ಮದ್ಯ ಸೇವಿಸಿ ಬಂದ ಗಂಡ ಪತ್ನಿಯ ಕೆನ್ನೆಗೆ ಹೊಡೆದ, ಮುಂದಾಗಿದ್ದೇ ಬೇರೆ!
ಗಂಡ ಕೆನ್ನೆಗೆ ಹೊಡೆದ ಎನ್ನುವ ಕಾರಣಕ್ಕಾಗಿ ಅಸ್ಸಾಂನಲ್ಲಿ 25 ವರ್ಷದ ಮಹಿಳೆಯೊಬ್ಬಳು ತನ್ನ ಪತಿಯನ್ನು ಕತ್ತರಿಯಿಂದ ಚುಚ್ಚಿ ಸಾಯಿಸಿದ ಘಟನೆ ನಡೆದಿದೆ. ಪಾನಮತ್ತನಾಗಿ ಬಂದಿದ್ದ ಗಂಡ ಸಿಟ್ಟಿನಲ್ಲಿ ಹೆಂಡತಿ ಮೇಲೆ ಕೈ ಮಾಡಿದ್ದಾನೆ. ಇದರ ಬೆನ್ನಲ್ಲಿಯೇ ಆಕೆ ಗಂಡನನ್ನು ಇರಿದು ಸಾಯಿಸಿದ್ದಾಳೆ.
ಗುವಾಹಟಿ (ಫೆ.22): ತನ್ನ 30 ವರ್ಷದ ಪತಿಯನ್ನು ಇರಿದು ಕೊಂದ ಆರೋಪದ ಮೇಲೆ 25 ವರ್ಷದ ಮಹಿಳೆಯನ್ನು ಅಸ್ಸಾಂನ ಸಿಲ್ಚಾರ್‌ನಲ್ಲಿ ಮಂಗಳವಾರ ರಾತ್ರಿ ಬಂಧಿಸಲಾಗಿದೆ. ಮಹಿಳೆಯ ಪತಿ ಕುಡಿದ ಅಮಲಿನಲ್ಲಿ ಆಕೆಗೆ ಕಪಾಳಮೋಕ್ಷ ಮಾಡಿದ್ದ, ಪ್ರತಿಯಾಗಿ ಆಕೆ ಕತ್ತರಿಯಿಂದ ಇರಿದು ಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.ಪತ್ನಿಯನ್ನು ಮಂಪಿ ಬೇಗಂ ಎಂದು ಗುರುತಿಸಲಾಗಿದ್ದು, ಸಿಲ್ಚಾರ್‌ನ ಮೆಹರ್‌ಪುರ ಪ್ರದೇಶದ ನಿವಾಸಿಯಾಗಿದ್ದಾರೆ. ಆಕೆಯ ಮೃತ ಪತಿ ಫರ್ಮಿನ್ ಉದ್ದೀನ್ ಬರ್ಭುಯ್ಯ ಆಟೋರಿಕ್ಷಾ ಚಾಲಕ ಎಂದು ಗುರುತಿಸಲಾಗಿದೆ. ಗಾಯಗೊಂಡಿದ್ದ ಪತಿಯನ್ನು ಸಿಲ್ಚಾರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ (ಎಂಎಂಸಿಎಚ್) ಪತ್ನಿ ದಾಖಲು ಮಾಡಿದ್ದಳು. ಅಲ್ಲಿಂದಲೇ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಕರೆದುಕೊಂಡು ಬಂದ ನಂತರ ಎಸ್‌ಎಂಸಿಎಚ್‌ನ ವೈದ್ಯರು ಪೊಲೀಸರಿಗೆ ಕರೆ ಮಾಡಿದ್ದಾರೆ ಎಂದು ಕ್ಯಾಚಾರ್ ಜಿಲ್ಲೆಯ ಪೊಲೀಸ್ ಅಧೀಕ್ಷಕ (ಎಸ್‌ಪಿ) ನುಮಲ್ ಮಹತ್ತಾ ಹೇಳಿದ್ದಾರೆ. "ಆತನ ದೇಹದ ಪ್ರಮುಖ ಭಾಗಗಳಲ್ಲಿ ತೀವ್ರವಾದ ಗಾಯಗಳಾಗಿದ್ದವು. ಇದು ಘಟನೆಯ ನಂತರ ಕೆಲವೇ ಗಂಟೆಗಳಲ್ಲಿ ಸಾವಿಗೆ ಕಾರಣವಾಯಿತು. ನಮ್ಮ ಅಧಿಕಾರಿಗಳು ಎಸ್‌ಎಂಸಿಎಚ್‌ನಲ್ಲಿ ಪತ್ನಿಯನ್ನು ಕಂಡು ಆಕೆಯನ್ನು ಬಂಧಿಸಿದ್ದಾರೆ' ಎಂದು ಮಹತ್ತಾ ಮಾಹಿತಿ ನೀಡಿದ್ದಾರೆ.
ವಿಚಾರಣೆ ನಡೆಸಿದ ಬಳಿಕ ಪತ್ನಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ಪ್ರತಿದಿನ ಎನ್ನುವಂತೆ ಪತಿ ನನಗೆ ಚಿತ್ರಹಿಂಸೆ ನೀಡುತ್ತಿದ್ದ. ಇದನ್ನು ತಾಳಲಾರದೆ ಸಿಟ್ಟಿನ ಭರದಲ್ಲಿ ನಾನು ಕತ್ತರಿಯಿಂದ ಇರಿದಿದ್ದೆ ಎಂದು ತಿಳಿಸಿದ್ದಾಳೆ. 'ಮಂಗಳವಾರ ರಾತ್ರಿ ಕೂಡ ಪಾನಮತ್ತನಾಗಿ ಬಂದಿದ್ದ ಆತ ಗಲಾಟೆ ಮಾಡುತ್ತಿದ್ದ ವೇಳೆ ಕೆನ್ನೆಗೆ ಹೊಡೆದಿದ್ದ. ಸಿಟ್ಟಿನಲ್ಲಿದ್ದ ನಾನು ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಆತನಿಗೆ ಕತ್ತರಿಯಿಂದ ಇರಿದಿದ್ದೆ' ಎಂದು ತಿಳಿಸಿದ್ದಾಳೆ. ನಾವು ಈ ಘಟನೆಯ ಕುರಿತು ತನಿಕೆ ಮಾಡುತ್ತಿದ್ದು, ಶೀಘ್ರದಲ್ಲಿಯೇ ಸತ್ಯವನ್ನು ಕಂಡುಹಿಡಿಯಲಿದ್ದೇವೆ ಎಂದು ಮಹತ್ತಾ ತಿಳಿಸಿದ್ದಾರೆ.
ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರು ಮೆಹರ್‌ಪುರದ ಕಬಿಯುರಾ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅವರ ಮನೆಯಲ್ಲಿ ಪ್ರತಿದಿನ ರಾತ್ರಿ ಜಗಳ ನಡೆಯುತ್ತಿತ್ತು ಎಂದು ಅವರ ನೆರೆಹೊರೆಯವರು ಹೇಳಿದ್ದಾರೆ. ಪತಿ-ಪತ್ನಿಯ ನಡುವೆ ಜಗಳ ನಡೆಯುತ್ತಿದ್ದು, ಕೆಲವೊಮ್ಮೆ ಹಿಂಸಾಚಾರವೂ ಆಗುತ್ತಿತ್ತು ಎಂದು ಆ ಪ್ರದೇಶದ ಮಹಿಳೆಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬೆಂಗಳೂರು: ಗಿರಾಕಿಗಳನ್ನೇ ಕಿಡ್ನಾಪ್ ಮಾಡಿಸಿದ ಕಾಲ್‌ಗರ್ಲ್..!
"ಕಳೆದ ರಾತ್ರಿ ನಾವು ಇವರ ಮನೆಯಿಂದ ಕಿರುಚಾಟ ಕೇಳಿದ್ದೆವು. ಇಬ್ಬರೂ ಕೂಡ ಹಿಂಸಾತ್ಮಕವಾಗಿ ಗಲಾಟೆ ಮಾಡುತ್ತಿದ್ದಾರೆ ಎಂದು ಭಾವಿಸಿದ್ದೆವು. ಆದರೆ ನಂತರ ಅವರು ಗಂಡನ ರಕ್ತಸಿಕ್ತ ಪ್ರಜ್ಞಾಹೀನ ದೇಹವನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿರುವುದನ್ನು ನಾವು ಗಮನಿಸಿದ್ದೇವೆ' ಎಂದು ನೆರೆಹೊರೆಯವರು ಹೇಳಿದ್ದಾರೆ.
ಕೋಲಾರ: ಗಂಡನನ್ನ ಬಿಟ್ಟು ಪ್ರಿಯಕರನ ಹಿಂದೆ ಬಿದ್ದವಳ ಪೀಕಲಾಟ..!
ಎಸ್‌ಎಂಸಿಎಚ್‌ನ ವೈದ್ಯರು ಆರಂಭದಲ್ಲಿ ಫರ್ಮಿನ್ ಉದ್ದೀನ್‌ಗೆ ಚಿಕಿತ್ಸೆ ನೀಡಿದರು. ಆದರೆ, ಒಂದೇ ಗಂಟೆಯಲ್ಲಿ ಅವರು ಸಾವಿಗೆ ಶರಣಾದರು "ಅವರ ದೇಹದಲ್ಲಿ ತೀವ್ರವಾದ ಗಾಯಗಳಿದ್ದವು. ಬಹಳ ರಕ್ತ ಸೋರಿಕೆಯಾಗಿತ್ತು. ಅವರನ್ನು ಉಳಿಸಲು ಪ್ರಯತ್ನಿಸಿದರಾದರೂ, ಚಿಕಿತ್ಸೆಯ ಹಾದಿಯಲ್ಲಿಯೇ ಅವರು ಸಾವು ಕಂಡರು' ಎಂದು ವೈದ್ಯರು ಹೇಳಿದ್ದಾರೆ. ಮಂಪಿ ಬೇಗಂ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಬಂಧನದ ನಂತರ ಸಿಲ್ಚಾರ್ ಸದರ್ ಪೊಲೀಸ್ ಠಾಣೆಯಲ್ಲಿ ಆಕೆಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.