ನಲವತ್ಮೂರು ವರ್ಷಗಳಾದರೂ ಮದುವೆ ಆಗುವುದಕ್ಕೆ ಹೆಣ್ಣು ಸಿಗಲಿಲ್ಲ ಎಂಬ ಕೊರಗಿನಲ್ಲಿ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿ, ಶೂಟ್ ಮಾಡಿಕೊಂಡು ಭೀಕರವಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆ ಕೆ. ಬೊಯಿಕೇರಿಯಲ್ಲಿ ನಡೆದಿದೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಫೆ.17): ನಲವತ್ಮೂರು ವರ್ಷಗಳಾದರೂ ಮದುವೆ ಆಗುವುದಕ್ಕೆ ಹೆಣ್ಣು ಸಿಗಲಿಲ್ಲ ಎಂಬ ಕೊರಗಿನಲ್ಲಿ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿ, ಶೂಟ್ ಮಾಡಿಕೊಂಡು ಭೀಕರವಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆ ಕೆ. ಬೊಯಿಕೇರಿಯಲ್ಲಿ ನಡೆದಿದೆ. ವಿರಾಜಪೇಟೆ ತಾಲ್ಲೂಕಿನ ಕೆ. ಬೊಯಿಕೇರಿಯ ಸತೀಶ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದ ಸತೀಶ್ ಭಾನುವಾರ ಬೆಳಿಗ್ಗೆಯಿಂದ ಮನೆಯಲ್ಲೇ ಇದ್ದರು. ಭಾನುವಾರ ರಾತ್ರಿ ತಮ್ಮ ಮನೆಯಲ್ಲಿದ್ದ ತಮ್ಮದೇ ಒಂಟಿ ನಳಿಕೆ ಗನ್ ನಿಂದ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಆರ್ಥಿಕವಾಗಿ ಚೆನ್ನಾಗಿಯೇ ಇದ್ದರೂ ಮದುವೆಯಾಗುವುದಕ್ಕೆ ಹೆಣ್ಣು ದೊರೆತ್ತಿರಲಿಲ್ಲ ಎನ್ನಲಾಗಿದೆ.
ಸತೀಶ್ ಅಷ್ಟೇ ಅಲ್ಲ ಅವರ ಎರಡನೇ ಅಣ್ಣನಿಗೂ ಮದುವೆಯಾಗಿಲ್ಲ. 2010 ರಲ್ಲಿ ಸತೀಶ್ ಅವರ ತಂದೆ ಸಾವನ್ನಪ್ಪಿದ್ದರು. ಅದಾದ ಬಳಿಕ ಒಂದೇ ಸಂಪ್ರದಾಯದಂತೆ ಒಂದೇ ವರ್ಷದಲ್ಲಿ ಮದುವೆ ಮಾಡಲು ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಅದಾದ ಬಳಿಕ ಮೂರು ವರ್ಷಗಳು ಕಾದಿದ್ದಾರೆ. ಅದಾದ ಬಳಿಕ ಹೆಣ್ಣು ಸಿಗದೆ ಮದುವೆಯೇ ಆಗಿಲ್ಲ. ಇದೇ ಕೊರಗಿನಲ್ಲಿ ಸತೀಶ್ ಸಾಕಷ್ಟು ಮದ್ಯ ಸೇವನೆಗೂ ದಾಸರಾಗಿದ್ದರು ಎನ್ನಲಾಗಿದೆ. ಕಾರ್ಪೆಂಟರ್ ಅಗಿ ಕೆಲಸ ಮಾಡುತ್ತಿದ್ದ ಸತೀಶ್ ಮದ್ಯ ಸೇವನೆ ಮಾಡಿದಾಗಲೆಲ್ಲಾ ನಾನು ಶೂಟ್ ಮಾಡಿಕೊಂಡು ಸಾಯುತ್ತೇನೆ ಎನ್ನುತ್ತಿದ್ದರಂತೆ. ಆದರೆ ಮನೆಯವರಾಗಲಿ, ಸ್ನೇಹಿತರಾಗಲಿ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎನ್ನಲಾಗಿದೆ.
ಇಬ್ಬರ ಬಲಿ ಪಡೆದಿದ್ದ ವೇದ ಹೆಸರಿನ ಪುಂಡಾನೆ ಸೆರೆ: ದುಬಾರೆ ಸಾಕಾನೆ ಶಿಬಿರದ ಕ್ರಾಲ್‌ನಲ್ಲಿ ಸನ್ನಡತೆಯ ಪಾಠ!
ಭಾನುವಾರ ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಗನ್ ನಿಂದ ಶೂಟ್ ಮಾಡಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಹೋದ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಮೃತದೇಹವನ್ನು ಹೌಹಾರಿದ್ದಾರೆ. ಒಂಟಿ ನಳಿಕೆಯಿಂದ ಶೂಟ್ ಚಿಮ್ಮಿದ ಬುಲೆಟ್ ಸತೀಶನ ತಲೆಯನ್ನು ಛಿದ್ರ, ಛಿದ್ರಗೊಳಿಸಿದೆ. ಬಳಿಕ ಪ್ರಕರಣ ದಾಖಲಿಸಿಕೊಂಡು ಮಡಿಕೇರಿಯಲ್ಲಿ ಇರುವ ಕೊಡಗು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಮೃತದೇಹ ಸಾಗಿಸಿದ್ದಾರೆ. ಈ ಕುರಿತು ಮಾತನಾಡಿದ ಸತೀಶ್ ಅವರ ಹಿರಿಯ ಅಣ್ಣ ಉಮೇಶ್ ನಾವು ಮೂವರು ಗಂಡು ಮಕ್ಕಳು. ನಾವೆಲ್ಲಾ ಆರ್ಥಿಕವಾಗಿ ಚೆನ್ನಾಗಿದ್ದೇವೆ. ಆದರೆ 43 ವರ್ಷವಾದರೂ ಸತೀಶನಿಗೆ ಮತ್ತು ಆತನ ಸಹೋದರನಿಗೂ ಮದುವೆಯಾಗಿರಲಿಲ್ಲ.
ಹೀಗಾಗಿ ಕೆಲವು ದಿನಗಳ ಹಿಂದೆಯಷ್ಟೇ ಜೀವನ ಬೇಸರ ಎಂದೆಲ್ಲಾ ಹೇಳಿಕೊಂಡಿದ್ದ. ಯಾಕೆ ಎಂದು ಕೇಳಿದರೆ ಏನನ್ನೂ ಸರಿಯಾಗಿ ಹೇಳುತ್ತಿರಲಿಲ್ಲ. ಊರಿನವರೊಂದಿಗೆಲ್ಲಾ ಚನ್ನಾಗಿದ್ದ, ಒಳ್ಳೆಯ ಹುಡುಗನಾಗಿದ್ದ. ಆದರೆ ಮದುವೆಯಾಗಿಲ್ಲ ಎಂಬ ಕೊರಗು ಕೂಡ ಇರಬಹುದು. ಆದರೆ ಅದನ್ನು ನಮ್ಮೊಂದಿಗೆ ಎಂದೂ ಹೇಳಿಕೊಂಡಿರಲಿಲ್ಲ ಎಂದು ಉಮೇಶ್ ಹೇಳಿದ್ದಾರೆ. ಆದರೆ ಪೊಲೀಸ್ ನವರಿಗೆ ದೂರು ನೀಡಿರುವ ಸತೀಶ್ ಮನೆಯವರು ಮದುವೆಯಾಗದೆ ಇದ್ದು, ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂಬ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಮದುವೆ ಆಗದೇ ಇರುವುದಕ್ಕೆ ಆತ್ಮಹತ್ಯೆ ಅಂತ ದೂರು ನೀಡಿದ್ದಾರೆ.
ಕಟ್ಟೆಮಾಡು ಮಹಾಮೃತ್ಯುಂಜಯ ದೇವಾಲಯದ ಸಾಂಪ್ರದಾಯಿಕ ವಸ್ತ್ರ ನಿರ್ಬಂಧಕ್ಕೆ ಹೈಕೋರ್ಟ್ ತಡೆ
ಆದರೆ ನಾವು ಇದನ್ನೇ ಅಂತಿಮ ಎಂದು ಹೇಳಲು ಸಾಧ್ಯವಿಲ್ಲ. ಅವರ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಆದರೆ ತನಿಖೆ ನಡೆಯದೆ ನಾವು ಯಾವುದೇ ಅಂತಿಮ ನಿರ್ಧಾರವನ್ನು ಮಾಡಲಾಗುವುದಿಲ್ಲ. ಮೃತ ದೇಹವನ್ನು ನೋಡಿದಾಗ ಸ್ವತಃ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತೆ ಕಾಣಿಸುತ್ತಿದೆ. ಆದರೆ ಆತ್ಮಹತ್ಯೆಗೆ ಕಾರಣ ಏನು ಎಂಬುದು ಗೊತ್ತಿಲ್ಲ. ತನಿಖೆಯ ನಂತರವಷ್ಟೇ ನಿಜಾಂಶ ಏನು ಎಂಬುದು ಗೊತ್ತಾಗಬೇಕಾಗಿದೆ ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಹೇಳಿದ್ದಾರೆ.
