ಶವವಾಗಿ ಸಿಕ್ಕಿರುವ ಸ್ಥಳ ನೋಡಿದಾಗ, ಬಂಡೆಯಿಂದ ಜಾರಿ ಬಿದ್ದಿರಬಹುದು ಎಂದು ಊಹಿಸಲಾಗಿದೆ. ಫಾಲ್ಸ್‌ ಬಳಿ ಕರಡಿ ದಾಳಿ ಮಾಡಿರುವ ಸಾಧ್ಯತೆಯೂ ದಟ್ಟವಾಗಿದೆ.  

ಬೆಂಗಳೂರು(ಅ.05): ಸೆ.28ರಂದು ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಚಾರಣಿಗ ರಾಹುಲ್‌ ರಮೇಶ್‌ರನ್ನು ರಕ್ಷಣಾ ತಂಡ ಕೊನೆಗೂ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದು, ಹಿಮಾಚಲ ಪ್ರದೇಶದ ಮನಾಲಿ ಬಳಿಯ ಜೋಗಿಣಿ ಜಲಪಾತದ ಕಲ್ಲುಬಂಡೆಗಳ ಅಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ರಾಹುಲ್‌ ರಮೇಶ್‌ ಅವರ ಗೆಳೆಯ ನೀಡಿದ್ದ ನಾಪತ್ತೆ ದೂರು ಆಧರಿಸಿ ಹುಡುಕಾಟ ನಡೆಸಿದ್ದ ಮನಾಲಿ ಪೋಲೀಸರು, ಸೆ.29ರಂದು ಮನಾಲಿ ಬಳಿಯ ಜೋಗಿಣಿ ಫಾಲ್ಸ್‌ ಬಳಿಯಲ್ಲಿ ರಾಹುಲ್‌ ಅವರ ಮೊಬೈಲ್‌ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು. ಅದರಲ್ಲಿ ಆತ ತೆಗೆದ ಫೋಟೋಗಳು ಹಾಗೂ ಕಳಿಸಿದ ಮೆಸೇಜ್‌ಗಳನ್ನು ಆಧಾರವಾಗಿಟ್ಟುಕೊಂಡು ಹುಡುಕಾಟ ಆರಂಭಿಸಿದ ರಕ್ಷಣಾ ಪಡೆಗಳು, ಆತನ ಮೊಬೈಲ್‌ ಸಿಕ್ಕ 400 ಮೀಟರ್‌ ಅಂತರದಲ್ಲಿಯೇ ಆತನ ಶವವನ್ನು ಪತ್ತೆ ಹಚ್ಚಿದ್ದಾರೆ.

ಬೆಳಗಾವಿ: ಅವಾಚ್ಯ ಶಬ್ದಗಳಿಂದ ನಿಂದನೆ, ಮಾರಕಾಸ್ತ್ರಗಳಿಂದ ಕೊಚ್ಚಿ ವಿದ್ಯಾರ್ಥಿಯ ಬರ್ಬರ ಹತ್ಯೆ

ಈ ಕುರಿತು ಮಾತನಾಡಿದ ಮನಾಲಿಯ ಪೋಲೀಸ್‌ ವರಿಷ್ಠಾಧಿಕಾರಿ ಕೆ.ಡಿ.ಶರ್ಮಾ ‘ರಾಹುಲ್‌ ರಮೇಶ್‌ ಅವರು ಮನಾಲಿಯಲ್ಲಿ ನಡೆಯುವ ಸೋಲಾಂಗ್‌ ಸ್ಕೈ ಉಲ್ಟ್ರಾ ಈವೆಂಟ್‌ನಲ್ಲಿ ಭಾಗವಹಿಸಲು ತಯಾರಿ ನಡೆಸುತ್ತಿದ್ದರು. ಸೆ.28ರಂದು ಅವರು ಮನಾಲಿ ಬಳಿಯ ಭ್ರಿಗು ಕೆರೆಯಿಂದ ಹಿಂದಿರುಗುವಾಗ ಮಾರ್ಗ ಕಳೆದುಕೊಂಡಿದ್ದರು. ಈ ಕುರಿತು ಅವರು ತಮ್ಮ ಆಪ್ತರಿಗೆ ತಮ್ಮ ಮೊಬೈಲ್‌ನಿಂದ ಸಂದೇಶಗಳನ್ನೂ ಕೂಡ ಕಳುಹಿಸಿದ್ದರು. ತನಿಖೆ ನಡೆಸಲು ನಾವು ಸೇನೆಯ ಹೆಲಿಕಾಪ್ಟರ್‌ ಕೂಡ ಬಳಸಿದ್ದೇವೆ. ಅವರು ಶವವಾಗಿ ಸಿಕ್ಕಿರುವ ಸ್ಥಳ ನೋಡಿದಾಗ, ಬಂಡೆಯಿಂದ ಜಾರಿ ಬಿದ್ದಿರಬಹುದು ಎಂದು ಊಹಿಸಲಾಗಿದೆ. ಫಾಲ್ಸ್‌ ಬಳಿ ಕರಡಿ ದಾಳಿ ಮಾಡಿರುವ ಸಾಧ್ಯತೆಯೂ ದಟ್ಟವಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು’ ಎಂದು ತಿಳಿಸಿದ್ದಾರೆ.