ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಆಪ್ತನ ಹೆಸರಲ್ಲಿ ಸುಲಿಗೆ ಯತ್ನಿಸಿದ ಕಿಡಿಗೇಡಿ ಅರೆಸ್ಟ್
ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಕೊಡಿಸೋದಾಗಿ ಕಾಂಗ್ರೆಸ್ ಮುಖಂಡರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ

ಬೆಂಗಳೂರು(ಜೂ.01): ಕಾಂಗ್ರೆಸ್ ಮುಖಂಡರಿಗೆ ಕರೆ ಮಾಡಿ ನಿಗಮ ಮಂಡಳಿಗಳ ಅಧ್ಯಕ್ಷಗಿರಿ ಕೊಡಿಸುವುದಾಗಿ ನಂಬಿಸಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ಸಹಾಯಕನ ಹೆಸರಿನಲ್ಲಿ ಹಣ ವಸೂಲಿಗೆ ಯತ್ನಿಸಿದ್ದ ಕಿಡಿಗೇಡಿಯೊಬ್ಬನನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ರಾಮಕೃಷ್ಣ ನಗರದ ರಘುನಾಥ್ ಬಂಧಿತನಾಗಿದ್ದು, ಆರೋಪಿಯಿಂದ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ದಾಸರಹಳ್ಳಿ ಕ್ಷೇತ್ರದ ಕಾಂಗ್ರೆಸ್ ನಾಯಕಿ ಗೀತಾ ಶಿವರಾಮ್ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ಸಹಾಯಕನ ಹೆಸರಿನಲ್ಲಿ ಕರೆ ಮಾಡಿ ಹಣಕ್ಕೆ ರಘುನಾಥ್ ಬೇಡಿಕೆ ಇಟ್ಟಿದ್ದ. ಕೂಡಲೇ ಈ ವಿಚಾರವನ್ನು ಸಚಿವರ ಗಮನಕ್ಕೆ ಗೀತಾ ತಂದಿದ್ದಾರೆ. ಆಗ ಸಚಿವರು ಪರಿಶೀಲಿಸಿದಾಗ ಕಿಡಿಗೇಡಿ ಕೃತ್ಯ ಎಂಬುದು ಗೊತ್ತಾಯಿತು. ಈ ಬಗ್ಗೆ ಮಂತ್ರಿ ಖರ್ಗೆ ಆಪ್ತ ಸಹಾಯಕ ಕೇಶವ ಮೂರ್ತಿ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತುಮಕೂರಿನಲ್ಲಿ 70 ವರ್ಷದ ವೃದ್ಧೆಯ ಸಾಮೂಹಿಕ ಅತ್ಯಾಚಾರ, ವೃದ್ಧೆಯ ಅಳಿಯನ ಸ್ನೇಹಿತರಿಂದಲೇ ಕೃತ್ಯ!
ಮೈಸೂರಿನ ರಘುನಾಥ್, ತುಮಕೂರಿನ ಸಪ್ತಗಿರಿ ಬಡಾವಣೆಯಲ್ಲಿ ನೆಲೆಸಿದ್ದ. ರಘುನಾಥ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ಆತನ ಮೇಲೆ ವಿಧಾನಸೌಧ ಠಾಣೆಯಲ್ಲಿ ಸಹ ವಂಚನೆಗಳು ಪ್ರಕರಣ ದಾಖಲಾಗಿವೆ. ಸಾರ್ವಜನಿಕರಿಗೆ ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿ ಹಣ ಸಂಪಾದಿಸುವುದು ಆತನ ಕೃತ್ಯವಾಗಿತ್ತು. ಅದೇ ರೀತಿ ಕಾಂಗ್ರೆಸ್ ರಚನೆಯಾದ ಬಳಿಕ ರಘುನಾಥ್, ಕೆಲವು ಕಾಂಗ್ರೆಸ್ ನಾಯಕರಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ಕಾರ್ಯದರ್ಶಿ ಕೇಶವ ಮೂರ್ತಿ ಹೆಸರಿನಲ್ಲಿ ಕರೆ ಮಾಡಿ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ನಂಬಿಸಿದ್ದ. ಇದಕ್ಕಾಗಿ ಇಂತಿಷ್ಟುಹಣ ನೀಡುವಂತೆ ಆತ ಬೇಡಿಕೆ ಇಟ್ಟಿದ್ದ. ಅಂತೆಯೇ ದಾಸರಹಳ್ಳಿಯ ಕಾಂಗ್ರೆಸ್ ನಾಯಕಿ ಗೀತಾ ಅವರಿಗೆ ಮೇ 20ರಂದು ಕರೆ ಮಾಡಿದ ಆರೋಪಿ, ನಿಮಗೆ ನಿಗಮ ಮಂಡಳಿಗೆ ಕೊಡಿಸಲು ಸಾಹೇಬ್ರು (ಸಚಿವ ಖರ್ಗೆ) ನಿರ್ಧರಿಸಿದ್ದಾರೆ. ಈ ಕೆಲಸವಾಗಬೇಕಾದರೆ ಹಣ ಕೊಡಬೇಕು ಎಂದಿದ್ದ.
ಈ ಕರೆ ಬಗ್ಗೆ ಅನುಮಾನಗೊಂಡ ಗೀತಾ ಅವರು, ತಕ್ಷಣವೇ ಸಚಿವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಗೀತಾ ಅವರಿಗೆ ಬಂದಿದ್ದ ಮೊಬೈಲ್ ಕರೆಯ ಸಂಖ್ಯೆ ಪಡೆದು ಪರಿಶೀಲಿಸಿದಾಗ ಕಿಡಿಗೇಡಿ ಕೃತ್ಯ ಎಂಬುದು ಗೊತ್ತಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.