ಅಮರಾವತಿ[ಡಿ.15]: 2007ರಲ್ಲಿ ಆಂಧ್ರಪ್ರದೇಶವನ್ನು ಬೆಚ್ಚಿ ಬೀಳಿಸಿದ್ದ ವಿಜಯವಾಡ ಬಿ-ಫಾರ್ಮಾ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದ್ದು, ಅದಕ್ಕಾಗಿ ಸಂತ್ರಸ್ತೆಯ ಮೃತ ದೇಹವನ್ನು ಸಮಾಧಿಯಿಂದ ಹೊರತೆಗೆಯಲಾಗಿದೆ.

ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿ ಪಟ್ಟಣದಲ್ಲಿರುವ ಸ್ಮಶಾನದಿಂದ ಯುವತಿಯ ಶವ ಹೊರತೆಗೆಯಲಾಗಿದ್ದು, ದೆಹಲಿಯ ವಿಧಿ ವಿಜ್ಞಾನ ತಜ್ಞರು ಅಲ್ಲೇ ಶವ ಪರೀಕ್ಷೆ ನಡೆಸಿದ್ದಾರೆ. 2007ರ ಡಿ.27ರಂದು ವಿಜಯವಾಡದ ಇಬ್ರಾಹಿಂಪಟ್ಟಣಂನ ಮಹಿಳಾ ವಸತಿ ನಿಲಯದಲ್ಲಿ 19 ವರ್ಷದ ವಿದ್ಯಾರ್ಥಿನಿಯೊಬ್ಬಳ ಗಾಯಗೊಂಡ ರಕ್ತ ಸಿಕ್ತ ಮೃತದೇಹ ಪತ್ತೆಯಾಗಿತ್ತು. 

ತನಿಖೆ ನಡೆಸಿದ ಪೊಲೀಸರು 2008ರಲ್ಲಿ ಮೊಬೈಲ್‌ ಕಳ್ಳತನ ಪ್ರಕರಣದಲ್ಲಿ ಸಿಕ್ಕಿದ್ದ ಸತ್ಯಂ ಬಾಬು ತಲೆಗೆ ಕಟ್ಟಲಾಗಿತ್ತು. ಪ್ರಕರಣ ಸಂಬಂಧ 2010ರಲ್ಲಿ ಆತನೇ ದೋಷಿ ಎಂದು ಪರಿಗಣಿಸಿ ವಿಜಯವಾಡ ಮಹಿಳಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಬಳಿಕ 2017ರಲ್ಲಿ ಹೈ ಕೋರ್ಟ್‌ ಸತ್ಯಂನನ್ನು ಖುಲಾಸೆಗೊಳಿಸಿ, ತನಿಖೆ ನಡೆಸಿದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಅದೇಶ ನೀಡಿತ್ತು.

ಬಳಿಕ ಪ್ರಕರಣದ ಮರು ತನಿಖೆಗೆ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿತ್ತು. ಆದರೆ ಕೆಳ ನ್ಯಾಯಾಲದಲ್ಲಿ ಸಾಕ್ಷ್ಯಾಧಾರಗಳನ್ನು ನಾಶ ಮಾಡಿದ್ದರಿಂದ, ಪ್ರಕರಣವನ್ನು 2018ರಲ್ಲಿ ಹೈಕೋರ್ಟ್‌ ಸಿಬಿಐಗೆ ವಹಿಸಿತ್ತು. ಪ್ರಕರಣ ಕೈಗೆತ್ತಿಕೊಂಡ ಸಿಬಿಐ ಕೆಳ ನ್ಯಾಯಾಲಯದ ಕೆಲ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಮಾಜಿ ಸಚಿವರೊಬ್ಬರ ಸಂಬಂಧಿ ಪ್ರಕರಣದಲ್ಲಿ ಭಾಗಿಯಾಗಿದ್ದು, ತನ್ನ ಮೇಲಿನ ಆರೋಪದಿಂದ ನುಣುಚಿಕೊಳ್ಳಲು ಬೇರೆಯವರ ತಲೆಗೆ ಕಟ್ಟಲಾಗಿದೆ ಎಂದು ಸಂತ್ರಸ್ತೆಯ ಪೊಷಕರು ದೂರಿದ್ದಾರೆ. ಅಲ್ಲದೇ ಸಂತ್ರಸ್ತೆಯ ತಾಯಿ ಮುಖ್ಯಮಂತ್ರಿ ಜಗನ್ಮೋಹನ್‌ ರೆಡ್ಡಿಗೆ ಮನವಿ ಮಾಡಿದ್ದು, ನೂತನ ದಿಶಾ ಕಾನೂನಿನಡಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.