Bengaluru Murder Case: ರೌಡಿ ಜೊತೆ ಅಕ್ರಮ ಸಂಬಂಧ, ಪುತ್ರನೆದುರೇ ಪತ್ನಿಯ ಕೊಲೆ, ಕೊನೆಗೂ ಪತಿ ಅರೆಸ್ಟ್!
* ಅರ್ಚನಾ ರೆಡ್ಡಿ ಕೊಲೆ ಆರೋಪಿಗಳ ಬಂಧನ
* ಎರಡನೇ ಪತಿ ನವೀನ್ ಹಾಗೂ ಅನೂಪ್ ನನ್ನು ಬಂಧಿಸಿದ ಎಲೆಕ್ಟ್ರಾನಿಕ್ ಸಿಟಿ ಪೋಲಿಸರು.
* ಹೊಸೂರು ರಸ್ತೆಯ ಹೊಸರೋಡ್ ಜಂಕ್ಷನ್ ನಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಗಳು
ಬೆಂಗಳೂರು(ಡಿ.29): ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಗನ ಸಮ್ಮುಖದಲ್ಲೇ ತನ್ನ ಎರಡನೇ ಪತ್ನಿಯನ್ನು ಸಹಚರರ ಜತೆ ಸೇರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದ ಘಟನೆ ಸಿಲಿಕಾನ್ ಸಿಟಿಯನ್ನು ಬೆಚ್ಚಿ ಬೀಳಿಸಿತ್ತು. ಆದರೀಗ ಈ ಘಟನೆಗೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೌದು ಬೆಳ್ಳಂದೂರು ನಿವಾಸಿ ವಿ.ಅರ್ಚನಾ ರೆಡ್ಡಿ ಯನ್ನು ಕೊಲೆಗೈದು ಪರಾರಿಯಾಗಿದ್ದ ಮೃತಳ ಎರಡನೇ ಪತಿ ನವೀನ್ ಹಾಗೂ ಆತನ ಸಹಚರರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಪೊಲೀಸರ ಹುಡುಕಾಟಕ್ಕೆ ಭಾಗಶಃ ಯಶಸ್ಸು ಸಿಕ್ಕಿದ್ದು, ಪ್ರಮುಖ ಆರೋಪಿ ನವೀನ್ ಹಾಗೂ ಅನೂಪ್ ಎಂಬವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಇತರೆ ಕೊಲೆ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಘಟನೆ ಹಿನ್ನೆಲೆ
ರಿಯಲ್ ಎಸ್ಟೇಟ್ ಉದ್ಯಮಿ ಪುತ್ರಿ ಅರ್ಚನಾ, ಎರಡು ತಿಂಗಳಿಂದ ತಮ್ಮ ಇಬ್ಬರು ಮಕ್ಕಳ ಜತೆ ಬೆಳ್ಳಂದೂರಿನಲ್ಲಿ ನೆಲೆಸಿದ್ದರು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮೊದಲ ಪತಿಗೆ ವಿವಾಹ ವಿಚ್ಛೇದನ ನೀಡಿದ್ದ ಅವರು, ನಾಲ್ಕು ವರ್ಷಗಳ ಹಿಂದೆ ನವೀನ್ ಜತೆ ಎರಡನೇ ವಿವಾಹವಾಗಿದ್ದರು. ಮೊದಲ ಮದುವೆಯಲ್ಲಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಎರಡನೇ ಮದುವೆ ಬಳಿಕ ಜಿಗಣಿಯಲ್ಲಿ ಪತಿ ಜತೆ ಅರ್ಚನಾ ನೆಲೆಸಿದ್ದರು. ಆರಂಭದಲ್ಲಿ ಇಬ್ಬರು ಅನ್ಯೋನ್ಯವಾಗಿಯೇ ಇದ್ದರು. ಆದರೆ ಇತ್ತೀಚೆಗೆ ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪ ಮೂಡಿತ್ತು. ಇದರಿಂದ ಬೇಸತ್ತ ಅವರು, ನವೀನ್‌ನಿಂದ ಪ್ರತ್ಯೇಕವಾಗಿ ಬೆಳ್ಳಂದೂರಿನ ಫ್ಲ್ಯಾಟ್ ಬಾಡಿಗೆ ಪಡೆದು ನೆಲೆಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಗನ ಎದುರೇ ತಾಯಿ ಕೊಲೆ
ಪತ್ನಿ ದೂರವಾಗಿದ್ದಕ್ಕೆ ಕೆರಳಿದ ನವೀನ್, ಹಣಕಾಸು ವಿಚಾರವಾಗಿ ಅರ್ಚನಾ ಮೇಲೆ ಹಗೆತನ ಸಾಧಿಸುತ್ತಿದ್ದ. ಇದೇ ವಿಚಾರವಾಗಿ ಎರಡ್ಮೂರು ಬಾರಿ ಪತ್ನಿ ಮೇಲೆ ಗಲಾಟೆ ಕೂಡಾ ಮಾಡಿದ್ದ. ಈ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದವು. ಬಳಿಕ ರಾಜಿ ಸಂಧಾನ ನಡೆದು ಜಗಳ ಬಗೆಹರಿದಿತ್ತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪತ್ನಿ ಕೊಲೆಗೆ ಆತ ನಿರ್ಧರಿಸಿದ್ದ.
ಅಂತೆಯೇ ಜಿಗಣಿಯಿಂದ ಬೆಳ್ಳಂದೂರಿಗೆ ಕಾರಿನಲ್ಲಿ ತನ್ನ ಮಗ ಹಾಗೂ ಚಾಲಕ ಸೇರಿ ನಾಲ್ವರ ಜತೆ ಅರ್ಚನಾ ಮರಳುತ್ತಿದ್ದರು. ಆಗ ಆಕೆಯನ್ನು ಎಲೆಕ್ಟ್ರಾನಿಕ್ ಸಿಟಿ ಸಮೀಪದ ಹೊಸ ರೋಡ್ ಜಂಕ್ಷನ್‌ನಲ್ಲಿ ಅಡ್ಡಗಟ್ಟಿದ್ದ ನವೀನ್, ಬಳಿಕ ಪತ್ನಿ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಈ ಅನಿರೀಕ್ಷಿತ ದಾಳಿಯಿಂದ ಎಚ್ಚೆತ್ತುಕೊಳ್ಳುವ ಮುನ್ನವೇ ಅರ್ಚನಾ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಆಕೆಯನ್ನು ಮೃತಳ ಪುತ್ರ ಹಾಗೂ ಕಾರು ಚಾಲಕ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ವಿವರಿಸಿದ್ದಾರೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.