ಬೆಂಗಳೂರು(ನ.29): ವೈವಾಹಿಕ ಸಂಬಂಧ ವೆಬ್‌ಸೈಟ್‌ಗಳಲ್ಲಿ ಮದುವೆ ಆಗುವುದಾಗಿ ಪರಿಚಯಿಸಿಕೊಂಡು ಮಹಿಳೆಯರಿಗೆ ವಂಚಿಸುತ್ತಿದ್ದ ವಿದೇಶಿ ಪ್ರಜೆಯೊಬ್ಬನನ್ನು ವೈಟ್‌ಫೀಲ್ಡ್‌ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ನವದೆಹಲಿಯಲ್ಲಿ ಬಂಧಿಸಿದ್ದಾರೆ.

ನೈಜೀರಿಯಾ ಮೂಲದ ಬ್ರೈಟ್‌ (25) ಬಂಧಿತನಾಗಿದ್ದು, ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ 4 ಲ್ಯಾಪ್‌ಟಾಪ್‌, 10 ಮೊಬೈಲ್‌ ಹಾಗೂ 7.5 ಲಕ್ಷ ಜಪ್ತಿ ಮಾಡಲಾಗಿದೆ. ಈ ಲ್ಯಾಪ್‌ಟಾಪ್‌ಗಳನ್ನು ಪರಿಶೀಲಿಸಿದಾಗ ಆರೋಪಿ ದೇಶದ ವಿವಿಧ ಬ್ಯಾಂಕ್‌ಗಳಲ್ಲಿ 38 ಖಾತೆಗಳು ಮತ್ತು ವಿದೇಶದಲ್ಲಿ 28 ಖಾತೆ ಹೊಂದಿರುವುದು ಪತ್ತೆಯಾಗಿದೆ. ಆತನ ಬಳಿ ಪಾಸ್‌ಪೋರ್ಟ್‌ ಮತ್ತು ವೀಸಾ ಕೂಡ ಸಿಕ್ಕಿಲ್ಲ. ಈ ಬಗ್ಗೆ ಎಫ್‌ಆರ್‌ಓಗೆ ವರದಿ ಸಲ್ಲಿಸಲಾಗುತ್ತದೆ ಎಂದು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ದೇವರಾಜ್‌ ತಿಳಿಸಿದ್ದಾರೆ.

ಇತ್ತೀಚಿಗೆ ಶಾದಿ ಡಾಟ್‌ ಕಾಂನಲ್ಲಿ ಸ್ನೇಹ ಮಾಡಿ ಮಹಿಳೆಯೊಬ್ಬರಿಗೆ 24.5 ಲಕ್ಷ ಪಡೆದು ಆತ ಮೋಸಗೊಳಿಸಿದ್ದ. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಸಿಇಎನ್‌ ಠಾಣೆ ಇನ್‌ಸ್ಪೆಕ್ಟರ್‌ ಗುರುಪ್ರಸಾದ್‌ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿಯನ್ನು ನವದೆಹಲಿಯಲ್ಲಿ ಬಂಧಿಸಿ ಕರೆ ತಂದಿದ್ದಾರೆ ಎಂದು ಡಿಸಿಪಿ ಹೇಳಿದ್ದಾರೆ.

ಚಿಕ್ಕಮಗಳೂರು: ಗಾಂಜಾ ಸಾಗಾಟ, ನಾಲ್ವರ ಬಂಧನ

ಸುಂದರ ಹುಡುಗರ ಫೋಟೋ ತೋರಿಸಿ ಟೋಪಿ:

ಹಲವು ದಿನಗಳ ಹಿಂದೆ ಭಾರತಕ್ಕೆ ಬಂದಿದ್ದ ಬ್ರೈಟ್‌, ಆನ್‌ಲೈನ್‌ ವಂಚನೆಗೆ ಐದು ಮಂದಿಯ ತಂಡ ಕಟ್ಟಿದ್ದ. ವಿದೇಶದ ದುಬಾರಿ ಮೌಲ್ಯದ ಉಡುಗೊರೆ ಹೀಗೆ ತರಹೇವಾರಿ ಆಸೆ ತೋರಿಸಿ ಜನರಿಗೆ ಟೋಪಿ ಹಾಕಿ ಆತ ಹಣ ದೋಚುತ್ತಿದ್ದ. ಅದರಲ್ಲೂ ಹೆಚ್ಚು ಮಹಿಳೆಯರನ್ನು ಗುರಿಯಾಗಿಸಿಕೊಂಡು ವಂಚನೆ ಕೃತ್ಯಗಳು ನಡೆದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬ್ಯಾಂಕ್‌ ಖಾತೆ ನಿರ್ವಹಣೆ ಹಾಗೂ ನಕಲಿ ಗಿಫ್ಟ್‌ ಬಾಕ್ಸ್‌ಗಳನ್ನು ಸಿದ್ಧಪಡಿಸಲು ಬೆಂಗಳೂರು, ದೆಹಲಿಯಲ್ಲಿ ಬ್ರೈಟ್‌ ಜಾಲದ ಸದಸ್ಯರು ಸಕ್ರಿಯವಾಗಿದ್ದಾರೆ. ವೈವಾಹಿಕ ವೆಬ್‌ಸೈಟ್‌ಗಳಲ್ಲಿ ವಿದೇಶ ಸುಂದರ ಯುವಕರ ಫೋಟೋ ಬಳಸಿ ಯುವತಿಯರನ್ನು ಸೆಳೆಯುತ್ತಿದ್ದರು. ಅಂತೆಯೇ ಕೆಲ ದಿನಗಳ ಹಿಂದೆ ವೈಟ್‌ಫೀಲ್ಡ್‌ನ ಯುವತಿಯನ್ನು ಶಾದಿ ಡಾಟ್‌ ಕಾಂನಲ್ಲಿ ಪರಿಚಯಿಸಿಕೊಂಡ ಆರೋಪಿ, ತನ್ನನ್ನು ಸೈನ್‌ ರಾಜ್‌ ಕಿಶೋರ್‌ ಹೆಸರಿನ ಲಂಡನ್‌ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯನೆಂದು ಪರಿಚಯಿಸಿಕೊಂಡಿದ್ದ.

ತಾನು ಇಂಗ್ಲೆಂಡ್‌ನಲ್ಲಿ ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದು, ಭಾರತಕ್ಕೆ ಹಿಂತಿರುಗಿದ ಬಳಿಕ ಮದುವೆ ಆಗುವುದಾಗಿ ನಂಬಿಸಿದ್ದ. ಈ ನಾಜೂಕಿನ ಮಾತಿಗೆ ಸಂತ್ರಸ್ತೆ ಮರುಳಾಗಿದ್ದಳು. ಕೆಲ ದಿನಗಳ ಬಳಿಕ ತನಗೆ ಪಿಎಚ್‌ಡಿ ಸಂಬಂಧ ತುರ್ತು ಹಣದ ಅಗತ್ಯವಿದೆ. ನೀವು ಸಾಲ ರೂಪದಲ್ಲಿ ನೀಡಿದರೆ ಭಾರತಕ್ಕೆ ವಾಪಾಸ್ಸಾದ ಕೂಡಲೇ ಮರಳಿಸುತ್ತೇನೆ ಎಂದಿದ್ದ. ಈ ಮಾತು ನಂಬಿದ ಆಕೆ, ಮೊದಲು .5 ಲಕ್ಷವನ್ನು ಆರೋಪಿ ಖಾತೆಗೆ ವರ್ಗಾಯಿಸಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ತರುವಾಯ ಸ್ಕಾಟ್‌ಲ್ಯಾಂಡ್‌ ಬ್ಯಾಂಕ್‌ ಖಾತೆಯಲ್ಲಿ ನನ್ನ ಹಣವಿದ್ದು, ಸೆಕ್ಯೂರಿಟಿ ಕಾರಣಕ್ಕೆ ಡ್ರಾ ಮಾಡಲು ಸಾಧ್ಯವಾಗುತ್ತಿಲ್ಲ. ವ್ಯಾಸಂಗಕ್ಕಾಗಿ ಮತ್ತಷ್ಟುಹಣ ಬೇಕೆಂದು ಹಂತ ಹಂತವಾಗಿ ಒಟ್ಟು 24.50 ಲಕ್ಷ ಪಡೆದಿದ್ದ. ಈ ಹಣ ಸಂದಾಯವಾದ ಬಳಿಕ ಆತನ ಸಂಪರ್ಕ ಕಡಿತವಾಗಿತ್ತು. ಈ ಬಗ್ಗೆ ಸಿಇಎನ್‌ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಳು. ದೆಹಲಿಯಲ್ಲಿ ಮೊಬೈಲ್‌ ಕರೆ ಆಧರಿಸಿ ವಂಚಕನನ್ನು ಪತ್ತೆಹಚ್ಚುವಲ್ಲಿ ಇನ್‌ಸ್ಪೆಕ್ಟರ್‌ ಗುರುಪ್ರಸಾದ್‌ ನೇತೃತ್ವದ ತಂಡವು ಯಶಸ್ಸು ಕಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಟಿಎಂ ಕಾರ್ಡ್‌ ಪಡೆಯಲು ಬಂದು ಸಿಕ್ಕಿಬಿದ್ದ ಆರೋಪಿ

ವಂಚನೆ ಮೂಲಕ ಸಂಪಾದಿಸಿದ ಹಣ ಪಡೆಯಲು ಆರೋಪಿಗಳು, ಸಂತ್ರಸ್ತೆಯರಿಂದಲೇ ಬ್ಯಾಂಕ್‌ ಖಾತೆಗಳನ್ನು ತೆರೆಸುತ್ತಿದ್ದರು. ಬಳಿಕ ಆ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಸಿಕೊಂಡು ಬ್ರೈಟ್‌, ಡ್ರಾ ಮಾಡಲು ಚೆಕ್‌ ಬುಕ್‌ ಹಾಗೂ ಎಟಿಎಂ ಕಾರ್ಡ್‌ಗಳನ್ನು ದೆಹಲಿ ವಿಳಾಸಕ್ಕೆ ಕಳುಹಿಸುವಂತೆ ಹೇಳುತ್ತಿದ್ದ. ಅದರಂತೆ ವೈಟ್‌ಫೀಲ್ಡ್‌ ವ್ಯಾಪ್ತಿಯ ವಿವಿಧ ಬ್ಯಾಂಕ್‌ಗಳಲ್ಲಿ ಎಂಟು ಖಾತೆಗಳು ತೆರೆಯಲಾಗಿತ್ತು. ಮೊಬೈಲ್‌ ಕರೆಗಳ (ಸಿಡಿಆರ್‌) ಹಾಗೂ ಬ್ಯಾಂಕ್‌ ಖಾತೆ ವಿವರ ಪರಿಶೀಲಿಸಿದಾಗ ಆರೋಪಿ ಕುರಿತು ಸುಳಿವು ಸಿಕ್ಕಿತು. ಇತ್ತೀಚೆಗೆ ವಂಚನೆಗೊಳಗಾದ ಯುವತಿಗೆ ಸಹ ಹಣ ವರ್ಗಾವಣೆ ನಂತರ ಆತ ಎಟಿಎಂ ಕಾರ್ಡ್‌ ಕಳುಹಿಸುವಂತೆ ಸೂಚಿಸಿದ್ದ. ಈ ವಿಚಾರ ತಿಳಿದ ಇನ್‌ಸ್ಪೆಕ್ಟರ್‌ ಗುರುಪ್ರಸಾದ್‌, ಎಟಿಎಂ ಕಾರ್ಡ್‌ ಸ್ವೀಕರಿಸಲು ಬಂದ ಆರೋಪಿಯನ್ನು ಗಾಳಕ್ಕೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.