ಚಿಕ್ಕಬಳ್ಳಾಪುರ[ಜ.28]: ಲೋಕ ಕಲ್ಯಾಣಾರ್ಥ ಎಂದು ಹೇಳಿ ನಿರಂತರ 72 ಗಂಟೆಗಳ ಕಾಲ ಜೀವಂತ ಸಮಾಧಿಯಾಗಲು ಸಿದ್ಧತೆ ನಡೆಸುತ್ತಿದ್ದ ಬಾಬಾನೊಬ್ಬನನ್ನು ಪೊಲೀಸರು ಗ್ರಾಮಸ್ಥರ ನೆರವಿನೊಂದಿಗೆ ಓಡಿಸಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಚಿಕ್ಕನಹಳ್ಳಿಯಲ್ಲಿ ಸೋಮವಾರ ನಡೆದಿದೆ.

ಮಹಾರಾಷ್ಟ್ರ ಮೂಲದ ತರನೇಯಿ ಎಂಬಾತನೇ ಹೀಗೆ ಓಡಿಸಲ್ಪಟ್ಟಬಾಬಾ. ಜೀವಸಮಾಧಿಯಿಂದ ಎದ್ದು ಬಂದೆ ಎಂದು ಹೆಚ್ಚು ಪ್ರಚಾರ ಪಡೆಯುವ ಮೂಲಕ ಖ್ಯಾತಿ ಪಡೆಯುವ ಸಲುವಾಗಿ ಆತ ಹೀಗೆ ಮಾಡಲು ಹೊರಟಿದ್ದ ಎಂದು ಹೇಳಲಾಗಿದೆ.

ಹಲವು ದಿನಗಳ ಹಿಂದೆ ಚಿಕ್ಕನಹಳ್ಳಿಗೆ ಬಂದಿದ್ದ ತರನೇಯಿ ತಾನೊಬ್ಬ ಬಾಬಾ ಎಂದು ಹೇಳಿಕೊಂಡಿದ್ದಾನೆ. ಸ್ಥಳೀಯರ ಸಹಾಯದಿಂದ ಸುಮಾರು 15 ಅಡಿ ಆಳ ಮತ್ತು 15 ಅಡಿ ಅಗಲದ ಗುಂಡಿ ಸಿದ್ಧಪಡಿಸಿದ ಆತ ಗುಂಡಿಯಲ್ಲಿ ಹಾಸಿಗೆ ಸೇರಿದಂತೆ ಇತರೆ ವ್ಯವಸ್ಥೆ ಮಾಡಿಕೊಂಡಿದ್ದಾನೆ. ಸೋಮವಾರ ಬೆಳಗ್ಗೆ 11.30ರಿಂದ 31ರ ಮಧ್ಯಾಹ್ನದವರೆಗೂ ಸಮಾಧಿಯಲ್ಲಿದ್ದು, ನಂತರ ಜೀವಂತವಾಗಿ ಹೊರ ಬರುವುದಾಗಿ ಘೋಷಿಸಿದ್ದಾನೆ. ಈತನ ಸಿದ್ಧತೆಗಳನ್ನು ಕಂಡು ಭಯಭೀತರಾದ ಸ್ಥಳೀಯರು ಪೊಲೀಸರು ಮತ್ತು ಮಾಧ್ಯಮಕ್ಕೆ ಮಾಹಿತಿ ನೀಡುವ ಜೊತೆಗೆ ಜೀವಂತ ಸಮಾಧಿಗೆ ನಡೆಸುತ್ತಿರುವ ಸಿದ್ಧತೆಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಇದರಿಂದ ವಿಷಯ ಬಹಿರಂಗವಾಗಿ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಆತ ಡೋಂಗಿಬಾಬಾ ಎಂಬುದನ್ನು ಅರಿತಿದ್ದಾರೆ. ಜೊತೆಗೆ ಸ್ಥಳೀಯರ ನೆರವು ಪಡೆದು ಜೀವಸಮಾಧಿ ಆಗದಂತೆ ಬಾಬಾನನ್ನು ಸ್ಥಳದಿಂದ ಓಡಿಸಿದ್ದಾರೆ.