ಆನ್ಲೈನ್ನಲ್ಲಿ ಹಣ ಕಳೆದ ಪೇದೆಯಿಂದ ಮನೆಗಳ್ಳತನ: 'ಕಳ್ಳ ಪೊಲೀಸ್' ಬಂಧನ
ಇದೊಂದು ರೀತಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆದ ನಿಜಕತೆ. ಬೇಗ ಹಣ ಗಳಿಸಬೇಕೆಂದು ಆನ್‌ಲೈನ್ ಗೇಮ್‌ನಲ್ಲಿ ಲಕ್ಷಾಂತರ ರು. ಹಣ ಕಳೆದುಕೊಂಡು, ಮಾಡಿದ್ದ 20 ಲಕ್ಷ ರು. ಸಾಲ ತೀರಿಸಲು ಮನೆಗಳ್ಳತನ ಮಾಡುತ್ತಿದ್ದ ಪೊಲೀಸ್ ಪೇದೆಯೊಬ್ಬನನ್ನು ಬೆಂಗಳೂರಿನ ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಅ.18): ಇದೊಂದು ರೀತಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆದ ನಿಜಕತೆ. ಬೇಗ ಹಣ ಗಳಿಸಬೇಕೆಂದು ಆನ್‌ಲೈನ್ ಗೇಮ್‌ನಲ್ಲಿ ಲಕ್ಷಾಂತರ ರು. ಹಣ ಕಳೆದುಕೊಂಡು, ಮಾಡಿದ್ದ 20 ಲಕ್ಷ ರು. ಸಾಲ ತೀರಿಸಲು ಮನೆಗಳ್ಳತನ ಮಾಡುತ್ತಿದ್ದ ಪೊಲೀಸ್ ಪೇದೆಯೊಬ್ಬನನ್ನು ಬೆಂಗಳೂರಿನ ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಯಲ್ಲಪ್ಪ (30) ಬಂಧಿತ ಆರೋಪಿ. ಈತನಿಂದ 26 ಗ್ರಾಂ ಚಿನ್ನಾಭರಣ, 4 ಕೆ.ಜಿ. ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಅ.3ರಂದು ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಯಲ್ಲಪ್ಪನನ್ನು ಬಂಧಿಸಲಾಗಿದೆ.
ಜನಸಮಾಧಿ ಮೇಲೆ ಬ್ರ್ಯಾಂಡ್ ಬೆಂಗಳೂರು ಕಟ್ಟಲು ಬಿಡಲ್ಲ: ಎಚ್.ಡಿ.ಕುಮಾರಸ್ವಾಮಿ
ಆನ್‌ಲೈನ್ ಗೇಮ್ ಚಟ, ₹20 ಲಕ್ಷ ಸಾಲ: ಪೇದೆ ಯಲ್ಲಪ್ಪ ಆನ್‌ಲೈನ್ ಗೇಮ್‌ಗಳ ಚಟಕ್ಕೆ ಬಿದ್ದಿದ್ದ. ಆಗ ಸುಮಾರು 20 ಲಕ್ಷ ರು. ಹಣ ಕಳೆದುಕೊಂಡಿದ್ದ. ಬ್ಯಾಂಕ್ ಹಾಗೂ ಕೆಲವರಿಂದ ಸಾಲ ಪಡೆದು ಗೇಮ್‌ಗಳಲ್ಲಿ ತೊಡಗಿಸಿ ಸೋತಿದ್ದ. ಹೀಗಾಗಿ ಸಾಲಗಾರರ ಕಾಟ ಹೆಚ್ಚಾಗಿ ಸಾಲ ತೀರಿಸಲು ಅನ್ಯಮಾರ್ಗ ಇಲ್ಲದೆ ಮನೆಗಳ್ಳತನಕ್ಕೆ ಇಳಿದಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
ಮೊದಲೂ ಒಮ್ಮೆ ಸಿಕ್ಕಿಬಿದ್ದಿದ್ದ: ಬಳ್ಳಾರಿ ಜಿಲ್ಲೆ ಸಿರಗುಪ್ಪ ಮೂಲದ ಯಲ್ಲಪ್ಪ 2016ರಲ್ಲಿ ಕಾನ್ಸ್‌ಟೇಬಲ್ ಆಗಿ ಪೊಲೀಸ್ ಇಲಾಖೆಗೆ ಆಯ್ಕೆಯಾಗಿದ್ದು, 2017ನೇ ಸಾಲಿನಲ್ಲಿ ಬನಶಂಕರಿ ಪೊಲೀಸ್ ಠಾಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ. ಕಳೆದ ಫೆಬ್ರವರಿಯಲ್ಲಿ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳ ಅಭಿ ಎಂಬಾತನ ಜತೆಗೆ ಸೇರಿಕೊಂಡು ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಅಭಿಯನ್ನು ಬಂಧಿಸಿದ್ದರು. ಆಗ ಕಾನ್ಸ್‌ಟೇಬಲ್ ಯಲ್ಲಪ್ಪ ಜಾಮೀನು ಪಡೆದುಕೊಂಡಿದ್ದ. ಬಳಿಕ ಈತನನ್ನು ಸೇವೆಯಿಂದ ಅಮಾನತುಗೊಳಿಸಿ, ಇಲಾಖಾ ವಿಚಾರಣೆಗೆ ಆದೇಶಿಸಲಾಗಿತ್ತು.
ಮುತ್ತತ್ತಿಯಿಂದ ಬನ್ನೇರುಘಟ್ಟದವರೆಗೆ ಬ್ಯಾರಿಕೇಡ್ ನಿರ್ಮಾಣ: ಸಂಸದ ಡಿ.ಕೆ.ಸುರೇಶ್
ಅಮಾನತು ರದ್ದತಿ ಬಳಿಕವೂ ಕಳ್ಳತನ: ಕಳೆದ ಮೇ ತಿಂಗಳಲ್ಲಿ ಯಲ್ಲಪ್ಪನ ಅಮಾನತು ಆದೇಶ ಹಿಂಪಡೆದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅ.3ರಂದು ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಗಳ್ಳತನ ಪ್ರಕರಣ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಆಗ ಪೇದೆ ಯಲ್ಲಪ್ಪನೇ ಕಳ್ಳ ಎಂದು ಗೊತ್ತಾಗಿ ಆತನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಯಲ್ಲಪ್ಪ ಜ್ಞಾನಭಾರತಿ ಠಾಣೆ ಮಾತ್ರವಲ್ಲ, ಬೆಂಗಳೂರಿನ ಚಿಕ್ಕಜಾಲ ಮತ್ತು ಚಂದ್ರಾಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೂಡ ತಲಾ ಒಂದು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.