ಬೆಂಗಳೂರು: ಕಾರ್ಮಿಕನ 25,000 ಸುಲಿಗೆ ಮಾಡಿ ಆಟೋ ಚಾಲಕ ಪರಾರಿ
ಈ ಸಂಬಂಧ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು(ಅ.27): ಡ್ರಾಪ್ ಕೊಡುವ ನೆಪದಲ್ಲಿ ಕಾರ್ಮಿಕನನ್ನು ಆಟೋದಲ್ಲಿ ಹತ್ತಿಸಿಕೊಂಡು 25 ಸಾವಿರ ರು. ಸುಲಿಗೆ ಮಾಡಿ ಪರಾರಿಯಾಗಿರುವ ಘಟನೆ ಕಾಟನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹಣ ಕಳೆದುಕೊಂಡಿರುವ ಪಶ್ಚಿಮ ಬಂಗಾಳ ಮೂಲದ ಸಬ್ದುಲ್ ಹಕ್ (25) ಮೂರು ತಿಂಗಳ ಹಿಂದೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದು, ಗಾಂಧಿನಗರದ ವಿಜಯ ಕೆಫೆ ಕಟ್ಟಡದಲ್ಲಿ ಡಿಗ್ಗರ್ ಕೆಲಸ ಮಾಡುತ್ತಿದ್ದ. ಅ.19ರಂದು ಸಂಜೆ 6.45ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಸಂಬಳ ಪಡೆದು ತರಕಾರಿ ತರಲು ಬಿವಿಕೆ ಐಯ್ಯಂಗಾರ್ ರಸ್ತೆಯಲ್ಲಿ ಹೋಗುವಾಗ ಅಪರಿಚಿತ ಆಟೋ ಚಾಲಕ ಎಲ್ಲಿಗೆ ಹೋಗಬೇಕು ಎಂದು ಕೇಳಿದ್ದಾನೆ. ಕೆ.ಆರ್.ಮಾರ್ಕೆಟ್‌ಗೆ ಹೋಗಬೇಕು ಎಂದು ಸಬ್ದುಲ್ ಹಕ್ ಹೇಳಿದ್ದಾನೆ. ಈ ವೇಳೆ ಡ್ರಾಪ್ ಕೊಡುವುದಾಗಿ ಆತನನ್ನು ಆಟೋ ಹತ್ತಿಸಿಕೊಂಡಿದ್ದಾನೆ.
ತುಮಕೂರಿನಲ್ಲಿ ರೌಡಿಶೀಟರ್ ಪೊಲಾರ್ಡ್ ಬರ್ಬರ ಹತ್ಯೆ
ಬಿವಿಕೆ ಐಯ್ಯಂಗಾರ್ ರಸ್ತೆಯಿಂದ ಮೆಜೆಸ್ಟಿಕ್‌ನ ರೈಲು ನಿಲ್ದಾಣದತ್ತ ತೆರಳಿದ ಆಟೋ ಚಾಲಕ ಅಲ್ಲಿ ಮಹಿಳೆಯೊಬ್ಬಳನ್ನು ಆಟೋ ಹತ್ತಿಸಿಕೊಂಡಿದ್ದಾನೆ. ಬಳಿಕ ಕೆಎಸ್‌ಆರ್ ರೈಲು ನಿಲ್ದಾಣದ ಹಿಂಭಾಗದ ಗೇಟ್‌ನ ಫ್ಲೈ ಓವರ್ ಬಳಿ ತೆರಳಿ ಸಬ್ದುಲ್ ಹಕ್‌ನನ್ನು ಆಟೋದಿಂದ ಕೆಳಗೆ ಇಳಿಸಿ, ಆಟೋ ಚಾಲಕ ಹಾಗೂ ಆ ಮಹಿಳೆ ಬಲವಂತವಾಗಿ ಆತನ ಜೇಬಿನಲ್ಲಿದ್ದ 25 ಸಾವಿರ ರು. ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.