ಬೆಂಗಳೂರಿನ ಹೊರವಲಯದಲ್ಲಿ ಯುವಕನೊಬ್ಬ ಆನ್‌ಲೈನ್ ಗೇಮಿಂಗ್‌ಗೆ ಸಂಬಂಧಿಸಿದ ಸಾಲದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆನ್‌ಲೈನ್ ಗೇಮ್‌ಗಳಲ್ಲಿ ಹಣ ಕಳೆದುಕೊಂಡು ಸಾಲಕ್ಕೆ ಸಿಲುಕಿದ್ದ ಯುವಕನಿಗೆ ಸಾಲಗಾರರ ಕಾಟ ಹೆಚ್ಚಾಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಬೆಂಗಳೂರು (ಡಿ.04): ಶಾಲೆ, ಕಾಲೇಜು ಓದುವ ಮಕ್ಕಳಿಗೆ ಸ್ವಂತವಾಗಿ ಮೊಬೈಲ್ ಫೋನ್ ಕೊಡಿಸಿದರೆ ಆನ್‌ಲೈನ್ ಗೇಮಿಂಗ್‌ಗೆ ವ್ಯವಸನರಾಗುತ್ತಾರೆ ಎಂಬ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿವೆ. ಇಷ್ಟಾದರೂ ಎಚ್ಚೆತ್ತುಕೊಳ್ಳದ ಯುವಕ ಪ್ರವೀಣ ಆನ್‌ಲೈನ್ ಗೇಮಿಂಗ್‌ಗೆ ಬಲಿ ಆಗಿದ್ದಾನೆ.

ಬೆಂಗಳೂರಿನ ಹೊರ ವಲಯ ಕೆ.ಆರ್. ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಯುವಕ ಪ್ರವೀಣ (19) ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆ ನಡೆದು 10 ದಿನಗಳ ಕಳೆದಿದ್ದು, ಅವರ ಪಾಲಕರು ಕೆ.ಆರ್. ಪುರಂ ಠಾಣೆಗೆ ಬಂದು ದೂರು ನೀಡಿದ್ದಾರೆ. ಅವರ ದೂರನ್ನು ಆಧರಿಸಿ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು, ಪ್ರಕರಣದ ತನಿಖೆ ಮಾಡಿದ್ದಾರೆ. ಈ ವೇಳೆ ಪೊಲೀಸರಿಗೆ ಪ್ರವೀಣ ಆನ್‌ಲೈನ್ ಗೇಮಿಂಗ್‌ಗೆ ಬಲಿ ಆಗಿರುವುದು ಬೆಳಕಿಗೆ ಬಂದಿದೆ.

ಯುವ ಪ್ರವೀಣ ಆನ್‌ಲೈನ್ ಗೇಮಿಂಗ್ ಹುಚ್ಚಿಗೆ ಬಿದ್ದು ಕಾಲೇಜಿಗೂ ಹೋಗದೇ ಮನೆಯಲ್ಲಿರುತ್ತಿದ್ದನು. ತಂದೆ-ತಾಯಿ ಹಾಗೂ ಮನೆಯವರು ಕೆಲಸಕ್ಕೆ ಹೋದ ನಂತರ ಮನೆಯ ಕೋಣೆಯಲ್ಲಿ ಕುಳಿತು ಆನ್‌ಲೈನ್ ಗೇಮ್ ಆಡುತ್ತಿದ್ದನು. ತನ್ನ ಆನ್ ಲೈನ್ ಗೇಮ್ ಆಡಲು ಸಬ್‌ಸ್ಕ್ರಿಪ್ಸನ್, ಆಟದ ಎಂಟ್ರಿ ಪಾವತಿ ಹಾಗೂ ಆಟದ ಮೇಲೆ ಕಟ್ಟುವ ಬಾಜಿ ಹಣಕ್ಕಾಗಿ ಸ್ನೇಹಿತರು ಹಾಗೂ ಆನ್‌ಲೈನ್‌ಗಳ ಆಪ್‌ಗಳನ್ನು ಸಾಲ ಮಾಡಿಕೊಂಡಿದ್ದಾನೆ. ನಂತರ, ಸಾಲ ತೀರಿಸುವಂತೆ ಪ್ರವೀಣನಿಗೆ ಸಾಲಗಾರರ ಕಾಟ ಹೆಚ್ಚಾಗಿತ್ತು.

ಇದನ್ನೂ ಓದಿ: ಕಾಂಗ್ರೆಸ್ ಗುಲಾಮಗಿರಿಯಿಂದಾಗಿ ಒಬ್ಬ ವಿಧಾನಸೌಧ ನಮ್ದು ಅಂದ್ರೆ, ಇನ್ನೊಬ್ಬ ಸಂಸತ್ ವಕ್ಫ್ ಆಸ್ತಿ ಅಂತಾನೆ; ಸಿಟಿ ರವಿ

ಮನೆಯವರಿಗೆ ಗೊತ್ತಿಲ್ಲದಂತೆ ಸಾಲ ಮಾಡಿಕೊಂಡಿದ್ದ ಪ್ರವೀಣ ತಾನು ಕಳೆದುಕೊಂಡ ಹಣವನ್ನು ಪುನಃ ಆನ್‌ಲೈನ್ ಗೇಮಿಂಗ್‌ನಿಂದಲೇ ವಾಪಸ್ ಪಡೆದುಕೊಳ್ಳಬೇಕು ಎಂದು ಪುನಃ ಸಾಲ ಮಾಡಿ ಹಣ ಹೂಡಿಕೆ ಮಾಡಿ ಆನ್‌ಲೈನ್ ಗೇಮ್ ಆಡಿದ್ದಾನೆ. ಇದರಿಂದ ಸಾಲ ಪ್ರಮಾಣ ತೀರ ಹೆಚ್ಚಳವಾಗಿತ್ತು. ಇದಾದ ನಂತರ ಸಾಲ‌ ನೀಡಿದವರು ಬ್ಲಾಕ್ ಮೇಲ್ ಮಾಡಲು ಮುಂದಾಗಿದ್ದರಂತೆ. ಜೊತೆಗೆ, ನೀನು ಬೇರೆ ಕಡೆ ಎಲ್ಲಾದರೂ ಸಾಲಕ್ಕೆ ಹಣವನ್ನು ತಂದು ಆನ್‌ಲೈನ್ ಗೇಮಿನಲ್ಲಿ ಆಡುವಂತೆ ಮಾಡುತ್ತಿದ್ದರು. ಆತ ಗೆಲ್ಲುತ್ತಿದ್ದ ದುಡ್ಡನ್ನು ತಾವು ತೆಗೆದುಕೊಳ್ತಿದ್ದರಂತೆ. ಇದೇ ಕಾರಣಕ್ಕೆ ಬೇಸೆತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮೃತ ಪ್ರವೀಣದ ಪಾಲಕರು ಆರೋಪ ಮಾಡಿದ್ದಾರೆ.