ಬೆಂಗಳೂರು(ನ.05): ಎಟಿಎಂ ಕೇಂದ್ರಗಳಿಗೆ ಹಣ ಪೂರೈಸುವ ಏಜೆನ್ಸಿ ಉದ್ಯೋಗಿಯೊಬ್ಬ 54.29 ಲಕ್ಷ ಕದ್ದು ಪರಾರಿಯಾಗಿರುವ ಘಟನೆ ಅಶೋಕ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬ್ರಿಕ್ಸ್‌ ಇಂಡಿಯಾ ಏಜೆನ್ಸಿ ನೌಕರ ಮಣಿ ಎಂಬಾತನೇ ಆರೋಪಿಯಾಗಿದ್ದು, ಎರಡು ದಿನಗಳ ಹಿಂದೆ ಅಶೋಕ ನಗರದ ಎಟಿಎಂ ಕೇಂದ್ರಗಳಿಗೆ ಹಣ ತುಂಬಿಸಲು ಬಂದಾಗ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ನಗರದಲ್ಲಿ ಐಸಿಐಸಿಐ, ಎಚ್‌ಡಿಎಫ್‌ಸಿ ಹಾಗೂ ಇಂಡಸ್‌ ಇಂಡ್‌ ಬ್ಯಾಂಕ್‌ಗಳ ಎಟಿಎಂ ಘಟಕಗಳಿಗೆ ಹಣ ತುಂಬುವ ಗುತ್ತಿಗೆಯನ್ನು ಬ್ರಿಕ್ಸ್‌ ಇಂಡಿಯಾ ಏಜೆನ್ಸಿ ಪಡೆದಿದೆ. ಈ ಏಜೆನ್ಸಿಯಲ್ಲಿ ಕಸ್ಟೋಡಿಯನ್‌ ಆಗಿದ್ದ ಮಣಿ, ನ.2ರ ಬೆಳಗ್ಗೆ 9ಕ್ಕೆ ಎಟಿಎಂಗಳಿಗೆ ಹಣ ತುಂಬಿಸಲು 54.29 ಲಕ್ಷ ಪಡೆದು ತೆರಳಿದ್ದರು. ಆದರೆ ಸಂಜೆಯಾದರೂ ಆತ ವಾಪಸ್‌ ಬಂದಿಲ್ಲ. 

ಆನ್‌ಲೈನ್‌ ಶಾಪಿಂಗ್‌ ಮಾಡೋ ಮುನ್ನ ಇರಲಿ ಎಚ್ಚರ: ಖರೀದಿ ನೆಪದಲ್ಲಿ ಕ್ಯೂಆರ್‌ ಕೋಡ್‌ ಕಳುಹಿಸಿ ವಂಚನೆ

ಮೊಬೈಲ್‌ಗೆ ಕರೆ ಮಾಡಿದಾಗಲೂ ಆತ ಸಂಪರ್ಕಕ್ಕೆ ಸಿಕ್ಕಿಲ್ಲ. ಎಟಿಎಂ ಬೂತ್‌ಗಳನ್ನು ಪರಿಶೀಲನೆ ನಡೆಸಿದಾಗ ಯಾವುದಕ್ಕೂ ಹಣ ತುಂಬದೆ ಇರುವುದು ಖಚಿತವಾಗಿದೆ ಎಂದು ಬ್ರಿಕ್ಸ್‌ ಇಂಡಿಯಾ ಪ್ರೈ.ಲಿ. ಕಂಪನಿ ಅಧಿಕಾರಿ ರಮೇಶ್‌ ಬಾಬು ದೂರು ನೀಡಿದ್ದಾರೆ. ಅದರನ್ವಯ ಕಸ್ಟೋಡಿಯನ್‌ ಮಣಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಅಶೋಕನಗರ ಪೊಲೀಸರು ತಿಳಿಸಿದ್ದಾರೆ.