ತನ್ನ ಸಂಬಂಧಿಗೆ ಶುಕ್ರವಾರ ರಾತ್ರಿ ನಿಖಿತಾ ಕರೆ ಮಾಡಿ ಮಾತನಾಡಿದ್ದಳು. ಈ ಕರೆ ನೀಡಿದ ಸುಳಿವು ಆಧರಿಸಿ ಕೂಡಲೇ ಕಾರ್ಯಾಚರಣೆಗಿಳಿದಾಗ ಹರಿಯಾಣದ ಗುರಗಾವ್ ಪಿಜಿಯಲ್ಲಿ ನಿಖಿತಾ ಹಾಗೂ ಉತ್ತರಪ್ರದೇಶದ ಅಲಹಬಾದ್‌ನ ರಾಮೇಶ್ವರ ಇನ್ ಹೋಟೆಲ್‌ನಲ್ಲಿ ನಿಖಿತಾ ತಾಯಿ ನಿಶಾ ಹಾಗೂ ಸಹೋದರ ಅನುರಾಗ್ ಪೊಲೀಸರ ಬಲೆಗೆ ಬಿದ್ದಿದ್ದಾರೆ. 

ಬೆಂಗಳೂರು(ಡಿ.17): ಸಾಫ್ಟ್‌ವೇರ್ ಉದ್ಯೋಗಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮೃತನ ಪತ್ನಿ ಹಾಗೂ ಕುಟುಂಬದವರನ್ನು ಪತ್ತೆ ಹಚ್ಚಲು ಮಾರತ್ತಹಳ್ಳಿ ಪೊಲೀಸರು ಮಾಧ್ಯಮಗಳ ಕಣ್ಣಪ್ಪಿಸಿ ಕುತೂಹಲಕಾರಿ ರಹಸ್ಯ ಕಾರ್ಯಾಚರಣೆ ನಡೆಸಿದ್ದು, ಒಂದೇ ಒಂದು ಫೋನ್ ಕರೆ ಆರೋಪಿಗಳು ಖಾಕಿ ಬಲೆ ಬೀಳಲು ಕಾರಣವಾಗಿದೆ. 

ಅತುಲ್ ಆತ್ಮಹತ್ಯೆ ಬಳಿಕ ವ್ಯಕ್ತವಾದ ಜನಾಕ್ರೋಶದಿಂದ ಭೀತಿಗೊಂಡ ಮೃತನ ಪತ್ನಿ ನಿಖಿತಾ ಸಿಂಘಾನಿಯಾ ಹಾಗೂ ಆಕೆಯ ಕುಟುಂಬದವರು ರಾತ್ರೋ ರಾತ್ರಿ ಮನೆ ತೊರೆದು ನಾಪತ್ತೆಯಾಗಿದ್ದರು. ಈ ಕೇಸ್‌ ಸುಪ್ರೀಂ ಕೋರ್ಟ್ನಲ್ಲಿ ಕೂಡ ಪ್ರಸ್ತಾಪವಾಗಿ ರಾಷ್ಟ್ರಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ಮಾರತ್ತ ಹಳ್ಳಿ ಪೊಲೀಸರು, ಆರೋಪಿಗಳ ಬಂಧನವನ್ನು ತೀರಾ ಪ್ರತಿಷ್ಠೆಯಾಗಿ ತೆಗೆದುಕೊಂಡರು. 

ಗಿಫ್ಟ್​​​ ರೆಡಿ ಮಾಡಿ ಮಗುವಿಗೆ ತಲುಪಿಸಲು ಹೇಳಿದ್ದ! ದೇಶಾದ್ಯಂತ 'ಜಸ್ಟಿಸ್‌ ಫಾರ್ ಅತುಲ್' ಸದ್ದು!

ಈ ಹಿನ್ನೆಲೆಯಲ್ಲಿ ಮಾರತ್ತಹಳ್ಳಿ ಇನ್ಸ್‌ಪೆಕ್ಟರ್ ಪಿ.ಎನ್. ಅನಿಲ್‌ ಕುಮಾ‌ರ್ ಉಸ್ತುವಾರಿಯಲ್ಲಿ ಸಬ್ ಇನ್ಸ್‌ಪೆಕ್ಟರ್ ಗಳಾದ ರಂಜಿತ್, ಚೇತನ್, ಜ್ಞಾನದೇವ ಹಾಗೂ ವಿದ್ಯಾ ಅವರ ಸಾರಥ್ಯದಲ್ಲಿ ಪ್ರತ್ಯೇಕ 4 ತಂಡ ರಚನೆಗೊಂಡವು. ಹರಿಯಾಣ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ಈ 4 ತಂಡಗಳು ಗೌಪ್ಯವಾಗಿ ಕಾರ್ಯಾಚರಣೆಗಳಿದ್ದವು. ಸತತ 5 ದಿನಗಳು ತಾಂತ್ರಿಕ ಮಾಹಿತಿ ಹಾಗೂ ಪಕ್ಕಾ ಪೊಲೀಸಿಂಗ್ ವಿಧಾನ ಬಳಸಿ ನಡೆಸಿದ ಪತ್ತೆದಾರಿಕೆ ಕೊನೆಗೂ ಫಲ ನೀಡಿ ಆರೋಪಿಗಳು ಖಾಕಿ ಬಲೆಗೆ ಬಿದ್ದಿದ್ದಾರೆ. 

ಮಾಧ್ಯಮಕ್ಕೆ ಕಾಣಿಸದಂತೆ ಪ್ಲಾನ್: 

ತಮ್ಮ ತನಿಖೆಯ ಪ್ರತಿ -ಹಂತದ ಸಂಗತಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವುದು ಆರೋಪಿಗಳು ವರದಾನವಾಗುತ್ತಿದೆ ಎಂದು ತಿಳಿದ ಅಧಿಕಾರಿಗಳು, ಕಾರ್ಯಾಚರಣೆ ದಿಕ್ಕು ಬದಲಿಸಲು ನಿರ್ಧರಿ ಸಿದರು. ಆಗ ಚೌನ್‌ಪುರದಲ್ಲಿರುವ ಅತುಲ್ ಪತ್ನಿ ತವರು ಮನೆಗೆ ಪಿಎಸ್‌ಐ ರಂಜಿತ್ ನೇತೃತ್ವದಲ್ಲಿ ಐವರು ಪೊಲೀಸರ ತಂಡವನ್ನು ಕಳುಹಿಸಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವಂತೆ ಇನ್ಸ್‌ಪೆಕ್ಟರ್‌ ಅನಿಲ್ ಕುಮಾರ್ ನೋಡಿಕೊಂಡರು. 

ಇತ್ತ ತಕ್ಷಣ ಚುರುಕುಗೊಂಡ ಪಿಐ ಅನಿಲ್ ಕುಮಾರ್, ಇನ್ನುಳಿದ ಪಿಎಸ್‌ಐಗಳಾದ ಜ್ಞಾನದೇವ್, ವಿದ್ಯಾ ಹಾಗೂ ಚೇತನ್ ಸಾರಥ್ಯದಲ್ಲಿ ಪ್ರತ್ಯೇಕ ಮೂರು ತಂಡಗಳನ್ನು ರಚಿಸಿ ಕೊಂಡು ಹರಿಯಾಣ ರಾಜ್ಯದ ಗುರ್‌ಗಾವ್, ದೆಹಲಿ ಹಾಗೂ ಉತ್ತರಪ್ರದೇಶದಅಲಹಬಾದ್‌ನಗರಗಳಲ್ಲಿ ಫೀಲ್ಡ್ಗಿಳಿದವು. ನಿಖಿತಾ ಹಾಗೂ ಪೋಷಕರು ಮೊಬೈಲ್‌ಗಳನ್ನು ಸ್ವಿಚ್‌ ಆಫ್ ಮಾಡಿಕೊಂಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ನೂರಾರು ಮೊಬೈಲ್, ಸಿಸಿಟಿವಿ ಪರಿಶೀಲನೆ: 

ಆರೋಪಿಗಳ ಬೆನ್ನಹತ್ತಿದ್ದ ಮಾರತ್ತಹಳ್ಳಿ ಠಾಣೆ ಪೊಲೀಸರ ವಿಶೇಷತಂಡಗಳು, ಹರಿಯಾಣ ಹಾಗೂ ಉತ್ತರ ಪ್ರದೇಶಗಳಲ್ಲಿ ನೂರಾರು ಮೊಬೈಲ್‌ಗಳ ಕರೆಗಳು ಹಾಗೂ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದರು. ಈ ತಾಂತ್ರಿಕ ಮಾಹಿತಿಯಿಂದ ನಿಖಿತಾ ಹಾಗೂ ಆಕೆಯ ಪೋಷಕರು ಪ್ರತ್ಯೇಕವಾಗಿ ತಲೆಮರೆಸಿಕೊಂಡಿರುವುದು ಪೊಲೀಸರಿಗೆ ಖಚಿತವಾಗಿದೆ. ಅಷ್ಟರಲ್ಲಿ ಅಲಹಬಾದ್ ನ್ಯಾಯಾಲಯಕ್ಕೆ ಆರೋಪಿಗಳು ನಿರೀಕ್ಷಣಾ ಜಾಮೀನು ಸಲ್ಲಿಸುವ ಬಗ್ಗೆ ಬಾತ್ರಿ ಪೊಲೀಸರಿಗೆ ಲಭ್ಯವಾಯಿತು. ತಕ್ಷಣವೇ ಚುರುಕಾದ ಪೊಲೀಸರು, ಆರೋಪಿಗಳ ಸಂಪರ್ಕ ಜಾಲವನ್ನು ಮತ್ತೆ ಶೋಧಿಸಿದ್ದಾರೆ.

ಟೆಕಿ ಪತ್ನಿ ಚಿಕ್ಕಪ್ಪಗೆ ನಿರೀಕ್ಷಣಾ ಜಾಮೀನು 

ಅಲಹಾಬಾದ್: ಟೆಕಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದ ಆರೋಪಿ ಅತುಲ್ ಪತ್ನಿಯ ಚಿಕ್ಕಪ್ಪ ಸುಶೀಲ್ ಅವರಿಗೆ ಅಲಹಾಬಾದ್ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಸುಶೀಲ್ ಅವರ ವಿರುದ್ಧ ಕರ್ನಾಟಕದಲ್ಲೂ ಎಫ್ ಐಆರ್ ದಾಖಲಾಗಿದ್ದು, ಇದೀಗ ಈ ಜಾಮೀನು ಲಭಿಸಿದ ಕಾರಣ ಅವರು ಕರ್ನಾಟಕದಲ್ಲಿ ನ್ಯಾಯಾಲಯದೆದುರು ಸೂಕ್ತ ಕಾನೂನು ಪರಿಹಾರಗಳನ್ನು ಕೋರಬಹುದಾಗಿದೆ. ಸುಶೀಲ್ ವಿರುದ್ದ ಕೇವಲ ಫೋನ್‌ನಲ್ಲಿ ಬೆದರಿಕೆ ಹಾಕಿದ ಆರೋಪವಿದೆ ಎಂದು ಹೇಳಿದ ನ್ಯಾ| ಆಶುತೋಷ್ ಅವರ ಪೀಠ, ಸೆಕ್ಸನ್ 173(2) 2. 50,000 ರು. ಹಾಗೂ 2 ಶ್ಯುರಿಟಿ ಇಡಲು ಸೂಚಿಸಿದೆ.

ಬೆಂಗಳೂರು ಟೆಕ್ಕಿ ಅತುಲ್ ಮ್ಯಾಟ್ರಿಮೊನಿ ಮದುವೆ, ಸಂಸಾರ, ಲೈಂಗಿಕತೆ ಗುಟ್ಟು ಬಿಚ್ಚಿಟ್ಟ ಸಂಬಂಧಿಕರು!

ಬಂಧುಗಳ ಕರೆ ನೀಡಿದ ಸುಳಿವು 

ಅದೇ ವೇಳೆ ಜಾಮೀನು ಅರ್ಜಿ ಸಲ್ಲಿಕೆ ಸಂಬಂಧ ನಿಖಿತಾ ಹಾಗೂ ಆಕೆಯ ತಾಯಿ ನಿಶಾ ಅವರನ್ನು ಅವರ ಸಂಬಂಧಿಕರು ಸಂಪರ್ಕಿಸುತ್ತಾರೆ ಎಂದು ಗ್ರಹಿಸಿದ ಪೊಲೀಸರು, ಕೂಡಲೇ ಆ ಇಬ್ಬರ ಮೊಬೈಲ್ ಕರೆಗಳ ಮೇಲೆ ನಿಗಾವಹಿಸಿದರು. ಅಲ್ಲದೆ ತಲೆಮರೆಸಿಕೊಂಡ ಬಳಿಕ ರಿಗ್ಯುಲರ್‌ಕರೆ ಮಾಡದೆ ವಾಟ್ಸಪ್ ಕರೆಗಳ ಮೂಲಕವೇ ತನ್ನ ಸಂಬಂಧಿಕರು ಹಾಗೂ ವಕೀಲರ ಜತೆ ನಿಖಿತಾ ಹಾಗೂ ಆಕೆಯ ಕುಟುಂಬದವರು ಸಂವಹನ ನಡೆಸಿದರು. ಹೀಗಾಗಿ ಆರೋಪಿಗಳ ಜಾಡು ಹಿಡಿಯುವುದು ಪೊಲೀಸರಿಗೆ ಸವಾಲಾಗಿತ್ತು. ಆದರೆ, ಜಾಮೀನು ಅರ್ಜಿಗೆ ಸಹಿ ಪಡೆಯಲು ಆರೋಪಿಗಳಿಗೆ ಬಂಧುಗಳು ಕರೆ ಮಾಡಬಹುದು ಎಂದು ಪೊಲೀಸರು ಅಂದಾಜಿಸಿದ್ದು ಕೊನೆಗೆ ಫಲ ನೀಡಿತು. 

ತನ್ನ ಸಂಬಂಧಿಗೆ ಶುಕ್ರವಾರ ರಾತ್ರಿ ನಿಖಿತಾ ಕರೆ ಮಾಡಿ ಮಾತನಾಡಿದ್ದಳು. ಈ ಕರೆ ನೀಡಿದ ಸುಳಿವು ಆಧರಿಸಿ ಕೂಡಲೇ ಕಾರ್ಯಾಚರಣೆಗಿಳಿದಾಗ ಹರಿಯಾಣದ ಗುರಗಾವ್ ಪಿಜಿಯಲ್ಲಿ ನಿಖಿತಾ ಹಾಗೂ ಉತ್ತರಪ್ರದೇಶದ ಅಲಹಬಾದ್‌ನ ರಾಮೇಶ್ವರ ಇನ್ ಹೋಟೆಲ್‌ನಲ್ಲಿ ನಿಖಿತಾ ತಾಯಿ ನಿಶಾ ಹಾಗೂ ಸಹೋದರ ಅನುರಾಗ್ ಪೊಲೀಸರ ಬಲೆಗೆ ಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.