ಬೀದರ್‌ನ ಹುಮನಾಬಾದ್‌ನಲ್ಲಿ ಸಂಕ್ರಾಂತಿ ಹಬ್ಬದಂದು ಗಾಳಿಪಟ ಹಾರಿಸಲು ಹೋಗಿದ್ದ 19 ವರ್ಷದ ಯುವಕ, ಕಟ್ಟಡದಿಂದ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾನೆ. ಕಡಿದು ಹೋಗುತ್ತಿದ್ದ ಗಾಳಿಪಟವನ್ನು ಹಿಡಿಯಲು ಯತ್ನಿಸಿದಾಗ ಈ ದುರ್ಘಟನೆ ಸಂಭವಿಸಿದ್ದು, ಹಬ್ಬದ ದಿನವೇ ಯುವಕನ ಕುಟುಂಬದಲ್ಲಿ ಶೋಕ ಮನೆಮಾಡಿದೆ.
ಬೀದರ್ ಜಿಲ್ಲೆಯ ಹುಮನಾಬಾದ್ ಪಟ್ಟಣದಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮವಿದ್ದಾಗಲೇ ಆಘಾತಕಾರಿ ಘಟನೆಯೊಂದು ನಡೆದಿದೆ. ಸ್ನೇಹಿತರೊಂದಿಗೆ ಸೇರಿ ಗಾಳಿಪಟ ಹಾರಿಸಲು ಹೋಗಿದ್ದ 19 ವರ್ಷದ ಯುವಕ ಶಶಿಕುಮಾರ್, ಕಾಲೇಜು ಕಟ್ಟಡದ ಮೇಲಿಂದ ಆಕಸ್ಮಿಕವಾಗಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ. ಹಬ್ಬದ ದಿನವೇ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಗಾಳಿಪಟ ಹಿಡಿಯಲು ಹೋಗಿ ಜಾರಿದ ಕಾಲು
ಹುಮನಾಬಾದ್ ಪಟ್ಟಣದ ವಾಂಜರಿ ಬಡಾವಣೆಯ ನಿವಾಸಿಯಾದ ಶಶಿಕುಮಾರ್, ಹಬ್ಬದ ಪ್ರಯುಕ್ತ ತನ್ನ ಸ್ನೇಹಿತರೊಡನೆ ಸ್ಥಳೀಯ ಕಾಲೇಜು ಕಟ್ಟಡದ ಮೇಲೆ ಗಾಳಿಪಟ ಹಾರಿಸಲು ತೆರಳಿದ್ದನು. ಈ ವೇಳೆ ಆಕಾಶದಲ್ಲಿ ಹಾರುತ್ತಿದ್ದ ಗಾಳಿಪಟವೊಂದು ದಾರದಿಂದ ಕಡಿದು ಹೋಗುತ್ತಿತ್ತು. ಅದನ್ನು ಹಿಡಿಯಬೇಕೆಂಬ ಅವಸರದಲ್ಲಿ ಶಶಿಕುಮಾರ್ ಓಡುತ್ತಾ ಹೋಗಿ ಆಯಾ ತಪ್ಪಿ ಕಟ್ಟಡದ ಮೇಲಿಂದ ಕೆಳಗೆ ಬಿದ್ದಿದ್ದಾನೆ ಎನ್ನಲಾಗಿದೆ.
ಸ್ಥಳದಲ್ಲೇ ಕೊನೆಯುಸಿರೆಳೆದ ಶಶಿಕುಮಾರ್
ಕಟ್ಟಡದ ಮೇಲಿಂದ ಕೆಳಗೆ ಬಿದ್ದ ರಭಸಕ್ಕೆ ಶಶಿಕುಮಾರ್ ತಲೆಗೆ ಗಂಭೀರವಾದ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವ ಸಂಭವಿಸಿದೆ. ಸ್ನೇಹಿತರು ಮತ್ತು ಸ್ಥಳೀಯರು ನೆರವಿಗೆ ಧಾವಿಸುವಷ್ಟರಲ್ಲೇ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯ ಸಂಬಂಧ ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


