ಬೆಂಗಳೂರಿನಲ್ಲಿ 13 ವರ್ಷದ ಬಾಲಕನನ್ನು ಅಪಹರಿಸಿ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟು ಕೊಲೆ ಮಾಡಲಾಗಿದೆ. ಪರಿಚಿತ ಡ್ರೈವರ್ ಆಗಿದ್ದ ಆರೋಪಿ, ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದಾಗ ಗುಂಡೇಟಿನಿಂದ ಬಂಧಿತನಾಗಿದ್ದಾನೆ. ಈ ಘಟನೆ ಬನ್ನೇರುಘಟ್ಟದಲ್ಲಿ ನಡೆದಿದ್ದು, ಆರೋಪಿ ಪೊಲೀಸ್ ಕುಟುಂಬದವನಾಗಿದ್ದಾನೆ.
ಬೆಂಗಳೂರು/ಬನ್ನೇರುಘಟ್ಟ (ಆ.1): ಬೆಂಗಳೂರಿನ ಕಾಲೇಜೊಂದರಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದವರ ಮನೆಗೆ ಕಾರು ಓಡಿಸಲು ಡ್ರೈವರ್ ಆಗಿ ಬರುತ್ತಿದ್ದ ವ್ಯಕ್ತಿಯೇ ಮಗುವನ್ನು ಕಿಡ್ನ್ಯಾಪ್ ಮಾಡಿ, 5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈ ವಿಚಾರವನ್ನು ಮಗುವಿನ ತಂದೆ ಪೊಲೀಸರಿಗೆ ಹೇಳಿದ್ದಕ್ಕೆ, ಮಗುವನ್ನು ಭೀಕರವಾಗಿ ಕೊಲೆ ಮಾಡಿ, ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ. ಈ ಸಂಬಂಧಪಟ್ಟಂತೆ ಪೊಲೀಸರು ಆರೋಪಿಗಳನ್ನು ಬಂಧಿಸಲು ಹೋದಾಗ ಅವರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಮುಂದಾಗಿದ್ದು, ಪೊಲೀಸರು ಕಾಲಿಗೆ ಗುಂಡೇಟು ಹೊಡೆದು ಅರೆಸ್ಟ್ ಮಾಡಿದ್ದಾರೆ.
ನಗರದ ಬನ್ನೇರುಘಟ್ಟ ಸಮೀಪ ಕಗ್ಗಲೀಪುರ ರಸ್ತೆಯಲ್ಲಿ ಪೊಲೀಸ್ ಇಲಾಖೆ ನಡೆಸಿದ ಕಾರ್ಯಾಚರಣೆ ವೇಳೆ ಬಾಲಕನ ಅಪಹರಣ ಹಾಗೂ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಸೇರಿದಂತೆ ಮತ್ತೊಬ್ಬನ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ. ಆರೋಪಿಗಳು ಪೊಲೀಸರ ಮೇಲೆಯೇ ದಾಳಿ ಮಾಡಲು ಮುಂದಾದ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಠಾಣಾ ವ್ಯಾಪ್ತಿಯಲ್ಲಿ ಫೈರಿಂಗ್ ನಡೆಯಿತು. ಘಟನಾ ಸ್ಥಳಕ್ಕೆ ಅಡಿಷನಲ್ ಎಸ್ಪಿ ವೆಂಕಟೇಶ್ ಪ್ರಸನ್ನ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಕಿಡ್ನಾಪ್ ಆಗಿ, ಹತ್ಯೆಯಾದ ನಿಶ್ಚಿತ್:
13 ವರ್ಷದ ನಿಶ್ಚಿತ್ ಎಂಬ ಬಾಲಕನು ಕಿಡ್ನಾಪ್ ಆಗಿದ್ದ ಪ್ರಕರಣವು ಹೃದಯ ವಿದ್ರಾವಕ ಅಂತ್ಯ ಕಂಡಿದೆ. ಜುಲೈ 30ರಂದು ಸಂಜೆ ಬಾಲಕನ ಪೋಷಕರು ನಾಪತ್ತೆ ದೂರು ನೀಡಿದ್ದು, ತಕ್ಷಣ ಹುಳಿಮಾವು ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಆದರೆ, ಇದೇ ದಿನ ಮಧ್ಯರಾತ್ರಿ ಕರೆಮಾಡಿ ಕಿಡ್ನಾಪರ್‌ಗಳು 5 ಲಕ್ಷ ರೂ. ತೆಗೆಯಲು ಬೇಡಿಕೆ ಇಟ್ಟಿದ್ದರು. ಜುಲೈ 31ರಂದು ಸಂಜೆ 5 ಗಂಟೆ ಸುಮಾರಿಗೆ ಆಡು ಮೇಯಿಸುತ್ತಿದ್ದವರು ಬನ್ನೇರುಘಟ್ಟ ಅರಣ್ಯದಲ್ಲಿ ಒಂದು ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ತೆರಳಿದ ಪೊಲೀಸರು ಶವವನ್ನು ಪರಿಶೀಲಿಸಿ, ಈ ಬಟ್ಟೆಗಳು ನಮ್ಮ ಮಗನದ್ದೇ ಎಂದು ಪೋಷಕರು ಪತ್ತೆ ಮಾಡಿದಾಗ ಬಾಲಕ ಸಾವನ್ನಪ್ಪಿರುವುದು ದೃಢಪಟ್ಟಿದೆ.
ಡ್ರೈವರ್ ಗುರುಮೂರ್ತಿ ಕಿಡ್ನ್ಯಾಪ್ ಪ್ಲಾನ್:
ಮಗುವನ್ನು ಕಿಡ್ನಾಪ್ ಮಾಡಿ ಕೊಲೆಗೈದ ಆರೋಪಿ ಗುರುಮೂರ್ತಿ ಈ ಹಿಂದೆ ಬಾಲಕನ ತಾಯಿ ಸವಿತಾ ಅವರೊಂದಿಗೆ ಡ್ರೈವ್‌ಯೂ (DriveU) ಆ್ಯಪ್ ಮೂಲಕ ಪರಿಚಯವಾಗಿದ್ದನು. ಕಳೆದ 8 ತಿಂಗಳ ಹಿಂದೆ ಅವರು ಬುಕ್ ಮಾಡಿದ ಕಾರು ಡ್ರೈವರ್ ಆಗಿ ಬಂದಿದ್ದ ಆರೋಪಿ, ತಾನು ಕಡಿಮೆ ಬೆಲೆಗೆ ಕಾರು ಬಾಡಿಗೆಗೆ ಬರುತ್ತೇನೆ ಎಂದು ನೇರ ಸಂಪರ್ಕಕ್ಕಾಗಿ ಮೊಬೈಲ್ ನಂಬರ್ ಎಕ್ಸ್ಚೇಂಜ್ ಮಾಡಿಕೊಂಡಿದ್ದನು. ಈ ತನೊಂದಿಗೆ ಆ ಮಹಿಳೆ ಸಂಪರ್ಕದಲ್ಲಿ ಇದ್ದು, ಕೆಲವೊಮ್ಮೆ ಕಡಿಮೆ ಹಣಕ್ಕೆ ಬಾಡಿಗೆಗೆ ಬಂದಿದ್ದನು. ಜೊತೆಗೆ, ಮಹಿಳೆಯ ಕಾರಿಗೆ Part-time ಚಾಲಕನಂತೆ ಕೆಲಸ ಮಾಡುತ್ತಿದ್ದನು.
ಇದಾದ ನಂತರ ಆರೋಪಿ ಬಾಲಕನೊಂದಿಗೆ ಒಡನಾಟ ಬೆಳೆಸಿಕೊಂಡಿದ್ದಾನೆ. ಬುಧವಾರ ಪಾನಿಪುರಿ ಕೊಡಿಸುವ ನೆಪದಲ್ಲಿ ಬೈಕ್‌ನಲ್ಲಿ ಕರೆದುಕೊಂಡು ಬನ್ನೇರುಘಟ್ಟ ಸರ್ಕಲ್‌ವರೆಗೆ ಕರೆದುಕೊಂಡು ಹೋಗಿ ನಂತರ ಬೆಟ್ಟದ ಕಡೆ ಕರೆದೊಯ್ಯಲಾಗಿದೆ. ತಡರಾತ್ರಿ ಪೋಷಕರಿಗೆ ಕದ್ದ ಮೊಬೈಲ್‌ನಿಂದ ಕರೆಮಾಡಿ 5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದನು. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಆರೋಪಿ ಇತ್ತೀಚೆಗೆ ತಮಿಳು ‘ವಿಕ್ರಮ್’ ಚಿತ್ರವನ್ನ ನೋಡಿ, ಅದರಲ್ಲಿ ಕಂಡಂತೆ ಕಿಡ್ನಾಪ್ ಮಾಡಿ ತಪ್ಪಿಸಿಕೊಳ್ಳೋ ಯೋಜನೆ ರೂಪಿಸಿದ್ದರು. ಆದರೆ ಎಲ್ಲವೂ ಭಿನ್ನವಾಗಿ ನಡೆದಿದ್ದು, ಬಾಲಕನ ಹತ್ಯೆಯ ಮೂಲಕ ಘಟನೆ ದುರಂತ ಅಂತ್ಯ ಕಂಡಿದೆ.
ಆರೋಪಿ – ಪೊಲೀಸ್ ಕುಟುಂಬದವನೇ:
ಇದೇ ಗಂಭೀರ ಅಂಶವೆಂದರೆ, ಇಂತಹ ಕ್ರೂರ ಕೃತ್ಯ ಎಸಗಿದ ಆರೋಪಿ ಬೆಂಗಳೂರಿನ ಪೊಲೀಸ್ ಕಾನ್ಸ್‌ಟೆಬಲ್ ಒಬ್ಬರ ತಮ್ಮ. ಈತನ ವಿರುದ್ಧ ಈ ಮೊದಲೇ 14 ವರ್ಷದ ಬಾಲಕಿ ಮೇಲೆ ಅತ್ಯಾಚಾ*ರ ಆರೋಪದಡಿ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧನವೂ ಆಗಿತ್ತು. ಕಿಡ್ನಾಪ್ ಮಾಡಿ, ಕೊಲೆಗೈದ ಆರೋಪಿಗಳ ಬಗ್ಗೆ ಸಿಸಿಟಿವಿ ಹಾಗೂ ಫೋನ್ ಟ್ರೇಸ್ ಮೂಲಕ ಪತ್ತೆ ಮಾಡಿದ ಪೊಲೀಸರು ಬನ್ನೇರುಘಟ್ಟದ ಅರಣ್ಯ ಪ್ರದೇಶದಲ್ಲಿ ಆರೋಪಿಗಳು ಇರುವುದು ಖಚಿತಪಡಿಸಿಕೊಂಡಿದ್ದಾರೆ. ಪೊಲೀಸರು ಬಂಧನಕ್ಕೆ ಮುಂದಾದಾಗ, ಆರೋಪಿಗಳು ದಾಳಿ ಮಾಡಲು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಫೈರಿಂಗ್ ಮಾಡಿದ್ದಾರೆ. ಆರೋಪಿಗಳ: ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ. ಈ ಬಗ್ಗೆ ಬನ್ನೇರುಘಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
