ಬೆಂಗಳೂರು: ಇನ್‌ಸ್ಟಾದಲ್ಲಿ ಪತ್ನಿಯ ಚಾರಿತ್ರ್ಯ ವಧೆ ಮಾಡಿದ ಐಬಿ ಇನ್ಸ್‌ಪೆಕ್ಟರ್, ದೂರು
ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ’ ನೊಂದ ಮಹಿಳೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು(ಅ.28): ವಿಚ್ಛೇದನ ನೀಡುವಂತೆ ಇನ್‌ಸ್ಟಾಗ್ರಾಮ್ ಆ್ಯಪ್‌ನಲ್ಲಿ ಪತ್ನಿಯ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಪತ್ನಿಯ ವೈಯಕ್ತಿಕ ಫೋಟೋ ಹಾಗೂ ವಿಡಿಯೋ ಹಾಕಿ ಚಾರಿತ್ರ್ಯ ವಧೆ ಮಾಡಿ ಜೀವ ಬೆದರಿಕೆ ಹಾಕಿದ ಆರೋಪದಡಿ ದೆಹಲಿ ಇಂಟೆಲಿಜೆನ್ಸ್ ಬ್ಯೂರೋ ಇನ್‌ಸ್ಪೆಕ್ಟರ್ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಯಲಹಂಕದ ಬಾಬಾನಗರ 35 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಆಕೆಯ ಪತಿ ದೆಹಲಿ ಇಂಟೆಲಿಜೆನ್ಸ್ ಬ್ಯೂರೋ ಇನ್‌ಸ್ಪೆಕ್ಟರ್ ಶ್ರವಣಕುಮಾರ್ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗಾವಿ: ಮಹಿಳೆಯನ್ನು ಹತ್ಯೆ ಮಾಡಿ ಕಾಣೆಯಾದ ಕಥೆ ಕಟ್ಟಿ ಸಿಕ್ಕಿ ಬಿದ್ದ ಕೊಲೆಗಡುಕರು
ದೂರಿನಲ್ಲಿ ಏನಿದೆ
‘ನಾನು 2006ರಲ್ಲಿ ಶ್ರವಣಕುಮಾರ್ ಅವರನ್ನು ವಿವಾಹವಾಗಿದ್ದು, 13 ವರ್ಷದ ಮಗಳು ಇದ್ದಾಳೆ. ದಾಂಪತ್ಯದಲ್ಲಿ ಬಿರುಕು ಮೂಡಿತು. ಶ್ರವಣಕುಮಾರ್ ವಿವಾಹ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪ್ರಕರಣದಲ್ಲಿ ನ್ಯಾಯಾಲಯದಲ್ಲಿದೆ. ಆದರೂ ಶ್ರವಣಕುಮಾರ್ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ನನ್ನ ಹೆಸರನಲ್ಲಿ ನಕಲಿ ಖಾತೆ ಸೃಷ್ಟಿಸಿ ನನ್ನ ವೈಯಕ್ತಿಕ ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡಿ ಚಾರಿತ್ರ್ಯ ವಧೆ ಮಾಡಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
‘ಶ್ರವಣಕುಮಾರ್ 2023ರ ಜುಲೈನಲ್ಲಿ ಬೆಂಗಳೂರಿಗೆ ಬಂದಿದ್ದಾಗ, ನನಗೆ ಗೊತ್ತಿಲ್ಲದ ಹಾಗೆ ತಂಪುಪಾನಿಯದಲ್ಲಿ ಮದ್ಯ ಬೆರೆಸಿ ಕುಡಿಸಿದ್ದರು. ಬಳಿಕ ಇದನ್ನು ವಿಡಿಯೋ ಮಾಡಿ ನಕಲಿ ಇನ್‌ಸ್ಟಾಗ್ರಾಮ್ ಖಾತೆಗೆ ಪೋಸ್ಟ್ ಮಾಡಿದ್ದಾರೆ. ವಿಚ್ಛೇದನ ನೀಡಿದಿದ್ದಲ್ಲಿ ನಾನು, ನನ್ನ ಮಗಳು ಹಾಗೂ ನನ್ನ ತಂದೆ-ತಾಯಿಯನ್ನು ಕೊಲೆ ಮಾಡಿವುದಾಗಿ ಬೆದರಿಕೆ ಹಾಕಿದ್ದಾರೆ. ಈತನಿಂದ ನಮ್ಮ ಕುಟುಂಬಕ್ಕೆ ಜೀವ ಭಯವಿದೆ. ಹೀಗಾಗಿ ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ’ ನೊಂದ ಮಹಿಳೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.