3 ದಿನದಲ್ಲಿ ವಿಚಾರಣೆಗೆ ಬನ್ನಿ: ಅತುಲ್ ಸುಭಾಷ್ ಪತ್ನಿಗೆ ನೋಟಿಸ್
ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿಂತೆ ಬೆಂಗಳೂರಿನ ನಗರ ಪೊಲೀಸರು ಶುಕ್ರವಾರ ಅತುಲ್ ಪತ್ನಿ ನಿಕಿತಾ ಸಿಂಘಾನಿಯಾಗೆ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗಲು 3 ದಿನಗಳ ಗಡುವು ನೀಡಿದ್ದಾರೆ.
ಜೌನ್‌ಪುರ (ಉ.ಪ್ರ.) (ಡಿ.14): ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿಂತೆ ಬೆಂಗಳೂರಿನ ನಗರ ಪೊಲೀಸರು ಶುಕ್ರವಾರ ಅತುಲ್ ಪತ್ನಿ ನಿಕಿತಾ ಸಿಂಘಾನಿಯಾಗೆ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗಲು 3 ದಿನಗಳ ಗಡುವು ನೀಡಿದ್ದಾರೆ. ಸಬ್ ಇನ್ಸ್‌ಪೆಕ್ಟರ್ ಸಂಜಿತ್ ಕುಮಾರ್ ನೇತೃತ್ವದ ಬೆಂಗಳೂರು ನಗರ ಪೊಲೀಸರ ನಾಲ್ವರು ತಂಡವು ಶುಕ್ರವಾರ ಉತ್ತರ ಪ್ರದೇಶದ ಜೌನ್‌ಪುರ ನಗರದ ಖೋವಾ ಮಂಡಿ ಪ್ರದೇಶದಲ್ಲಿರುವ ಸಿಂಘಾನಿಯಾ ಅವರ ನಿವಾಸಕ್ಕೆ ತೆರಳಿದೆ. ಈ ವೇಳೆ ಮನೆಯಲ್ಲಿ ಯಾರು ಇಲ್ಲದ ಕಾರಣ ಅವರ ಮನೆಗೆ ನೋಟಿಸ್ ಅಂಟಿಸಿದೆ.
ಪೊಲೀಸರು ನೀಡಿರುವ ನೋಟಿಸಿನ ಪ್ರಕಾರ, ಅತುಲ್ ಸುಭಾಷ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸ್ ಠಾಣೆಯ ತನಿಖಾಧಿಕಾರಿಯ ಮುಂದೆ ಮೂರು ದಿನಗಳೊಳಗೆ ವಿಚಾರಣೆಗೆ ಹಾಜರಾಗುವಂತೆ ನಿಕಿತಾಗೆ ಸೂಚಿಸಿದ್ದಾರೆ. ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ನಿಕಿತಾ ತಾಯಿ ನಿಶಾ ಸಿಂಘಾನಿಯಾ, ಚಿಕ್ಕಪ್ಪ ಸುಶೀಲ್ ಸಿಂಘಾನಿಯಾ, ಸಹೋದರ ಅನುರಾಗ್ ಸಿಂಘಾನಿಯಾ ಹೆಸರು ಉಲ್ಲೇಖಗೊಂಡಿದ್ದರೂ, ಪೊಲೀಸರು ಯಾವುದೇ ನೋಟಿಸ್ ನೀಡಿಲ್ಲ.
ಜೌನ್‌ಪುರ ಪೊಲೀಸರಿಂದ ಸಹಕಾರ: ಬೆಂಗಳೂರಿನಲ್ಲಿ ಟೆಕಿ ಅತುಲ್ ಸುಭಾಷ್ ಅವರ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಬೆಂಗಳೂರು ಮಾರತಹಳ್ಳಿ ಪೊಲೀಸರು, ಅತುಲ್ ಪತ್ನಿಯ ತವರೂರು ಉತ್ತರ ಪ್ರದೇಶದ ಜೌನ್‌ಪುರಕ್ಕೆ ಗುರುವಾರ ಬಂದಿಳಿದಿದ್ದಾರೆ. ಇದೇ ವೇಳೆ, ತಮ್ಮನ್ನು ಬೆಂಗಳೂರು ಪೊಲೀಸರು ಸಂಪರ್ಕಿಸಿದ್ದಾರೆ ಹಾಗೂ ತನಿಖೆಗೆ ಸಹಕಾರ ಕೋರಿದ್ದಾರೆ ಎಂದು ಜೌನ್‌ಪುರದ ಕೋಟ್ವಾಲಿ ಪೊಲೀಸ್ ಠಾಣಾಧಿಕಾರಿ ಮಿಥಿಲೇಶ್ ಮಿಶ್ರಾ ಹೇಳಿದ್ದಾರೆ.
ಬೈಕ್ ವ್ಹೀಲಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮ: ಪೊಲೀಸ್ ಆಯುಕ್ತ ಬಿ.ದಯಾನಂದ
ಜಡ್ಜ್ ನಗು: ಬೆಂಗಳೂರಿನ ಟೆಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಸದ್ಯ ಭಾರೀ ಸದ್ದು ಮಾಡುತ್ತಿದೆ. ಇದರ ನಡುವೆ, ‘ಅತುಲ್ ಮಾಸಿಕ ನಿರ್ವಹಣಾ ವೆಚ್ಚ ನೀಡಲು ಆಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಲಿ ಎಂದು ಪತ್ನಿ ಉತ್ತರ ಪ್ರದೇಶದ ಕೋರ್ಟ್‌ನಲ್ಲಿಯೇ ವ್ಯಂಗ್ಯವಾಡಿದ್ದರು. ಇದಕ್ಕೆ ಜಡ್ಜ್ ಕೂಡ ನಕ್ಕಿದ್ದರು’ ಎಂದು ಟೆಕ್ಕಿಯ ಸಂಬಂಧಿ ಪವನ್ ಕುಮಾರ್ ಆರೋಪಿಸಿದ್ದಾರೆ. ಅತುಲ್ ಸಾವಿನ ಬಗ್ಗೆ ಗುರುವಾರ ಪಿಟಿಐ ವಿಡಿಯೋಸ್ ಜತೆ ಮಾತನಾಡಿದ ಅವರು, ‘ಅತುಲ್ ಕಿರುಕಳಕ್ಕೆ ಒಳಗಾಗಿದ್ದರು. ಮತ್ತು ಹಣಕ್ಕಾಗಿ ಚಿತ್ರಹಿಂಸೆ ನೀಡಿದ್ದರು. ಪತ್ನಿ ಮತ್ತು ನ್ಯಾಯಾಧೀಶರು ಅವಮಾನಿಸಿದ್ದರು. ಸುಭಾಷ್ ಅವರ ಪತ್ನಿ ಮತ್ತು ಅವರ ಕುಟುಂಬದವರು ದಂಪತಿಯ 4 ವರ್ಷದ ಮಗನ ನಿರ್ವಹಣೆಯ ನೆಪದಲ್ಲಿ ಹಣವನ್ನು ವಸೂಲಿ ಮಾಡುತ್ತಿದರು. ಅಲ್ಲದೇ ಹೆಂಡತಿಯು, ‘ಅತುಲ್‌ಗೆ ಹಣ ನೀಡಲು ಸಾಧ್ಯವಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಬಹುದು’ ಎಂದು ಕೋರ್ಟಲ್ಲೇ ಹೇಳಿದ್ದರು. ಇದಕ್ಕೆ ನ್ಯಾಯಾಧೀಶರು ನಕ್ಕಿದ್ದರು. ಇದು ಅತುಲ್‌ಗೆ ನಿಜವಾಗಿಯ ತುಂಬಾ ನೋವುಂಟು ಮಾಡಿತ್ತು’ ಎಂದು ವಿವರಿಸಿದ್ದಾರೆ.