ಕೌಟುಂಬಿಕ ಕಲಹದಿಂದ ಮನನೊಂದು ಸಾಫ್ಟ್‌ವೇರ್‌ ಇಂಜಿನಿಯರ್‌ ಮೈ ಮೇಲೆ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಜಭವನದ ಬಳಿ ನಡೆದಿದೆ. ಹೆಬ್ಬಾಳ ನಿವಾಸಿ ಜುಹೈಲ್‌ ಅಹಮದ್‌ (26) ಆತ್ಮಹತ್ಯೆಗೆ ಯತ್ನಿಸಿದವರು. 

ಬೆಂಗಳೂರು (ಏ.14): ಕೌಟುಂಬಿಕ ಕಲಹದಿಂದ ಮನನೊಂದು ಸಾಫ್ಟ್‌ವೇರ್‌ ಇಂಜಿನಿಯರ್‌ ಮೈ ಮೇಲೆ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಜಭವನದ ಬಳಿ ನಡೆದಿದೆ. ಹೆಬ್ಬಾಳ ನಿವಾಸಿ ಜುಹೈಲ್‌ ಅಹಮದ್‌ (26) ಆತ್ಮಹತ್ಯೆಗೆ ಯತ್ನಿಸಿದವರು. ಭಾನುವಾರ ಸಂಜೆ ಸುಮಾರು 4 ಗಂಟೆಗೆ ಈ ಘಟನೆ ನಡೆದಿದೆ. ಸ್ಥಳದಲ್ಲಿದ್ದ ಪತ್ರಕರ್ತರ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಇದರಿಂದ ಕೆಲ ಕಾಲ ರಾಜಭವನದ ಬಳಿ ಹೈಡ್ರಾಮಾ ನಡೆಯಿತು. ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿರುವ ಜುಹೈಲ್‌, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು 6 ತಿಂಗಳ ಹಿಂದೆಯಷ್ಟೇ ಚಿಕ್ಕಬಳ್ಳಾಪುರ ಮೂಲದ ಯುವತಿಯನ್ನು ಮದುವೆಯಾಗಿದ್ದರು. 

ದಾಂಪತ್ಯದಲ್ಲಿ ಬಿರುಕು ಮೂಡಿದ್ದರಿಂದ ದಂಪತಿ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ಇತ್ತೀಚೆಗೆ ಪತ್ನಿ ಚಿಕ್ಕಬಳ್ಳಾಪುರ ಪೊಲೀಸ್‌ ಠಾಣೆಯಲ್ಲಿ ಜುಹೈಲ್‌ ವಿರುದ್ಧ ಕೌಟುಂಬಿಕ ದೌರ್ಜನ್ಯ ಆರೋಪದಡಿ ದೂರು ನೀಡಿದ್ದರು. ಹೀಗಾಗಿ ಪೊಲೀಸರು ಜುಹೈಲ್‌ನನ್ನು ಕರೆಸಿ ವಿಚಾರಣೆ ನಡೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದರು ಎನ್ನಲಾಗಿದೆ. ಇದರಿಂದ ನೊಂದಿದ್ದ ಜುಹೈಲ್‌, ಭಾನುವಾರ ಮಧ್ಯಾಹ್ನ ರಾಜಭವನದ ಬಳಿಗೆ ಬಂದಿದ್ದು, ಬ್ಯಾಗ್‌ನಲ್ಲಿ ತಂದಿದ್ದ ಬಾಟಲ್‌ ತೆಗೆದು ಮೈ ಮೇಲೆ ಪೆಟ್ರೋಲ್‌ ಸುರಿದುಕೊಂಡಿದ್ದಾರೆ. ಇದೇ ಸಮಯಕ್ಕೆ ಸ್ಥಳದಲ್ಲಿದ್ದ ಪತ್ರಕರ್ತರು ಜುಹೈಲ್‌ನನ್ನು ಹಿಡಿದು ಪೆಟ್ರೋಲ್‌ ಬಾಟಲ್‌ ಕಸಿದುಕೊಂಡು ಅನಾಹುತ ತಪ್ಪಿಸಿದ್ದಾರೆ.

ಭೋವಿ ನಿಗಮದ ಮಾಜಿ ಎಂಡಿ ಲೀಲಾವತಿ ಅರೆಸ್ಟ್‌: ವಿಚಾರಣೆ ಬಳಿಕ ಬಂಧಿಸಿದ ಇ.ಡಿ. ತಂಡ

ಪತ್ನಿ ವಿರುದ್ಧ ಕಿರುಕುಳ, ಬೆದರಿಕೆ ಆರೋಪ: ಪತ್ನಿಯಿಂದ ನನಗೆ ಬೆದರಿಕೆ ಇದ್ದು, ಪತ್ನಿ ನನಗೆ ಕಿರುಕುಳ ನೀಡುತ್ತಿದ್ದಾಳೆ. ನನ್ನ ವಿರುದ್ಧ ಸುಳ್ಳು ದೂರು ನೀಡಿದ್ದಾಳೆ. ಚಿಕ್ಕಬಳ್ಳಾಪುರ ಪೊಲೀಸರು ಸಹ ಪತ್ನಿಯ ಪರ ಇದ್ದಾರೆ ಎಂದು ಜುಹೈಲ್‌ ಆರೋಪಿಸಿದ್ದು, ನನಗೆ ನ್ಯಾಯಬೇಕು ಎಂದಿದ್ದಾರೆ. ಜುಹೈಲ್‌ ಬಳಿ ಡೆತ್‌ ನೋಟ್‌ ಮಾದರಿಯಲ್ಲಿ ಹಲವು ಪುಟಗಳು ಪತ್ತೆಯಾಗಿವೆ. ಅದರಲ್ಲಿ ಪತ್ನಿಯ ಕಿರುಕುಳದ ಬಗ್ಗೆ ಬರೆದುಕೊಂಡಿದ್ದಾರೆ. ನನ್ನ ಬದುಕು ತೊಂದರೆಯಲ್ಲಿದೆ. ಈ ಜೀವನ ಇಲ್ಲಿಗೆ ಕೊನೆ ಮಾಡಿಕೊಳ್ಳುತ್ತಿರುವೆ. ಸಾರಿ ಮಮ್ಮಿ-ಡ್ಯಾಡಿ ಎಂದು ಬರೆದುಕೊಂಡಿರುವುದು ಪತ್ತೆಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಜುಹೈಲ್‌ನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.