ಬೇರೊಬ್ಬರ ನಗ್ನ ಚಿತ್ರಕ್ಕೆ ಫೋಟೋ ಲಗತ್ತಿಸಿ ಮಾನ ಹರಾಜು
ಬೆಂಗಳೂರು(ಜು.28): ಸಾಲದ ಬಡ್ಡಿ ಪಾವತಿಸುವಂತೆ ಚೀನಾ ಮೂಲದ ಸಾಲ ಆ್ಯಪ್‌ಗಳು ನೀಡುತ್ತಿದ್ದ ಕಿರುಕುಳ ಸಹಿಸಲಾರದೆ ಖಾಸಗಿ ಬ್ಯಾಂಕ್ ಉದ್ಯೋಗಿಯೊಬ್ಬರು ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಜ್ಞಾನಭಾರತಿ ಸಮೀಪ 2 ದಿನದ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಾಗದೇವನಹಳ್ಳಿ ಬಳಿಯ ದೊಡ್ಡಗೊಲ್ಲರಹಟ್ಟಿನಿವಾಸಿ ನಂದಕುಮಾರ್ (52) ಮೃತ ದುರ್ದೈವಿ. ಜ್ಞಾನಭಾರತಿ ಸಮೀಪ ಬುಧವಾರ ಬೆಳಗ್ಗೆ 9ಕ್ಕೆ ಮೈಸೂರಿನಿಂದ ನಗರಕ್ಕೆ ಬರುತ್ತಿದ್ದ ರೈಲಿಗೆ ತಲೆಕೊಟ್ಟು ನಂದಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತನ ಪ್ಯಾಂಟ್ ಜೇಬಿನಲ್ಲಿದ್ದ ಆಧಾರ್ ಕಾರ್ಡ್ ಹಾಗೂ ಡೆತ್ ನೋಟ್‌ನಿಂದ ಮೃತನ ಗುರುತು ಪತ್ತೆಯಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಆ್ಯಪ್‌ಗಳ ಕಿರುಕುಳ
ದೊಡ್ಡಗೊಲ್ಲರಹಟ್ಟಿಯಲ್ಲಿ ತಮ್ಮ ಪತ್ನಿ ಮತ್ತು ಮಗಳ ಜತೆ ನೆಲೆಸಿದ್ದ ನಂದಕುಮಾರ್ ಅವರು, ರಾಜಾಜಿ ನಗರದ ಎಸ್‌ವಿಸಿ ಸಹಕಾರಿ ಬ್ಯಾಂಕ್‌ನಲ್ಲಿ ಉದ್ಯೋಗದಲ್ಲಿದ್ದರು. ಕೆಲ ತಿಂಗಳ ಹಿಂದೆ ಆನ್‌ಲೈನ್‌ನಲ್ಲಿ ಚೀನಾ ಮೂಲದ ಸುಮಾರು 40ಕ್ಕೂ ಆ್ಯಪ್‌ಗಳಿಂದ .15 ಸಾವಿರದಿಂದ 3 ಲಕ್ಷದವರೆಗೆ ನಂದಕುಮಾರ್ ಸಾಲ ಪಡೆದಿದ್ದರು. ಬಳಿಕ ನಿಗದಿತ ಸಮಯಕ್ಕೆ ಬಡ್ಡಿ ಸಮೇತ ಅವರು ಸಾಲ ಪಾವತಿಸಿದ್ದರು. ಹೀಗಿದ್ದರೂ ಕೆಲ ಆ್ಯಪ್‌ಗಳು, ಇನ್ನು ಹೆಚ್ಚಿನ ಬಡ್ಡಿ ಪಾವತಿಸುವಂತೆ ನಂದುಕುಮಾರ್ ಅವರಿಗೆ ಕಿರುಕುಳ ನೀಡುತ್ತಿದ್ದವು. ಅಲ್ಲದೆ ನಂದ ಕುಮಾರ್ ಅವರ ಭಾವಚಿತ್ರವನ್ನು ಬೇರೊಬ್ಬ ನಗ್ನ ವ್ಯಕ್ತಿಯ ಫೋಟೋಗೆ ಅಂಟಿಸಿ ಅವರ ಸ್ನೇಹಿತರು ಹಾಗೂ ಕುಟುಂಬ ಸದಸ್ಯರಿಗೆ ರವಾನಿಸಿ ಆ್ಯಪ್‌ಗಳು ಮಾನ ಕಳೆದಿದ್ದವು. ಇದರಿಂದ ನಂದಕುಮಾರ್ ಕುಟುಂಬದಲ್ಲಿ ಕೂಡ ಕಲಹ ಮೂಡಿತ್ತು. ಈ ಬೆಳವಣಿಗೆಯಿಂದ ಬೇಸತ್ತ ಅವರು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪಕ್ಕದೂರಿನವನ ಜತೆ ಹೆಂಡತಿ ಚಕ್ಕಂದ; ಬೇಸತ್ತು ಗಂಡ ನೇಣಿಗೆ ಶರಣು
ಎಂದಿನಂತೆ ಸೋಮವಾರ ಬೆಳಗ್ಗೆ ಕೆಲಸ ಹೋಗುವುದಾಗಿ ಮನೆಯಿಂದ ಹೊರ ಬಂದ ನಂದಕುಮಾರ್ ಅವರು, ಜ್ಞಾನಭಾರತಿ ಬಳಿಗೆ ಬಂದಿದ್ದಾರೆ. ಬಳಿಕ ಮೈಸೂರಿನಿಂದ ನಗರಕ್ಕೆ ಬರುತ್ತಿದ್ದ ಪ್ಯಾಸೆಂಜರ್ ರೈಲಿಗೆ ಸಿಲುಕಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈಲು ಹಳಿ ಮೇಲೆ ಮೃತ ದೇಹ ನೋಡಿದ ಸಾರ್ವಜನಿಕರು, ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿದ ರೈಲ್ವೆ ಪೊಲೀಸರು, ಮೃತದೇಹ ಬಳಿ ಪರಿಶೀಲಿಸಿದಾಗ ಗುರುತು ಪತ್ತೆಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಟಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡೆತ್‌ನೋಟ್‌ನಲ್ಲಿ ಆ್ಯಪ್‌ಗಳ ಮಾಹಿತಿ
ಮೃತನ ಬಳಿ ಮರಣ ಪತ್ರ ಪತ್ತೆಯಾಗಿದ್ದು, ಇದರಲ್ಲಿ ಸಾಲ ನೀಡಿ ಆ್ಯಪ್‌ಗಳು ಕೊಟ್ಟಮಾನಸಿಕ ಕಿರುಕುಳದ ಬಗ್ಗೆ ಅವರು ಸವಿಸ್ತಾರವಾಗಿ ಬರೆದಿದ್ದಾರೆ. ಅಲ್ಲದೆ 40 ಆ್ಯಪ್‌ಗಳ ಹೆಸರು ಪ್ರಸ್ತಾಪಿಸಿ ಅವುಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಮೃತ ನಂದಕುಮಾರ್ ಆಗ್ರಹಿಸಿರುವುದಾಗಿ ತಿಳಿದು ಬಂದಿದೆ.
