ಬೆಂಗಳೂರು[ಜ.28]: ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳದಲ್ಲಿ ಯುವಕನೊಬ್ಬನನ್ನು ಆತನ ಸ್ನೇಹಿತರೇ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಮಡಿವಾಳ ಸಮೀಪದ ವೆಂಕಟಾಪುರ ಗೇಟ್‌ನಲ್ಲಿ ಭಾನುವಾರ ರಾತ್ರಿ ನಡೆದಿದೆ.

ಈಜಿಪುರದ ನಿವಾಸಿ ಆದಿಶೇಷ (20) ಕೊಲೆಯಾದ ದುರ್ದೈವಿ. ಈ ಪ್ರಕರಣ ಸಂಬಂಧ ಮೃತನ ಸ್ನೇಹಿತರಾದ ಮುರಳಿ, ಕೃಷ್ಣ ಹಾಗೂ ಮಂಜುನಾಥ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವೆಂಕಟಾಪುರದ ಗೇಟ್‌ ಸಮೀಪದ ಬಾರ್‌ನಲ್ಲಿ ಮದ್ಯ ಸೇವಿಸುವಾಗ ಈ ನಾಲ್ವರ ಗೆಳೆಯರ ಮಧ್ಯೆ ಜಗಳವಾಗಿದೆ. ಆಗ ಕೋಪಗೊಂಡ ಆರೋಪಿಗಳು, ಆದಿಶೇಷನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ತಕ್ಷಣವೇ ಸ್ಥಳೀಯರು, ಗಾಯಾಳುವನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಆತ ಸಾವನ್ನಪ್ಪಿದ್ದಾನೆ.

ಈಜಿಪುರದ ಆದಿಶೇಷ ಕೆಲಸವಿಲ್ಲದೆ ಅಲೆಯುತ್ತಿದ್ದು, ಆತನ ವಿರುದ್ಧ ಕೊಲೆ ಯತ್ನ, ಹಲ್ಲೆ ಸೇರಿದಂತೆ ಮೂರು ಪ್ರಕರಣ ದಾಖಲಾಗಿದ್ದವು. ಕೆಲ ದಿನಗಳ ಹಿಂದೆ ಮುರಳಿಯ ಸ್ನೇಹಿತನಿಗೆ ಆದಿಶೇಷ ಹೊಡೆದಿದ್ದ. ಇದೇ ವಿಚಾರವಾಗಿ ಎರಡು ಗುಂಪುಗಳ ಮಧ್ಯೆ ಹಗೆತನ ಮೂಡಿತ್ತು. ಭಾನುವಾರ ರಾತ್ರಿ ವೆಂಕಟಾಪುರ ಗೇಟ್‌ ಸಮೀಪದ ಬಾರ್‌ನಲ್ಲಿ ಮದ್ಯ ಸೇವಿಸುವಾಗ ಹಳೆ ವಿಚಾರಗಳು ಪ್ರಸ್ತಾಪವಾಗಿವೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಮಡಿವಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.