ರಮೇಶ ಭಾಂಡಗೆ ಕೊಲೆ ಪ್ರಕರಣಕ್ಕೆ ಟ್ವಿಸ್ಟ್‌| ತನಿಖೆಯಲ್ಲಿ ತಪ್ಪೊಪ್ಪಿಕೊಂಡ ಆರೋಪಿಗಳು| ಬಂಧಿತರಿಂದ 6.10 ಲಕ್ಷ ರು. ಹಾಗೂ ಕೃತ್ಯಕ್ಕೆ ಬಳಸಿದ್ದ 2 ಬೈಕ್‌ ಹಾಗೂ 5 ಮೊಬೈಲ್‌ ವಶ| ತನಿಖಾ ತಂಡಕ್ಕೆ ಬಹುಮಾನ ಘೋಷಿಸಿದ ಆಯುಕ್ತರು| 

ಹುಬ್ಬಳ್ಳಿ(ಡಿ.09): ನಗರದ ಬಾಬಾಸಾನಗಲ್ಲಿಯಲ್ಲಿ ನಡೆದ ರಮೇಶ ಭಾಂಡಗೆ ಕೊಲೆ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದ್ದು, ಸುಪಾರಿ ಕೊಲೆ ಎಂಬುದನ್ನು ಶಹರ ಠಾಣೆ ಇನ್‌ಸ್ಪೆಕ್ಟರ್‌ ಎಂ.ಎಸ್‌. ಪಾಟೀಲ ನೇತೃತ್ವದ ತಂಡ ಪತ್ತೆ ಹೆಚ್ಚಿದ್ದು, ಸುಪಾರಿ ನೀಡಿದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ರಮೇಶ ಭಾಂಡಗೆ ಕೊಲೆಯನ್ನು ತಾನೇ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದ ಇಜಾಜಅಹ್ಮದ ಬಂಕಾಪುರನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇಷ್ಟಕ್ಕೆ ಸುಮ್ಮನೆ ಕೂತಿದ್ದರೇ ಪೊಲೀಸರಿಗೆ ಇದು ಸುಪಾರಿ ಕೊಲೆ ಎಂಬುದು ಪತ್ತೆಯಾಗುತ್ತಿರಲಿಲ್ಲ. ಆದರೆ, ಇಜಾಜ್‌ ಅಹ್ಮದ್‌ನ ಕಾಲ್‌ ಡಿಟೇಲ್ಸ್‌ ಪರಿಶೀಲಿಸಿದಾಗ ಇದು ಕೊಲೆಯಲ್ಲ, ಇದರ ಹಿಂದೆ ಬೇರೆಯದ್ದೇ ಸ್ವರೂಪವಿದೆ ಎಂದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪ್ರತ್ಯೇಕ ತಂಡ ರಚಿಸಿ ತನಿಖೆ ಚುರುಕುಗೊಳಿಸಿದಾಗ ಸುಪಾರಿ ಕೊಲೆ ಎಂಬುದನ್ನು ದೃಢಪಡಿಸಿಕೊಂಡಿದ್ದಾರೆ.

ಡ್ರಾಪ್‌ ಕೊಡುವ ನೆಪದಲ್ಲಿ ಸುಲಿಗೆ: ಇಬ್ಬರ ಹೆಡೆಮುರಿ ಕಟ್ಟಿದ ಪೊಲೀಸರು

ಈ ಕೊಲೆಗೆ 25 ಲಕ್ಷ ರು. ಕೊಡಲಾಗಿದೆ ಎಂಬುದನ್ನು ತನಿಖೆಯಲ್ಲಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಮಾಡಲು ಸುಪಾರಿ ನೀಡಿದ್ದ ಹಳೇಹುಬ್ಬಳ್ಳಿ ಸದರಸೋಪಾ ನಿವಾಸಿ ರಫೀಕ ಅನ್ವರಸಾಬ ಜವಾರಿ, ವಸೀಮ್‌ ಖಾಜಾಸಾಬ ಬಂಕಾಪುರ, ಜಂಗ್ಲಿಪೇಟೆಯ ಶಿವಾಜಿ ದೇವೇಂದ್ರಪ್ಪ ಮಿಶಾಳ, ಮಯೂರನಗರದ ಫೈಯಾಜ್‌ ಅಹ್ಮದ ಜಾಫರಸಾಬ ಪಲ್ಲಾನ್‌ ಹಾಗೂ ಗದಗ ಮಹಾವೀರ ನಗರದ ತೌಶೀಫ್‌ ಮಹ್ಮದಇಸಾಕ್‌ ನರಗುಂದ ಎಂಬುವವರನ್ನು ಬಂಧಿಸಿದ್ದಾರೆ

ಇವರಿಂದ 6.10 ಲಕ್ಷ ರು. ಹಾಗೂ ಕೃತ್ಯಕ್ಕೆ ಬಳಸಿದ್ದ 2 ಬೈಕ್‌ ಹಾಗೂ 5 ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ತನಿಖಾ ತಂಡಕ್ಕೆ ಆಯುಕ್ತರು ಬಹುಮಾನ ಘೋಷಿಸಿದ್ದಾರೆ.