಿಕೆ​ಟಿ​ಗ ಎನ್‌.ಸಿ.ಅಯ್ಯಪ್ಪ, ಕಿರುತೆರೆ ನಟಿ ರಶ್ಮಿ​ತಾ ಚಂಗಪ್ಪ ಸೇರಿದಂತೆ 12ಕ್ಕೂ ಹೆಚ್ಚಿನ ‘ವಿಐಪಿ’ ಕುಳಗಳಿಗೆ ಐಎಸ್‌ಡಿ ತನಿಖೆಯ ಬಿಸಿ ತಾಗಿದೆ.

"

ಅಲ್ಲದೆ, ಮಾದಕ ವಸ್ತು ಜಾಲದಲ್ಲಿ ಖ್ಯಾತ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ಐಂದ್ರಿತಾ ರೈ ಹಾಗೂ ನಟ ದಿಗಂತ್‌ ಬಳಿಕ ಮತ್ತೊಬ್ಬ ಸ್ಟಾರ್‌ ನಟನಿಗೂ ಉರುಳು ಸುತ್ತಿಕೊಳ್ಳಲಾರಂಭಿಸಿದೆ.

ನಟಿಯರಿಗೆ ಮುಗಿಯದ ಜೈಲುವಾಸ; ಗುರುವಾರದ ಕತೆ ಏನು?

ಕೆಲ ದಿನಗಳ ಹಿಂದೆ ಡ್ರಗ್ಸ್‌ ಪೆಡ್ಲರ್‌ನನ್ನು ಸೆರೆ ಹಿಡಿದು ಐಎಸ್‌ಡಿ ಅಧಿಕಾರಿಗಳು ವಿಚಾರಿಸಿದಾಗ ಚಲನಚಿತ್ರ ನಟರು, ಮಾಜಿ ಕ್ರಿಕೆಟಿಗ, ಕಿರುತೆರೆ ನಟಿಯರು ಹಾಗೂ ರಾಜಕಾರಣಿ ಮಕ್ಕಳ ‘ಮಾದಕ ವ್ಯಸನದ ಚರಿತ್ರೆ’ ಅನಾವರಣಗೊಂಡಿದೆ. ಈ ಮಾಹಿತಿ ಮೇರೆಗೆ ಲೂಸ್‌ ಮಾದ ಖ್ಯಾತಿಯ ಯೋಗಿ ಹಾಗೂ ನಟಿ ಪ್ರೇಮಾ ಸೋದರನೂ ಆಗಿರುವ ಮಾಜಿ ರಣಜಿ ಆಟಗಾರ ಹಾಗೂ ಬಿಗ್‌ಬಾಸ್‌ ಸ್ಪರ್ಧಿ ಎನ್‌.ಸಿ.ಅಯ್ಯಪ್ಪ, ಕಿರು​ತೆರೆ ನಟಿ ರಶ್ಮಿತಾ ಚಂಗಪ್ಪ ಅವರನ್ನು ಐಎಸ್‌ಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿ ಹೇಳಿಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಲದೆ, ‘ಬ್ರಹ್ಮಗಂಟು’ ಧಾರಾವಾಹಿ ಖ್ಯಾತಿಯ ಗೀತಾಭಟ್‌ ಹಾಗೂ ‘ಗಟ್ಟಿಮೇಳ’ದ ಅಭಿಷೇಕ್‌ ಅವರಿಗೆ ಮಂಗ​ಳ​ವಾರ ಬೆಳಗ್ಗೆ 10ಕ್ಕೆ ವಿಚಾ​ರ​ಣೆಗೆ ಬರು​ವಂತೆ ಐಎ​ಸ್‌ಡಿ ಬುಲಾವ್‌ ನೀಡಿ​ದೆ. ರಾಜ್ಯದ ಹಾಲಿ ಬಿಜೆಪಿ ಸಂಸದರ ಪುತ್ರ ಹಾಗೂ ಜೆಡಿಎಸ್‌ ಮಾಜಿ ಸಂಸದ ಶಿವ​ರಾ​ಮೇ​ಗೌ​ಡ ಪುತ್ರ ಸೇರಿ ಇಬ್ಬರು ಪ್ರಭಾವಿ ರಾಜಕಾರಣಿಗಳ ಮಕ್ಕಳು ಮತ್ತು ಖಾಸಗಿ ಚಾನೆಲ್‌ ಉದ್ಯೋಗಿ ನಿಶ್ಚಿತಾ ಸೇರಿದಂತೆ ಸುಮಾರು 12ಕ್ಕೂ ಹೆಚ್ಚಿನ ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ಐಎಸ್‌ಡಿ ನೋಟಿಸ್‌ ಜಾರಿಗೊಳಿಸಿದೆ. ಕೇರಳ ಮೂಲದ ಪೆಡ್ಲರ್‌ ಜತೆ ಸ್ನೇಹದ ಕುರಿತು ಕಲಾವಿದರನ್ನು ಅಧಿಕಾರಿಗಳು ಪ್ರಶ್ನಿಸಲಿದ್ದಾರೆ.

'ಆದಿತ್ಯ ಆಳ್ವಾ ಎಲ್ಲಿದ್ದರೂ ಸಿಸಿಬಿ ಬಲೆಗೆ ಬೀಳಲೇಬೇಕು' ಎಂಥಾ ಪ್ಲಾನ್!

ಮಾದಕ ಜಾಲ ಬೆನ್ನಹತ್ತಿದ ಐಎಸ್‌ಡಿ:

ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಡ್ರಗ್ಸ್‌ ಮಾರಾಟದ ಬಗ್ಗೆ ಮಾಹಿತಿ ಪಡೆದ ಐಎಸ್‌ಡಿ ಅಧಿಕಾರಿಗಳು, ಕೂಡಲೇ ಕಾರ್ಯಪ್ರವೃತ್ತರಾಗಿ ಪೆಡ್ಲರ್‌ವೊಬ್ಬನನ್ನು ವಶಕ್ಕೆ ಪಡೆದಿದ್ದರು. ಬಳಿಕ ಆತನ ಮೊಬೈಲ್‌ ಕರೆಗಳ ವಿವರ (ಸಿಡಿಆರ್‌) ಕೆದಕಿದಾಗ ಹಲವು ಗಣ್ಯರ ಮಾದಕ ಮುಖಗಳು ಕಾಣಿಸಿಕೊಂಡಿವೆ. ಈ ಪೆಡ್ಲರ್‌ನ ಹೇಳಿಕೆ ಆಧರಿಸಿ ಐಎಸ್‌ಡಿ ಅಧಿಕಾರಿಗಳು, ಎರಡು ದಿನಗಳ ಹಿಂದೆ ನಟ ಯೋಗಿ ಹಾಗೂ ಅಯ್ಯಪ್ಪನನ್ನು ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಈ ವೇಳೆ ‘ನಮಗೇ​ನೂ ಗೊತ್ತಿಲ್ಲ. ನಾವು ಮಾದಕ ವಸ್ತು ವ್ಯಸನಿಗಳಲ್ಲ. ನಮಗೆ ಯಾರೂ ಡ್ರಗ್ಸ್‌ ಪೆಡ್ಲರ್‌ಗಳ ಪರಿಚಯವಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ’ ಎನ್ನಲಾಗಿದೆ.

ಆದರೆ ಈ ಸಮರ್ಥನೆ ಒಪ್ಪದ ತನಿಖಾಧಿಕಾರಿಗಳು, ‘ಮುಂದಿನ ದಿನಗಳಲ್ಲಿ ಮತ್ತೆ ವಿಚಾರಣೆ ಹಾಜರಾಗಬೇಕು. ಮಾದಕ ವಸ್ತು ಸೇವನೆ ಅಥವಾ ಆ ಜಾಲದೊಂದಿಗೆ ಸ್ನೇಹ ಸಂಪರ್ಕ ಮುಂದುವರೆಸಿದರೆ ಕಠಿಣ ಎದುರಿಸಬೇಕಾದಿತು’ ಎಂದು ತಾಕೀತು ಮಾಡಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಾದಕ ವಸ್ತು ಮಾರಾಟಕ್ಕೆ ಯತ್ನ: 14 ಕೆಜಿ ಗಾಂಜಾ ಜಪ್ತಿ, ನಾಲ್ವರ ಬಂಧನ

ಸಂಸದ, ಮಾಜಿ ಸಂಸ​ದರ ಮಕ್ಕಳು:

ಬಳಿಕ ಆಡಳಿತಾರೂಢ ಬಿಜೆಪಿಯ ಸಂಸದರ ಪುತ್ರ ಹಾಗೂ ಜೆಡಿಎಸ್‌ ಮಾಜಿ ಸಂಸದ ಶಿವ​ರಾ​ಮೇ​ಗೌ​ಡ ಮಗನಿಗೆ ಐಎಸ್‌ಡಿ ಬಿಸಿ ಮುಟ್ಟಿಸಿದೆ. ಈ ಇಬ್ಬರು ರಾಜಕಾರಣಿಗಳ ಮಕ್ಕಳಿಗೆ ವಿಚಾರಣೆಗೆ ಕರೆದಿರುವ ಅಧಿಕಾರಿಗಳು, ವಿಚಾರಣೆಗೆ ಗೈರಾದರೆ ಬಂಧಿಸಬೇಕಾದಿತು ಎಂಬ ಎಚ್ಚರಿಕೆಯನ್ನು ಕೂಡಾ ಕೊಟ್ಟಿದ್ದಾರೆ.

ಕಿರು​ತೆರೆ ನಟ​ರು:

ಅದೇ ರೀತಿ ಬಿಗ್‌ಬಾಸ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹಾಗೂ ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ರಶ್ಮಿ​ತಾ ಚೆಂಗಪ್ಪ, ಗೀತಾ ಭಟ್‌ ಹಾಗೂ ಅಭಿ​ಷೇಕ್‌ ಅವರ ಹೆಸರು ಸಹ ವಿಚಾರಣೆ ವೇಳೆ ಬಹಿರಂಗವಾಗಿದೆ. ಹಾಗೆಯೇ ಸ್ಟಾರ್‌ಗಳ ಜೊತೆ ಸ್ನೇಹ ಹೊಂದಿದ್ದ ಖಾಸಗಿ ವಾಹಿನಿ ಉದ್ಯೋಗಿ ನಿಶ್ಚಿತಾ ಪಾಲಿಗೆ ಮುಳ್ಳಾಗಿದೆ ಎನ್ನಲಾಗಿದೆ.

ಪೆಡ್ಲರ್‌ಗಳೊಂದಿಗೆ ಒಡನಾಟ ಹೊಂದಿದ್ದ ರಶ್ಮಿ​ತಾ, ಯೋಗಿ, ಅಯ್ಯಪ್ಪ ಜತೆ ನಿಶ್ಚಿತಾ ಸಹ ಆತ್ಮೀಯವಾಗಿದ್ದಳು. ಅಲ್ಲದೆ ಪೆಡ್ಲರ್‌ ವಿಚಾರಣೆ ವೇಳೆ ನಿಶ್ಚಿ​ತಾ ಹೆಸರು ಸಹ ಪ್ರಸ್ತಾಪವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.

ನೋಟಿಸ್‌ ಬಂದಿ​ದೆ- ಗೀತಾ:

ನೋಟಿಸ್‌ ಸ್ವೀಕರಿಸಿರುವುದನ್ನು ಗೀತಾ ಭಟ್‌ ಸಹ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ‘ನಾವು ಯಾವುದೇ ತಪ್ಪು ಮಾಡಿಲ್ಲ. ಯಾರದ್ದೋ ಮೊಬೈಲ್‌ನಲ್ಲಿ ನನ್ನ ನಂಬರ್‌ ಪತ್ತೆಯಾದರೆ ನಾನೇಕೆ ಹೊಣೆಯಾಗುತ್ತೇನೆ? ಅಧಿಕಾರಿಗಳು ವಿಚಾರಣೆಗೆ ಕರೆದಿದ್ದಾರೆ. ಅಲ್ಲಿ ಎಲ್ಲವನ್ನು ವಿವರಿಸುತ್ತೇನೆ’ ಎಂದಿ​ದ್ದಾ​ರೆ.​ ರಶ್ಮಿತಾ ಕೂಡ ತಾವು ವಿಚಾ​ರಣೆ ಎದು​ರಿಸಿ ಪೊಲೀ​ಸ​ರಿಗೆ ಹೇಳಿಕೆ ಕೊಟ್ಟಿ​ದ್ದಾಗಿ ಟೀವಿ ವಾಹಿ​ನಿಗೆ ತಿಳಿ​ಸಿ​ದ್ದಾ​ರೆ.

ಪಾಕ್‌ ಗಡೀಲಿ 300 ಕೋಟಿ ರೂ. ಡ್ರಗ್ಸ್‌ ಎಸೆದು ಪರಾರಿ!

ಲೂಸ್‌ ಮಾದ ಗ್ಯಾಂಗ್‌ಗೆ ಪಾರ್ಟಿ ಕುತ್ತು

ಬೆಂಗಳೂರು ನಗರದ ಪಬ್‌, ಕ್ಲಬ್‌, ಹೋಟೆಲ್‌, ರೆಸಾರ್ಟ್‌ ಹಾಗೂ ಅಪಾರ್ಟ್‌ಮೆಂಟ್‌ ಮಾತ್ರವಲ್ಲದೆ ಮಡಿಕೇರಿ, ಚಿಕ್ಕಮಗಳೂರು ಸೇರಿದಂತೆ ಇತೆರೆಡೆ ಮೋಜು ಮಸ್ತಿ ಪಾರ್ಟಿಗಳೇ ಈಗ ಲೂಸ್‌ ಮಾದ ಗ್ಯಾಂಗ್‌ಗೆ ಕಂಟಕವಾಗಿದೆ ಎನ್ನಲಾಗುತ್ತಿದೆ.

ಪೆಡ್ಲರ್‌ಗಳಿಂದ ಡ್ರಗ್ಸ್‌ ಖರೀದಿಸಿ ತಮ್ಮ ಸ್ನೇಹ ಬಳಗ ಜತೆ ಸೇರಿ ಪಾರ್ಟಿಗಳನ್ನು ಸಿನಿಮಾ ತಾರೆಯರು, ರಾಜಕಾರಣಿಗಳ ಪುತ್ರರು ಹಾಗೂ ಕಿರುತೆರೆ ಕಲಾವಿದರು ನಡೆಸಿದ್ದರು ಎಂದು ಪೆಡ್ಲರ್‌ ವಿಚಾರಣೆ ವೇಳೆ ಬಹಿರಂಗವಾಗಿದೆ. ಅದೇ ರೀತಿ ಯೋಗಿ ಹಾಗೂ ಅಯ್ಯಪ್ಪ ಅವರನ್ನು ಪ್ರಶ್ನಿಸಿದಾಗ ಸಹ ಪಾರ್ಟಿಗಳ ಬಗ್ಗೆ ಒಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಯಾಕೆ ಐಎಸ್‌ಡಿ ತನಿಖೆ?

ನಾಡಿನ ಆಂತರಿಕ ಭದ್ರತೆಗೆ ಬೆದರಿಕೆಯೊಡ್ಡುವ ಶಕ್ತಿಗಳ ವಿರುದ್ಧ ಕಣ್ಗಾವಲಿಗೆ ಐಎಸ್‌ಡಿ ರಚನೆಯಾಗಿದೆ. ರಾಜ್ಯಕ್ಕೆ ಮಾರಕವಾಗಿರುವ ಡ್ರಗ್ಸ್‌ ಜಾಲದ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವ ಅಧಿಕಾರವು ಐಎಸ್‌ಡಿ ಹೊಂದಿದೆ. ಐಎಸ್‌ಡಿ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಎಡಿಜಿಪಿ ಎಸ್‌.ಭಾಸ್ಕರ್‌ ರಾವ್‌ ಅವರು, ಮಾದಕ ವಸ್ತು ಜಾಲ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು.

ನಾನು ಕರಾವಳಿ ಸಮುದ್ರದಲ್ಲಿ ಸಿಲುಕಿರುವ ಆರು ಮಂದಿ ಮೀನುಗಾರರ ರಕ್ಷಣಾ ಕಾರ್ಯಾಚರಣೆಯಲ್ಲಿ ಬ್ಯುಸಿ ಇದ್ದೀನಿ. ನನಗೆ ಡ್ರಗ್ಸ್‌ ಕೇಸ್‌ ಬಗ್ಗೆ ಮಾಹಿತಿ ಇಲ್ಲ. ಐಎಸ್‌ಡಿ ಅಧಿಕಾರಿಗಳು ಯಾರನ್ನೂ ಬಂಧಿಸಿಲ್ಲ. ವಿಚಾರಣೆ ನಡೆಸಿರುವ ಬಗ್ಗೆಯೂ ಗೊತ್ತಿಲ್ಲ. ಈ ಬಗ್ಗೆ ಎಸ್‌ಪಿ ತನಿಖೆ ನಡೆಸುತ್ತಿದ್ದಾರೆ.

-ಎಸ್‌.ಭಾಸ್ಕರ್‌ ರಾವ್‌, ರಾಜ್ಯ ಆಂತರಿಕ ಭದ್ರತಾ ವಿಭಾಗ ಮುಖ್ಯಸ್ಥ