ಬೆಂಗಳೂರು: ನಿಂತಿದ್ದ ಆಟೋಗೆ ಬೈಕ್ ಡಿಕ್ಕಿ: ಸೋದರ ಮಾವ-ಸೊಸೆ ಸಾವು!
ನೈಸ್ ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಸರಕು ಸಾಗಾಣಿಕೆ ಆಟೋಗೆ ಹಿಂದಿನಿಂದ ಸ್ಕೂಟರ್ ಡಿಕ್ಕಿಯಾದ ಪರಿಣಾಮ ಸೋದರ ಮಾವ-ಸೊಸೆ ಸಾವನ್ನಪ್ಪಿರುವ ದಾರುಣ ಘಟನೆ ತಲಘಟ್ಟಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು (ಸೆ.8) : ನೈಸ್ ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಸರಕು ಸಾಗಾಣಿಕೆ ಆಟೋಗೆ ಹಿಂದಿನಿಂದ ಸ್ಕೂಟರ್ ಡಿಕ್ಕಿಯಾದ ಪರಿಣಾಮ ಸೋದರ ಮಾವ-ಸೊಸೆ ಸಾವನ್ನಪ್ಪಿರುವ ದಾರುಣ ಘಟನೆ ತಲಘಟ್ಟಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನಕಪುರ ರಸ್ತೆಯ ತಾತಗುಣಿ ನಿವಾಸಿಗಳಾದ ಸಿ.ಮಹೇಶ್ (42) ಹಾಗೂ ಅವರ ಸೋದರಿಯ ಪುತ್ರಿ ಅಭಿಲಾಷಾ (26) ಮೃತ ದುರ್ದೈವಿಗಳು. ಮೈಸೂರು ರಸ್ತೆ ಕಡೆಯಿಂದ ತಮ್ಮ ಮನೆಗೆ ಸ್ಕೂಟರ್‌ನಲ್ಲಿ ಸೋದರಿ ಪುತ್ರಿ ಜತೆ ರಾತ್ರಿ 7.30ರ ಸುಮಾರಿಗೆ ಮಹೇಶ್ ತೆರಳುವಾಗ ಮಾರ್ಗ ಮಧ್ಯೆ ಚಿಕ್ಕೇಗೌಡನಪಾಳ್ಯ ಸಮೀಪ ಈ ಘಟನೆ ನಡೆದಿದೆ.
ನಗರದ ಗಾರ್ಮೆಂಟ್ಸ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಕೊಳೊತ್ತೂರು ಗ್ರಾಮದ ಮೃತ ಮಹೇಶ್ ಅವರು, ತಮ್ಮ ಕುಟುಂಬದ ಜತೆ ತಾತುಗುಣಿಯಲ್ಲಿ ನೆಲೆಸಿದ್ದರು. ಬನ್ನೂರಿನ ಹೆಗ್ಗೂರಿನ ನುಗ್ಗಹಳ್ಳಿ ಕೊಪ್ಪಲು ಗ್ರಾಮದ ಅಭಿಲಾಷಾ ಸಹ ನಗರದಲ್ಲೇ ಕೆಲಸದಲ್ಲಿದ್ದರು. ಮೈಸೂರು ರಸ್ತೆ ಕಡೆಯಿಂದ ನೈಸ್ ರಸ್ತೆ ಮಾರ್ಗವಾಗಿ ಇಬ್ಬರು ತಾತಗುಣಿಗೆ ಹೊರಟ್ಟಿದ್ದರು. ಆ ವೇಳೆ ಚಿಕ್ಕೇಗೌಡನಪಾಳ್ಯದ ಬಳಿ ರಸ್ತೆ ಬದಿ ನಿಂತಿದ್ದ ಸರಕು ಸಾಗಾಣಿಕೆ ವಾಹನಕ್ಕೆ ಹಿಂದಿನಿಂದ ಸ್ಕೂಟರ್ ಡಿಕ್ಕಿಯಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸೋದರ ಮಾವ ಹಾಗೂ ಸೊಸೆಯನ್ನು ಸಮೀಪದ ಆಸ್ಪತ್ರೆಗೆ ಸಾರ್ವಜನಿಕರು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಬ್ಬರು ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ನಶೆಯಲ್ಲಿ ಆಟೋ ಚಾಲಕನ ಹತ್ಯೆಗೈದ ಗೆಳೆಯರು ಪರಾರಿ
ಬೆಂಗಳೂರು: ಕುಡಿದ ಅಮಲಿನಲ್ಲಿ ಆಟೋ ಚಾಲಕನೊಬ್ಬನನ್ನು ಆತನ ಸ್ನೇಹಿತರೇ ಹೊಡೆದು ಹತ್ಯೆಗೈದು ಪರಾರಿ ಆಗಿರುವ ಘಟನೆ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದ ಸುರೇಶ್ (35) ಹತ್ಯೆಯಾದ ದುರ್ದೈವಿ. ಉಪ್ಪಾರಪೇಟೆ ಸಮೀಪದ ಬಳೇಪೇಟೆ ಮುಖ್ಯರಸ್ತೆಯಲ್ಲಿ ಬುಧವಾರ ರಾತ್ರಿ ತನ್ನ ಸ್ನೇಹಿತರ ಜತೆ ಸುರೇಶ್ ಪಾರ್ಟಿ ಮಾಡಿದ್ದಾನೆ. ಆ ವೇಳೆ ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಗೆಳೆಯರ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಸ್ನೇಹಿತರು ಸುರೇಶ್ ಮೇಲೆ ಹಲ್ಲೆ ನಡೆಸಿ ಹತ್ಯೆಗೈದು ಪರಾರಿಯಾಗಿದ್ದಾರೆ. ಬಳೇಪೇಟೆ ಮುಖ್ಯರಸ್ತೆಯಲ್ಲಿ ಗುರುವಾರ ಬೆಳಗ್ಗೆ ಮೃತದೇಹ ಕಂಡು ಸಾರ್ವಜನಿಕರು ಪೊಲೀಸರಿಗೆ ತಿಳಿಸಿದ್ದಾರೆ.
ಹಲವು ವರ್ಷಗಳಿಂದ ನಗರದಲ್ಲಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ಮೃತ ಸುರೇಶ್, ಎಲ್ಲೂ ಒಂದೆಡೆ ನೆಲೆ ನಿಂತಿರಲಿಲ್ಲ. ಆಟೋದಲ್ಲೇ ಆತ ಮಲಗುತ್ತಿದ್ದ. ಕೃತ್ಯ ಎಸಗಿರುವ ಆರೋಪಿಗಳ ಪತ್ತೆಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರಿನಲ್ಲಿ ಬಂದು ಗುದ್ದೋಡಿದ ಗಿಚ್ಚಿ ಗಿಲಿಗಿಲಿ ಚಂದ್ರಪ್ರಭ: ಮಾನವೀಯತೆಗೂ ಕಾರು ನಿಲ್ಲಿಸದೇ ಪರಾರಿ