*ಕದ್ದ ಮಾಲು ವಿಲೇವಾರಿಗೆ ಸಹಕರಿಸುತ್ತಿದ್ದವ ಸೆರೆ*₹4.50 ಲಕ್ಷ ಮೌಲ್ಯದ 100 ಗ್ರಾಂ ತೂಕದ ಮಾಂಗಲ್ಯ ಸರ ಜಪ್ತಿ*ಆರೋಪಿಗಳಾದ ಆನಂದ್‌ ಮತ್ತು ಮೊಹಮದ್‌ ಅಜರ್‌ ವೃತ್ತಿಪರ ಕಳ್ಳರು

ಬೆಂಗಳೂರು (ಜ. 18): ಮನೆಯ ಕಿಟಕಿಯಲ್ಲಿ ಕೈ ಹಾಕಿ ಮಾಂಗಲ್ಯ ಸರ ಕದ್ದಿದ್ದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಚಂದ್ರಾಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಮಮೂರ್ತಿನಗರದ ಆನಂದ (21), ಮೊಹಮ್ಮದ್‌ ಅಜರ್‌ (26) ಹಾಗೂ ಕಳವು ಮಾಲು ವಿಲೇವಾರಿ ಮಾಡುತ್ತಿದ್ದ ವಿದ್ಯಾರಣ್ಯಪುರದ ಕ್ಯಾಲಿ ಲಾಲ್‌ (25) ಬಂಧಿತರು. ಆರೋಪಿಗಳು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ₹4.50 ಲಕ್ಷ ಮೌಲ್ಯದ 100 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಜಪ್ತಿ ಮಾಡಲಾಗಿದೆ. 

ಇತ್ತೀಚೆಗೆ ಚಂದ್ರಾಲೇಔಟ್‌ ವ್ಯಾಪ್ತಿಯಲ್ಲಿ ಮುಂಜಾನೆ 5ರ ಸುಮಾರಿಗೆ ಮಹಿಳೆಯೊಬ್ಬರು ರೂಮ್‌ನ ಕಿಟಕಿ ಪಕ್ಕದ ಟೇಬಲ್‌ ಮೇಲೆ ಮಾಂಗಲ್ಯ ಸರ ಬಿಚ್ಚಿಟ್ಟು ವಾಯು ವಿಹಾರಕ್ಕೆ ತೆರಳಿದ್ದರು. ಕೆಲ ಹೊತ್ತಿನ ಬಳಿಕ ಬಂದು ನೋಡಿದಾಗ ಮಾಂಗಲ್ಯ ಸರ ಕಳುವಾಗಿತ್ತು. ಈ ಸಂಬಂಧ ದಾಖಲಾಗಿದ್ದ ಪ್ರಕರಣದ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:Gaming Addiction: ಪಬ್‌ಜಿ, ಫ್ರೀ ಫೈರ್ ಗೇಮಿಂಗ್‌ ಐಡಿ ಖರೀದಿಸಲು ಮನೆಯಿಂದಲೇ ₹17ಲಕ್ಷ ಕದ್ದ ಯುವಕ!

ಆರೋಪಿಗಳಾದ ಆನಂದ್‌ ಮತ್ತು ಮೊಹಮದ್‌ ಅಜರ್‌ ವೃತ್ತಿಪರ ಕಳ್ಳರಾಗಿದ್ದು, ಕಳೆದ ಹಲವು ವರ್ಷಗಳಿಂದ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದಾರೆ. ಕೆಲ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ಆರೋಪಿಗಳು ಜಾಮೀನಿನ ಮೇಲೆ ಹೊರಬಂದು ಬಳಿಕವೂ ಕಳವು ಕೃತ್ಯ ಮುಂದುವರೆಸಿದ್ದರು. ಮುಂಜಾನೆ ಹಾಗೂ ಸಂಜೆ ಹೊತ್ತಿನಲ್ಲಿ ಬಾಗಿಲು ಹಾಗೂ ಕಿಟಕಿ ತೆರೆದ ಮನೆಗಳನ್ನು ಗುರುತಿಸಿಕೊಂಡು ಕಳವು ಮಾಡಿ ಪರಾರಿಯಾಗುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜೈಲಲ್ಲಿ ಬೆಳೆದ ಸ್ನೇಹ: ಆರೋಪಿಗಳು ಪ್ರತ್ಯೇಕ ಅಪರಾಧ ಪ್ರಕರಣಗಳಲ್ಲಿ ಪರಪ್ಪನ ಅಗ್ರಹಾರದ ಜೈಲು ಸೇರಿದ್ದರು. ಈ ವೇಳೆ ಇಬ್ಬರಿಗೂ ಪರಿಚಯವಾಗಿ ಸ್ನೇಹಿತರಾಗಿದ್ದರು. ಜೈಲಿನಿಂದ ಹೊರಬಂದ ಬಳಿಕ ಒಟ್ಟಾಗಿ ಕಳವು ಕೃತ್ಯಕ್ಕೆ ಇಳಿದಿದ್ದರು. ಆರೋಪಿಗಳು ಕದ್ದ ಮಾಲುಗಳನ್ನು ವಿಲೇವಾರಿ ಮಾಡಲು ವಿದ್ಯಾರಣ್ಯಪುರದ ಕ್ಯಾಲಿ ಲಾಲ್‌ ಸಹಕಾರ ನೀಡುತ್ತಿದ್ದ ಎಂದು ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಿಂದ ಮನೆಗೆ ಜಿಗಿವಾಗ ಕೆಳಕ್ಕೆ ಬಿದ್ದು ಮನೆಗಳ್ಳ ಸ್ಥಳದಲ್ಲೇ ಸಾವು: ವೃತ್ತಿಪರ ಕಳ್ಳನೊಬ್ಬ(Professional Thief) ಮನೆಯ ಶೀಟಿನ ಚಾವಣಿಯಿಂದ ಬೇರೊಂದು ಮನೆ ಶೀಟಿನ ಚಾವಣಿ ಮೇಲೆ ಜಿಗಿಯುವ ವೇಳೆ ಶೀಟ್‌ತುಂಡಾಗಿ ನೆಲಕ್ಕೆ ಬಿದ್ದು ಮೃತಪಟ್ಟಿರುವ(Death) ಘಟನೆ ಶನಿವಾರ ವಿಲ್ಸನ್‌ಗಾರ್ಡನ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಸಿದ್ದಾಪುರ ನಿವಾಸಿ ಥಾಮಸ್‌(37) ಮೃತ ವ್ಯಕ್ತಿ. ಬೆಳಗ್ಗೆ 9.30ರ ಸುಮಾರಿಗೆ ನಾರಾಯಣಪುರದ ಶೀಟಿನ ಮನೆಯ ಚಾವಣಿ ಏರಿದ್ದು, ಮೂರ್ನಾಲ್ಕು ಮನೆಗಳ ಛಾವಣಿಗೆ ಜಿಗಿದಿದ್ದಾನೆ. ಬಳಿಕ ಮತ್ತೊಂದು ಶೀಟಿನ ಮನೆಯ ಚಾವಣಿ ಮೇಲೆ ಜಿಗಿಯುವಾಗ ಆಯತಪ್ಪಿ ನೆಲಕ್ಕೆ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ತಲೆಗೆ ತೀವ್ರ ಪೆಟ್ಟು ಬಿದ್ದು, ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು(Police) ತಿಳಿಸಿದ್ದಾರೆ.

ಇದನ್ನೂ ಓದಿ:Bengaluru: 2 ಕೋಟಿ ಬೆಲೆಯ 171 ದುಬಾರಿ ವಾಚ್‌ ಕದ್ದಿದ್ದವ ಅರೆಸ್ಟ್‌

ಯಾವ ಕಾರಣಕ್ಕೆ ಥಾಮಸ್‌ಮನೆಯ ಚಾವಣಿ ಏರಿದ್ದ ಎಂಬುದು ಗೊತ್ತಿಲ್ಲ. ಥಾಮಸ್‌ವೃತ್ತಿಪರ ಕಳ್ಳನಾಗಿದ್ದು, ಮಡಿವಾಳ, ಸಿದ್ದಾಪುರ, ಮೈಕೋ ಲೇಔಟ್‌ಸೇರಿದಂತೆ ವಿವಿಧ ಪೊಲೀಸ್‌ಠಾಣೆಗಳಲ್ಲಿ ಮನೆಗಳವು ಪ್ರಕರಣಗಳು ದಾಖಲಾಗಿವೆ. ಹಲವು ಪ್ರಕರಣಗಳಲ್ಲಿ ಆರೋಪಿಗೆ(Accused) ಜೈಲು(Jail) ಶಿಕ್ಷೆಯಾಗಿದ್ದು, ಜೈಲು ವಾಸವನ್ನೂ ಅನುಭವಿಸಿದ್ದಾನೆ. ಕೆಲ ಪ್ರಕರಣಗಳಲ್ಲಿ ಜಾಮೀನಿನ(Bail) ಮೇಲೆ ಹೊರಬಂದಿದ್ದಾನೆ. ಆದರೆ, ಕಳೆದ ಐದು ತಿಂಗಳಿಂದ ಮನೆಗೆ ಹೋಗಿಲ್ಲ ಎಂಬ ವಿಚಾರ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಥಾಮಸ್‌ ಬೆಳಗ್ಗೆ ಯಾವ ಕಾರಣಕ್ಕೆ ನಾರಾಯಣಪುರಕ್ಕೆ ಬಂದಿದ್ದ. ಏತಕ್ಕಾಗಿ ಮನೆ ಚಾವಣಿ ಏರಿದ್ದ ಹಾಗೂ ಘಟನೆ ವೇಳೆ ಈತನ ಜತೆಗೆ ಬೇರೆ ಯಾರಾದರೂ ಇದ್ದರೆ ಎಂಬುದು ತಿಳಿದು ಬಂದಿಲ್ಲ. ಥಾಮಸ್‌ಗಾಂಜಾ ಮತ್ತಿನಲ್ಲಿ ಬಿದ್ದಿರುವ ಬಗ್ಗೆ ಖಚಿತವಾಗಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಈ ಬಗ್ಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ಹೇಳಿದ್ದಾರೆ. ವಿಲ್ಸನ್‌ಗಾರ್ಡನ್‌ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.