ಬೆಂಗಳೂರಿನ ಮದರಸಾದಲ್ಲಿ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಮಾಲೀಕನ ಪುತ್ರನನ್ನು ಬಂಧಿಸಲಾಗಿದೆ. ಬೋಧನೆಯ ನೆಪದಲ್ಲಿ ಹಲ್ಲೆ ನಡೆಸುತ್ತಿದ್ದ ಆರೋಪಿಯನ್ನು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಬಂಧಿಸಲಾಗಿದೆ.

ಬೆಂಗಳೂರು (ಫೆ.21): ಮದರಸಾದಲ್ಲಿ ಪಠ್ಯ ಬೋಧಿಸುವ ನೆಪದಲ್ಲಿ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ಮದರಸಾ ಮಾಲೀಕನ ಕಿರಿಯ ಪುತ್ರನೊಬ್ಬನನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೊತ್ತನೂರಿನ ಮಹಮ್ಮದ್ ಹಸನ್ ಬಂಧಿತ. ಥಣಿಸಂದ್ರ ಮುಖ್ಯರಸ್ತೆಯಲ್ಲಿರುವ ಮದರಸಾದಲ್ಲಿ ಓದುವ ವಿದ್ಯಾರ್ಥಿನಿಯರ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿ ಹಸನ್ ಅನುಚಿತವಾಗಿ ವರ್ತಿಸಿದ್ದ. ಈ ಕೃತ್ಯದ ವಿಡಿಯೋಗಳು ಬಹಿರಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಮದರಸದಲ್ಲಿ ಅಪ್ರಾಪ್ತ ಬಾಲಕನ ಮೇಲೆ ಶಿಕ್ಷಕರಿಬ್ಬರ ಬಲತ್ಕಾರ ಪ್ರಕರಣ; ಕೇಸ್ ರದ್ದುಗೊಳಿಸಲು ಹೈಕೊರ್ಟ್‌ ನಿರಾಕರಣೆ

ಕಳೆದ ಮೂರು ವರ್ಷಗಳಿಂದ ಥಣಿಸಂದ್ರ ಮುಖ್ಯರಸ್ತೆಯಲ್ಲಿ ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹಸನ್‌ ತಂದೆ ಮದರಸಾ ನಡೆಸುತ್ತಿದ್ದಾರೆ. ಅದರಲ್ಲಿ 200 ಹೆಣ್ಣು ಮಕ್ಕಳು ಇದ್ದಾರೆ. ಅವರ ಹಿರಿಯ ಪುತ್ರನೇ ಪ್ರಾಂಶುಪಾಲನಾಗಿದ್ದಾನೆ. ಈ ಮದರಸಾಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಮಾಲೀಕರ ಕಿರಿಯ ಪುತ್ರ ಹಸನ್‌, ಬೋಧಿಸುವ ನೆಪದಲ್ಲಿ ಬಾಲಕಿಯರಿಗೆ ಹೊಡೆಯುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.

ಆಯುಕ್ತರಿಗೆ ದೂರು ನೀಡಿದ ಪೋಷಕರು:

ಇತ್ತೀಚಿಗೆ ತನ್ನ ಮೇಲೆ ಹಸನ್ ದೌರ್ಜನ್ಯ ನಡೆಸಿದ್ದ ಬಗ್ಗೆ ಪೋಷಕರ ಬಳಿ ವಿದ್ಯಾರ್ಥಿನಿ ಹೇಳಿ ಕಣ್ಣೀರಿಟ್ಟಿದ್ದಳು. ಈ ವಿಚಾರ ತಿಳಿದು ಕೋಪಗೊಂಡ ಪೋಷಕರು, ಕೂಡಲೇ ಮದರಸಾಗೆ ತೆರಳಿ ಅಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಹಸನ್ ದುಂಡಾವರ್ತನೆ ಕೃತ್ಯಗಳು ಬಯಲಾಗಿವೆ. ಇದರಿಂದ ಪೋಷಕರು, ಮದರಸಾ ಆಡಳಿತ ಮಂಡಳಿ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸಮೇತ ಫೇಸ್ ಬುಕ್ ಹಾಗೂ ಟ್ವಿಟರ್‌ನಲ್ಲಿ ನಗರ ಪೊಲೀಸ್ ಆಯುಕ್ತರಿಗೆ ಟ್ಯಾಗ್‌ ಮಾಡಿ ಪೋಷಕರು ದೂರು ನೀಡಿದ್ದರು. ದೂರನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತ ಬಿ.ದಯಾನಂದ್ ಈ ಕುರಿತು ತನಿಖೆಗೆ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಮದರಸಾ ಫೋಟೋ ಕ್ಲಿಕ್ಕಿಸುತ್ತಿದ್ದ ಶಿಕ್ಷಕನ ಮೇಲೆ ಮಾರಣಾಂತಿಕ ಹಲ್ಲೆ

ಬಂಧಿತ ಪಿಯುಸಿ ವಿದ್ಯಾರ್ಥಿ

ಮದರಸಾದಲ್ಲಿ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ಆರೋಪದ ಮೇರೆಗೆ ಮಾಲೀಕನ ಕಿರಿಯ ಪುತ್ರ ಹಸನ್‌ನನ್ನು ಬಂಧಿಸಲಾಗಿದ್ದು, ಖಾಸಗಿ ಕಾಲೇಜಿನಲ್ಲಿ ಆತ ಪಿಯುಸಿ ಓದುತ್ತಿದ್ದಾನೆ. ಈ ಘಟನೆ ಕುರಿತು ತನಿಖೆ ಮುಂದುವರೆದಿದೆ.

-ಎ.ಜೆ.ಸಜೀತ್, ಡಿಸಿಪಿ, ಈಶಾನ್ಯ ವಿಭಾಗ.