ಚೆಕ್ ಬೌನ್ಸ್ ಪ್ರಕರಣದ ಆರೋಪಿ ಕಾರವಾರ ಜೈಲಿಗೆ ಹೋಗುವಾಗ ಕುಮಟಾ ಟೋಲ್ ಬಳಿ ಕಾರಿನಿಂದ ಜಿಗಿದು ಪರಾರಿಯಾಗಿದ್ದ. ಕುಮಟಾ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಭಟ್ಕಳದಲ್ಲಿ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಕಾರವಾರ, ಉತ್ತರ ಕನ್ನಡ (ಜು.26): ಚೆಕ್ ಬೌನ್ಸ್ ಪ್ರಕರಣ ಸಂಬಂಧ ಆರೋಪಿಯನ್ನು ಕಾರವಾರ ಜೈಲಿಗೆ ಕರೆತರುತ್ತಿದ್ದ ವೇಳೆ ಕುಮಟಾದ ಹೊಳಗದ್ದೆ ಟೋಲ್ ಬಳಿ ಕಾರಿನಿಂದ ಜಿಗಿದು ಪರಾರಿಯಾದ ಘಟನೆ ನಡೆದಿದ್ದು, ಕುಮಟಾ ಪೊಲೀಸರು ತಕ್ಷಣ ಕಾರ್ಯಾಚರಣೆಗಿಳಿದು ಆರೋಪಿಯನ್ನು ಭಟ್ಕಳದಲ್ಲಿ ಬಂಧಿಸಿದ್ದಾರೆ.
ಸಮೀರ್ ಬಾಷಾ, ಬಂಧಿತ ಆರೋಪಿ. ಭಟ್ಕಳ ಪೊಲೀಸರು ಜುಲೈ 25ರಂದು ತಲೆಮರೆಸಿಕೊಂಡಿದ್ದ ಸಮೀರ್ ಬಾಷಾನನ್ನು ಚೆಕ್ ಬೌನ್ಸ್ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದರು. ನ್ಯಾಯಾಲಯವು ಆರೋಪಿಗೆ ಜುಲೈ 30ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಆದರೆ, ಕಾರವಾರ ಜೈಲಿಗೆ ಬಾಡಿಗೆ ಕಾರಿನಲ್ಲಿ ಕರೆದೊಯ್ಯಲಾಗುತ್ತಿತತು. ಈ ವೇಳೆ ಕುಮಟಾದ ಟೋಲ್ ಬಳಿ ಕಾರು ನಿಧಾನಗೊಂಡಾಗ, ಬಾಷಾ ಕಾರಿನಿಂದ ಹೊರಕ್ಕೆ ಜಿಗಿದು, ಕುಮಟಾದಿಂದ ಭಟ್ಕಳಕ್ಕೆ ತಪ್ಪಿಸಿಕೊಂಡು ತೆರಳಿದ್ದ.
ಕುಮಟಾ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಭಟ್ಕಳದಲ್ಲಿ ಕೊನೆಗೂ ಬಂಧಿಸಿದರು. ಬಂಧನದ ಬಳಿಕ ಸಮೀರ್ ಬಾಷಾನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯದ ಆದೇಶದಂತೆ ಆರೋಪಿಯನ್ನು ಕಾರವಾರ ಜೈಲಿಗೆ ಕಳುಹಿಸಲಾಯಿತು. ಈ ಘಟನೆಯಿಂದ ಸ್ಥಳೀಯ ಪೊಲೀಸ್ ಇಲಾಖೆಯ ಚುರುಕುತನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ ಈ ಘಟನೆಯು ಆರೋಪಿಗಳ ಸಾಗಣೆಯ ಸಂದರ್ಭದಲ್ಲಿ ಭದ್ರತೆಯ ಕೊರತೆಯನ್ನು ಎತ್ತಿ ತೋರಿಸಿದೆ.
