ಮಾಜಿ ಸಿಎಂ ಧರ್ಮಸಿಂಗ್ ಸಂಬಂಧಿ ಕೊಲೆ ಕೇಸಿನ ಆರೋಪಿ ಆತ್ಮಹತ್ಯೆ: ಮತ್ತಷ್ಟು ನಿಗೂಢ..!
ತಿರುಪತಿ ಶ್ರೀನಿವಾಸಂ ತಾಳ್ಲಪಾಕ ಕೆರೆಯ ಬಳಿ ತನ್ನ ಶರ್ಟ್‌ನಿಂದಲೇ ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಆಂಧ್ರದ ನಿವಾಸಿ| ಸಿದ್ಧಾರ್ಥ್ ಹತ್ಯೆಯ ಬಳಿಕ ಬಂಧನ ಭೀತಿ| ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ| ರೈಲಿಗೆ ತಲೆ ಕೊಟ್ಟು ಸಾಯಲು ಯತ್ನಿಸಿದ್ದವನ ರಕ್ಷಣೆ|
ಬೆಂಗಳೂರು(ಫೆ.03): ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಸಂಬಂಧಿ ಸಿದ್ಧಾರ್ಥ್ ದೇವೇಂದ್ರ ಸಿಂಗ್‌ನ ಅಪಹರಣ ಮತ್ತು ಹತ್ಯೆ ಪ್ರಕರಣದಲ್ಲಿ ಬಂಧನ ಭೀತಿಯಿಂದ ಶಂಕಿತ ಆರೋಪಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಾಫ್ಟ್‌ವೇರ್ ಎಂಜಿನಿಯರ್ ಶ್ಯಾಮ್‌ಸುಂದರ್ ರೆಡ್ಡಿ (28) ಆತ್ಮಹತ್ಯೆ ಮಾಡಿಕೊಂಡಿದ್ದು, ಆಂಧ್ರಪ್ರದೇಶದ ತಿರುಪತಿ ಸಮೀಪ ಕೊಳೆತ ಸ್ಥಿತಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಇದೇ ಪ್ರಕರಣದಲ್ಲಿ ಚಲಿಸುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದ ರೆಡ್ಡಿ ಗೆಳೆಯ ವಿನೋದ್‌ನನ್ನು ಸ್ಥಳೀಯರು ರಕ್ಷಿಸಿದ್ದರು.
ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಸಂಬಂಧಿ ಹತ್ಯೆ ಬಳಿಕ ತಿರುಪತಿಗೆ ವಿನೋದ್ ಮತ್ತು ಮೃತ ಶ್ಯಾಂಸುಂದರ್ ರೆಡ್ಡಿ ತೆರಳಿದ್ದರು. ಕೊಲೆಯಾದ ಪ್ರಕರಣದಲ್ಲಿ ಈ ಗೆಳೆಯರ ಪಾತ್ರದ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಇದರಿಂದ ಬಂಧನ ಭೀತಿಗೊಳಗಾಗಿದ್ದ ಗೆಳೆಯರು, ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದ್ದರು. ಅದರಂತೆ ಐದು ದಿನಗಳ ಹಿಂದೆಯೇ ತಿರುಪತಿ ಶ್ರೀನಿವಾಸಂ ತಾಳ್ಲಪಾಕ ಕೆರೆಯ ಬಳಿ ತನ್ನ ಶರ್ಟ್‌ನಿಂದಲೇ ನೇಣು ಬಿಗಿದುಕೊಂಡು ಶ್ಯಾಮ್‌ಸುಂದರ್ ಆತ್ಮಹತ್ಯೆ ಮಾಡಿಕೊಂಡಿದ್ದ. ಸ್ಥಳೀಯ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಸೋಮವಾರ ಆತನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಜಿ ಸಿಎಂ ಧರಂಸಿಂಗ್ ಸಂಬಂಧಿಯ ಅಪಹರಿಸಿ ಹತ್ಯೆ
ಜ.22ರಂದು ನಮಗೆ ಕರೆ ಮಾಡಿ ಹಣಕಾಸಿನ ಸಮಸ್ಯೆ ಇದೆ ಎಂದಿದ್ದ. ಇದರ ಹೊರತು ಬೇರೇನು ಮಾತನಾಡಲಿಲ್ಲ ಎಂದು ರೆಡ್ಡಿಯ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಿರುಪತಿಯ ಕಾರ್ಲಗುಂಟ ನಿವಾಸಿ ಚೆನ್ನಾರೆಡ್ಡಿ ಎಂಬವರ ಪುತ್ರ ಶ್ಯಾಂಸುಂದರ್ ರೆಡ್ಡಿ ಬಿ.ಟೆಕ್ ವ್ಯಾಸಂಗ ಮಾಡಿದ್ದ. 2014ರಲ್ಲಿ ಚೆನ್ನೈ ಮತ್ತು ಬೆಂಗಳೂರಿನಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸಿದ್ದ. ಆ ವೇಳೆ ತಿರುಪತಿಯ ಕಾರ್ಲಗುಂಟ ಮೂಲದ ಬೆಂಗಳೂರಿನಲ್ಲಿದ್ದ ಸ್ನೇಹಿತ ವಿನೋದ್ ಜತೆ ಕೆಲ ದಿನಗಳು ಆತ ನೆಲೆಸಿದ್ದ.
ಮೃತದೇಹದ ಮರಣೋತ್ತರ ಪರೀಕ್ಷೆ
ಇನ್ನೊಂದೆಡೆ ಅದೇ ದಿನ ತಿರುಪತಿ-ರೇಣಿಗುಂಟ ರೈಲ್ವೆ ಹಳಿಯಲ್ಲಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆತ್ಮಹತ್ಯೆ ಯತ್ನಿಸಿದ್ದ ವಿನೋದ್‌ನನ್ನು ಸ್ಥಳೀಯರು ರಕ್ಷಿಸಿದ್ದರು. ಈ ಘಟನೆಯಲ್ಲಿ ಆತನ ಕೈ ಮತ್ತು ಕಾಲುಗಳಿಗೆ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾನೆ. ವಿನೋದ್ ನೀಡಿದ ಮಾಹಿತಿ ಆಧರಿಸಿ ಅಮೃತಹಳ್ಳಿ ಠಾಣೆ ಪೊಲೀಸರು, ಹತ್ಯೆಗೀಡಾದ ಸಿದ್ಧಾರ್ಥ್ ಮೃತದೇಹ ಪತ್ತೆಗೆ ಹುಡುಕಾಟ ನಡೆಸಿದ್ದರು. ಕೊನೆಗೆ ನೆಲ್ಲೂರು ಜಿಲ್ಲೆಯ ರಾಪೂರು ಅರಣ್ಯ ಪ್ರದೇಶದಲ್ಲಿ ಹೂತು ಹಾಕಿದ್ದ ಸಿದ್ಧಾರ್ಥನ ಮೃತದೇಹವನ್ನು ಸ್ಥಳೀಯ ತಹಸೀಲ್ದಾರ್ ಸಮ್ಮುಖದಲ್ಲಿ ಮಂಗಳವಾರ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಸ್ತಿಗೆ ಸುಪಾರಿ ಶಂಕೆ
ಈ ಭೂ ವಿವಾದದ ಹಿನ್ನೆಲೆಯಲ್ಲಿ ಸುಪಾರಿ ನೀಡಿ ಸಿದ್ಧಾರ್ಥ್ ಹತ್ಯೆ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ. ಈ ಅನುಮಾನದ ಮೇರೆಗೆ ಮೃತನ ಕುಟುಂಬ ಸದಸ್ಯರು, ಸಂಬಂಧಿಕರು ಹಾಗೂ ಸ್ನೇಹಿತರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.