ಅಸ್ಸಾಂ ಮೂಲದ ಅಖ್ತರ್‌ ಹುಸೇನ್‌ ಮತ್ತು ಸೇಲಂ ಮೂಲದ ಅಬ್ದುಲ್‌ ಮಂಡಲ್‌ ಅಲಿಯಾಸ್‌ ಜುಬಾ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ ಎನ್‌ಐಎ ಅಧಿಕಾರಿಗಳು. 

ಬೆಂಗಳೂರು(ಜ.20): ಜಾಗತಿಕ ಉಗ್ರ ಸಂಘಟನೆ ಅಲ್‌ ಖೈದಾ ಜತೆ ಸಂಪರ್ಕ ಹೊಂದಿದ್ದ ಇಬ್ಬರು ಶಂಕಿತ ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಗುರುವಾರ ನಗರದ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದೆ. ಅಸ್ಸಾಂ ಮೂಲದ ಅಖ್ತರ್‌ ಹುಸೇನ್‌ ಮತ್ತು ಸೇಲಂ ಮೂಲದ ಅಬ್ದುಲ್‌ ಮಂಡಲ್‌ ಅಲಿಯಾಸ್‌ ಜುಬಾ ವಿರುದ್ಧ ಎನ್‌ಐಎ ಅಧಿಕಾರಿಗಳು, ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ.

ಫುಡ್‌ ಡಿಲವರಿ ಬಾಯ್‌ ಸೋಗಿನಲ್ಲಿ ಬಿಟಿಎಂ ಲೇಔಟ್‌ನಲ್ಲಿ ಅಡಗಿದ್ದ ಅಸ್ಸಾಂ ಮೂಲದ ಅಖ್ತರ್‌ ಹುಸೇನ್‌ನನ್ನು 2022ರ ಜುಲೈ 24ರಂದು ಸಿಸಿಬಿ ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಈತ ನೀಡಿದ ಮಾಹಿತಿ ಮೇರೆಗೆ ತಮಿಳುನಾಡಿನ ಸೇಲಂನಲ್ಲಿ ಅಬ್ದುಲ್‌ ಮಂಡಲ್‌ ಸೆರೆ ಸಿಕ್ಕಿದ್ದ. ತನಿಖೆ ವೇಳೆ ಈ ಇಬ್ಬರು ಅಲ್‌ ಖೈದಾ ಉಗ್ರ ಸಂಘಟನೆಗೆ ಸದಸ್ಯರ ನೇಮಕಾತಿಯಲ್ಲಿ ಸಕ್ರಿಯವಾಗಿರುವ ಬಯಲಾಗಿತ್ತು. ಈ ಸಂಬಂಧ ತಿಲಕನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೆಚ್ಚಿನ ತನಿಖಾಗಿ ಎನ್‌ಐಎ ಅಧಿಕಾರಿಗಳು ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿ ತನಿಖೆಗೆ ಇಳಿದಿದ್ದರು.

ಬೆಂಗ್ಳೂರಲ್ಲಿ ದರೋಡೆ: 4 ಉಗ್ರರಿಗೆ 7 ವರ್ಷ ಜೈಲು

ಈ ಇಬ್ಬರು ಶಂಕಿಯ ಉಗ್ರರು ಅಲ್‌ ಖೈದಾ ಸಂಘಟನೆ ಸೇರ್ಪಡೆಗಾಗಿ ಅಪ್ಘಾನಿಸ್ತಾನಕ್ಕೆ ತೆರಳಲು ಸಜ್ಜಾಗಿದ್ದರು. ಈ ನಿಟ್ಟಿನಲ್ಲಿ ಸಾಮಾಜಿ ಜಾಲತಾಣದಲ್ಲಿ ಅಲ್‌ ಖೈದಾ ಉಗ್ರರ ಸಂಪರ್ಕ ಸಾಧಿಸಿ, ಚಾಟ್‌ ಮಾಡುತ್ತಿದ್ದರು. ಜಾಲತಾಣದಲ್ಲಿ ಜಿಹಾದ್‌ ಬಗ್ಗೆ ಪೋಸ್ಟ್‌ ಹಾಕುತ್ತಿದ್ದರು. ಜಿಹಾದ್‌ನಲ್ಲಿ ಭಾಗಿಯಾಗುವಂತೆ ಸಮುದಾಯದ ಯುವಕರನ್ನು ಹುರಿದುಂಬಿಸುತ್ತಿದ್ದರು ಎಂಬುದು ಎನ್‌ಐಎ ತನಿಖೆ ವೇಳೆ ಬೆಳಕಿಗೆ ಬಂದಿದೆ.