ಬೆಂಗಳೂರು[ಜ.16]: ಮಧ್ಯೆ ರಾತ್ರಿ ಚಹಾ ಸೇವಿಸಿ ಮರಳುತ್ತಿದ್ದ ವಿದ್ಯಾರ್ಥಿಗಳಿಗೆ ‘ನೀವು ಪಾಕಿಸ್ತಾನದವರಾ’ ಎಂದು ಪ್ರಶ್ನಿಸಿದ ಸುದ್ದುಗುಂಟೆಪಾಳ್ಯ ಠಾಣೆಯ ಗಸ್ತು ಪೊಲೀಸರು ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ವಿದ್ಯಾರ್ಥಿಗಳು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಕ್ಕೆ ಹಾಕಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಘಟನೆ ಸಂಬಂಧ ಇಲಾಖಾ ಮಟ್ಟದ ವಿಚಾರಣೆಗೆ ಆಗ್ನೇಯ ವಿಭಾಗದ ಡಿಸಿಪಿ ಆದೇಶಿಸಿದ್ದಾರೆ.

ಕೇರಳದ ಮೂಲದ ಮೊಹಮ್ಮದ್‌ ವಜೀರ್‌, ಶಾಮಾನ್‌ ಹಾಗೂ ಬ್ಯಾಟರಾಯನಪುರದ ಅಕ್ಷಯ್‌ ಎಂಬ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿದ್ದು, ಎರಡು ದಿನಗಳ ಹಿಂದೆ ಮನೆ ಹತ್ತಿರ ರಾತ್ರಿ ಒಂದು ಗಂಟೆ ಸುಮಾರಿಗೆ ಚಹಾ ಸೇವಿಸಿ ಬರುವಾಗ ಈ ಘಟನೆ ನಡೆದಿದೆ. ತಾವು ವಿದ್ಯಾರ್ಥಿಗಳು ಎಂದರೂ ಕೇಳದ ಪೊಲೀಸರು, ‘ನಮ್ಮನ್ನು ಪಾಕಿಸ್ತಾನದವರಾ ಎಂದು ಮೂದಲಿಸಿ ದರ್ಪ ತೋರಿದರು’ ಎಂದು ಸಂತ್ರಸ್ತರು ದೂರಿದ್ದಾರೆ. ಆದರೆ ಈ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ.

ಕೇರಳದ ಮೂಲದ ವಿದ್ಯಾರ್ಥಿಗಳು ಸುದ್ದುಗುಂಟೆಪಾಳ್ಯದಲ್ಲಿ ನೆಲೆಸಿದ್ದು, ನಗರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸೋಮವಾರ ಮಧ್ಯೆ ರಾತ್ರಿ ಮನೆ ಹತ್ತಿರದ ರಸ್ತೆ ಬದಿಯ ಚಹಾ ಅಂಗಡಿಗೆ ಚಹಾ ಸೇವನೆಗೆ ತೆರಳಿದ್ದರು. ಅಲ್ಲಿಂದ ಮರಳುವಾಗ ಅವರಿಗೆ ಚೀತಾ ವಾಹನದಲ್ಲಿ ಸುದ್ದುಗುಂಟೆಪಾಳ್ಯ ಠಾಣೆಯ ಇಬ್ಬರು ಗಸ್ತು ಸಿಬ್ಬಂದಿ ಎದುರಾಗಿದ್ದಾರೆ. ಆಗ ವಿದ್ಯಾರ್ಥಿಗಳನ್ನು ಅಡ್ಡಗಟ್ಟಿದ ಪೊಲೀಸರು, ಅವರನ್ನು ‘ಮಧ್ಯೆ ರಾತ್ರಿ ಎಲ್ಲಿ ಹೋಗಿದ್ದೀರಾ, ಏನ್ಮಾಡುತ್ತಿದ್ದೀರಾ’ ಎಂದೆಲ್ಲ ಪ್ರಶ್ನಿಸಿದ್ದಾರೆ.

ಈ ವೇಳೆ ವಿದ್ಯಾರ್ಥಿಗಳು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ನಮ್ಮನ್ನು ಪಾಕಿಸ್ತಾನದವರಾ ಎಂದೂ ಪ್ರಶ್ನಿಸಿದ ಪೊಲೀಸರು, ಪಾಕಿಸ್ತಾನಕ್ಕೆ ಕಳುಹಿಸುತ್ತೇವೆ ಎಂದು ಬೆದರಿಸಿದರು. ಠಾಣೆಗೆ ಕರೆದೊಯ್ದು ಕಿರುಕುಳ ನೀಡಿದರು ಎಂಬುದು ವಿದ್ಯಾರ್ಥಿಗಳ ಆರೋಪವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ ವೈರಲ್‌ ಆಯಿತು. ತಕ್ಷಣವೇ ಆಗ್ನೇಯ ವಿಭಾಗದ ಪ್ರಭಾರಿ ಡಿಸಿಪಿ ಅನುಚೇತ್‌ ಅವರು, ಇಡೀ ಘಟನೆ ಕುರಿತು ಇಲಾಖಾ ಮಟ್ಟದ ವಿಚಾರಣೆಗೆ ಆದೇಶ ಹೊರಡಿಸಿದ್ದಾರೆ.

ವಿದ್ಯಾರ್ಥಿಗಳಿಂದ ಅನುಚಿತ ವರ್ತನೆ: ಪೊಲೀಸರು

ಮೂವರು ವಿದ್ಯಾರ್ಥಿಗಳಲ್ಲಿ ಇಬ್ಬರು ಕೇರಳದವರಾಗಿದ್ದು, ಮತ್ತೊಬ್ಬ ಬ್ಯಾಟರಾಯನಪುರದವನು. ಧರ್ಮ ಮುಂದಿಟ್ಟು ಯಾರಿಗೂ ಕಿರುಕುಳ ನೀಡಿಲ್ಲ. ರಾತ್ರಿ ಎರಡು ಗಂಟೆಯಲ್ಲಿ ರಸ್ತೆಯಲ್ಲಿ ನಿಂತು ಕೂಗಾಡುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ಅನುಚಿತವಾಗಿ ವರ್ತಿಸಿದ್ದರು. ಹೀಗಾಗಿ ಅವರನ್ನು ಠಾಣೆಗೆ ಕರೆದು ತಂದು ಎಚ್ಚರಿಕೆ ನೀಡಿ ಬಳಿಕ ಬಿಡುಗಡೆಗೊಳಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ರಾತ್ರಿ ಎರಡು ಗಂಟೆಗೆ ಚಹಾ ಸೇವನೆ ಬಂದಿದ್ದಾಗಿ ವಿದ್ಯಾರ್ಥಿಗಳು ಹೇಳುತ್ತಾರೆ. ಆ ಪ್ರದೇಶದಲ್ಲಿ ಆ ಹೊತ್ತಿನಲ್ಲಿ ಯಾವುದೇ ಚಹಾ ಅಂಗಡಿ ತೆರೆದಿರಲಿಲ್ಲ. ಮಧ್ಯ ರಾತ್ರಿಯಲ್ಲಿ ಅವರಿಗೆ ಏನೂ ಕೆಲಸವಿತ್ತು ಎಂದು ಪೊಲೀಸರು ಪ್ರಶ್ನಿಸಿದ್ದಾರೆ.