Asianet Suvarna News Asianet Suvarna News

ಕ್ರಿಮಿನಲ್‌ ಹಿನ್ನೆಲೆ ಪರಿಶೀಲಿಸಿ ನೌಕರಿ ನೀಡಿ: ಪ್ರತಾಪ್‌ ರೆಡ್ಡಿ

ಆ್ಯಪ್‌ ಆಧಾರಿತ ಟ್ಯಾಕ್ಸಿ, ಆಹಾರ ವಿತರಣಾ ಸಂಸ್ಥೆಗಳಿಗೆ ನಗರ ಪೊಲೀಸ್‌ ಆಯುಕ್ತರ ಖಡಕ್‌ ಸೂಚನೆ, ಡ್ರಗ್ಸ್‌ ಸರಬರಾಜು ಆಗದಂತೆ ಎಚ್ಚರವಹಿಸಲು ನಿರ್ದೇಶನ

Bengaluru City Police Commissioner Pratap Reddy Talks Criminal Background grg
Author
First Published Dec 4, 2022, 10:30 AM IST

ಬೆಂಗಳೂರು(ಡಿ.04):  ನೌಕರರ ನೇಮಕಾತಿಗೆ ಮುನ್ನ ಕ್ರಿಮಿನಲ್‌ ಹಿನ್ನೆಲೆ ಸೇರಿದಂತೆ ಪೂರ್ವಾಪರವನ್ನು ಕಡ್ಡಾಯವಾಗಿ ಪರಿಶೀಲಿಸಬೇಕು, ಡ್ರಗ್ಸ್‌ ಸೇರಿ ನಿಷೇಧಿತ ವಸ್ತುಗಳ ಸಾಗಾಣಿಕೆಗೆ ಅವಕಾಶ ಕೊಡಬಾರದು ಎಂದು ‘ಟ್ಯಾಕ್ಸಿ ಅಗ್ರಿಗೇಟ​ರ್ಸ್ ಹಾಗೂ ಆನ್‌ಲೈನ್‌ ಫುಡ್‌ ಡೆಲಿವರಿ ಸಂಸ್ಥೆ’ಗಳಿಗೆ ನಗರ ಪೊಲೀಸ್‌ ಆಯುಕ್ತರು ತಾಕೀತು ಮಾಡಿದ್ದಾರೆ.

ಇತ್ತೀಚೆಗೆ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ರಾರ‍ಯಪಿಡೋ ಸಂಸ್ಥೆಯ ಬೈಕ್‌ ಸವಾರನ ಬಂಧನ ಹಾಗೂ ಡ್ರಗ್ಸ್‌ ಕೃತ್ಯಗಳಲ್ಲಿ ಫುಡ್‌ ಡೆಲವರಿ ಬಾಯ್‌ಗಳು ಪಾಲ್ಗೊಂಡಿರುವ ವಿಷಯ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಗರದಲ್ಲಿ ಕಾರ್ಯ ನಿರ್ವಹಿಸುವ ವಿವಿಧ ಟ್ಯಾಕ್ಸಿ ಏಜೆನ್ಸಿಗಳು, ಲಾಜಿಸ್ಟಿಕ್‌ ಏಜೆನ್ಸಿಗಳು, ಆಹಾರ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಪೂರೈಸುವ ಸಂಸ್ಥೆಗಳ ಪದಾಧಿಕಾರಿಗಳ ಜೊತೆ ಶನಿವಾರ ನಡೆಸಿದ ಸಭೆಯಲ್ಲಿ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ಈ ಎಚ್ಚರಿಕೆ ನೀಡಿದ್ದಾರೆ.

ನೌಕರರ ನೇಮಕಾತಿಗೆ ಮುನ್ನ ಆ ಸಿಬ್ಬಂದಿಯ ಕ್ರಿಮಿನಲ್‌ ಹಿನ್ನೆಲೆ ಹಾಗೂ ಅವರಿಂದ ಆಧಾರ್‌ ಕಾರ್ಡ್‌ ಹಾಗೂ ಮತದಾರರ ಗುರುತಿನ ಪತ್ರ ಪಡೆದು ಕಡ್ಡಾಯವಾಗಿ ಪರಿಶೀಲಿಸಬೇಕು. ಇದಕ್ಕೆ ‘ಸೇವಾ ಸಿಂಧು’ ಸೌಲಭ್ಯವನ್ನು ಪಡೆದು ಪರಿಶೀಲಿಸಿದ ನಂತರವೇ ಉದ್ಯೋಗ ಕೊಡಬೇಕು ಎಂದು ತಿಳಿಸಿದರು.

ಟ್ಯಾಕ್ಸಿ ಬುಕ್‌ ಮಾಡಿರುವ ಗ್ರಾಹಕರು, ಪ್ರಯಾಣ ಪ್ರಾರಂಭಿಸಿದ ಬಳಿಕ ನಿಗದಿತ ಸ್ಥಳಕ್ಕೆ ನಿರ್ದಿಷ್ಟಸಮಯಕ್ಕೆ ತಲುಪಿದ್ದಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಹಾಗೂ ಆಹಾರ ಬುಕ್‌ ಮಾಡಿದ ಗ್ರಾಹಕರನಿಗೆ ಆಹಾರ ತಲುಪಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಾಂತ್ರಿಕ ಸೌಲಭ್ಯವನ್ನು ಅಳವಡಿಸಿಕೊಳ್ಳಬೇಕು. ಡೊಂಝೋ, ಪೋರ್ಟರ್‌ ಹಾಗೂ ಫ್ಲಿಫ್‌ಕಾರ್ಚ್‌ ಮುಂತಾದ ಡೆಲಿವರಿ ಪ್ಲಾಟ್‌ ಫಾರಂಗಳಲ್ಲಿ ನಿಷೇಧಿತ ವಸ್ತುಗಳನ್ನು ಸರಬರಾಜು ಮಾಡದಂತೆ ಎಚ್ಚರವಹಿಸಬೇಕು ಎಂದು ಅವರು ಸಂಸ್ಥೆಗಳ ಪದಾಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.

ಸಭೆಯಲ್ಲಿ ವಿಶೇಷ ಆಯುಕ್ತ (ಸಂಚಾರ) ಡಾ. ಎಂ.ಎ.ಸಲೀಂ, ಹೆಚ್ಚುವರಿ ಆಯುಕ್ತ ಸಂದೀಪ್‌ ಪಾಟೀಲ್‌, ಜಂಟಿ ಆಯುಕ್ತರಾದ ಎಂ.ಎನ್‌.ಅನುಚೇತ್‌, ಡಾ. ಎಸ್‌.ಡಿ.ಶರಣಪ್ಪ, ರಮಣಗುಪ್ತ ಹಾಗೂ ಓಲಾ, ಉಬರ್‌, ರಾರ‍ಯಪಿಡೋ ಸೇರಿದಂತೆ ಟ್ಯಾಕ್ಸಿ ಅಗ್ರಿಗೇಟ​ರ್ಸ್‌ ಹಾಗೂ ಝೋಮಟೋ, ಡೊಂಝೋ ಹಾಗೂ ಸ್ವಿಗಿ ಸೇರಿದಂತೆ ಆನ್‌ಲೈನ್‌ ಫುಡ್‌ ಡೆಲಿವರಿ ಹಾಗೂ ಸರಕು ಸಾಗಾಣಿಕೆ ಏಜೆನ್ಸಿಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಪೊಲೀಸರ ಸೂಚನೆಗಳು

*ಸಂಸ್ಥೆಯ ಸಾಫ್ಟ್‌ವೇರ್‌ ಅಪ್ಲಿಕೇಷನ್‌ಗಳಲ್ಲಿ ಹಾಗೂ ವಾಹನಗಳಲ್ಲಿ ಸೇಫ್ಟಿ ಸ್ಟಿಕ​ರ್ಸ್‌ಗಳ ಹಾಗೂ ಪೊಲೀಸ್‌ ನಿಯಂತ್ರಣ ಕೊಠಡಿ 112 ಬಗ್ಗೆ ಅರಿವು ಮೂಡಿಸಬೇಕು.
*ಸಂಸ್ಥೆಯ ಸಮವಸ್ತ್ರ ದುರುಪಯೋಗವಾಗದಂತೆ ನೌಕರರು ಕೆಲಸ ಬಿಟ್ಟಾಗ ಸಂಸ್ಥೆಯ ಸಮವಸ್ತ್ರ ಹಿಂಪಡೆಯಬೇಕು.
*ಗ್ರಾಹಕರು ಬುಕಿಂಗ್‌ ಮಾಡಿದ ಸ್ಥಳಗಳು ಹೊರಪಡಿಸಿ ಬೇರೆಡೆ ವಸ್ತುಗಳನ್ನು ಡೆಲಿವರಿ ಮಾಡಬಾರದು.
*ಡೆಲಿವರಿ ವಾಹನಗಳ ಸವಾರರಿಗೆ ಸಂಚಾರ ನಿಯಮ ಕಾನೂನು ಪಾಲನೆಗೆ ಸೂಚಿಸಬೇಕು. ಅಗತ್ಯವಿದ್ದಲ್ಲಿ ಉಚಿತವಾಗಿ ಸಂಚಾರ ಪೊಲೀಸ್‌ರಿಂದ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗುವುದು.
*ಪ್ರತಿ ಸಂಸ್ಥೆ ತುರ್ತು ಮಾಹಿತಿ ವಿನಿಮಯಕ್ಕಾಗಿ 24/7 ನೋಡಲ್‌ ಅಧಿಕಾರಿಗಳನ್ನು ನೇಮಿಸಿಕೊಳ್ಳಬೇಕು.
*ಗ್ರಾಹಕರು ತಮ್ಮ ಸಮಸ್ಯೆಗಳ ಬಗ್ಗೆ ನೋಡೆಲ್‌ ಅಧಿಕಾರಿಗೆ ತಿಳಿಸಿದಾಗ ಅಂತಹ ದೂರುಗಳ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಗಳಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಲು ಸಹಕರಿಸಬೇಕು.
*ಗ್ರಾಹಕರ ಸಂಪರ್ಕಕ್ಕೆ ಬರುವ ನೌಕರರಿಗೆ ನಿರಂತರವಾಗಿ ಸಂವೇದನಶೀಲತೆ ಬಗ್ಗೆ ತರಬೇತಿ ಕಾರ್ಯಾಗಾರ ನಡೆಸಬೇಕು.
 

Follow Us:
Download App:
  • android
  • ios