ಕುಡಿಯುವ ಚಟಕ್ಕೆ ಹಣ ಹೊಂದಿಸಲು ಹೋಗಿ ಜೈಲು ಪಾಲಾದ, ಕೆಂಗೇರಿ ಕರಗಕ್ಕೆ ಬಂದಿದ್ದ ಸೋದರ ಮಾವ, ಕಬೋರ್ಡ್‌ನಲ್ಲಿ ನೆಕ್ಲೆಸ್‌ ಬಿಚ್ಚಿಟ್ಟಿದ್ದ ಮಗಳು, ಇದನ್ನು ಗಮನಿಸಿ ಕಳ್ಳತನ ಮಾಡಿದ್ದ ಮಾವ 

ಬೆಂಗಳೂರು(ಜೂ.04):  ಹಬ್ಬಕ್ಕೆ ಅಕ್ಕನ ಮನೆಗೆ ಬಂದು ಅಕ್ಕನ ಮಗಳ ಚಿನ್ನದ ನಕ್ಲೇಸ್‌ ಎಗರಿಸಿದ್ದ ಚಾಲಾಕಿ ಮಾವನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಗೋಪಾಲನಗರ ನಗರ ನಿವಾಸಿ ರಂಗನಾಥ (58) ಬಂಧಿತ. ಈತನಿಂದ 24 ಗ್ರಾಂ ತೂಕದ ಚಿನ್ನದ ನಕ್ಲೇಸ್‌ ಜಪ್ತಿ ಮಾಡಲಾಗಿದೆ. ಸೀಗೆಹಳ್ಳಿ ನಿವಾಸಿ ಮಂಜುಳಾ ಅವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಏ.9ರಂದು ಕೆಂಗೇರಿ ಕರಗದ ಪ್ರಯುಕ್ತ ಮಂಜುಳಾ ಅವರು ಮಗಳೊಂದಿಗೆ ಕೆಂಗೇರಿಯ ಕಾಳಿಕಾಂಬ ರಸ್ತೆಯ 7ನೇ ಕ್ರಾಸ್‌ನಲ್ಲಿರುವ ತವರು ಮನೆಗೆ ಬಂದಿದ್ದರು. ಕರಗ ಮುಗಿಸಿಕೊಂಡು ರಾತ್ರಿ 9 ಗಂಟೆ ಸುಮಾರಿಗೆ ಚಿನ್ನದ ನಕ್ಲೇಸ್‌ ಬಿಚ್ಚಿ ತಾಯಿಯ ಮನೆಯ ರೂಮ್‌ನ ಕಬೋರ್ಡ್‌ನಲ್ಲಿ ಇರಿಸಿದ್ದರು. ಮಾರನೇ ದಿನ ಬೆಳಗ್ಗೆ ಎದ್ದು ಗಂಡನ ಮನೆಗೆ ತೆರಳುವಾಗ ಕಬೋರ್ಡ್‌ ತೆರೆದು ನೋಡಿದಾಗ ನಕ್ಲೇಸ್‌ ಕಾಣಸಿಲ್ಲ. ಈ ವೇಳೆ ಮನೆಯೆಲ್ಲ ಹುಡುಕಾಡಿದರೂ ಪ್ರಯೋಜನವಾಗಿಲ್ಲ. ಬಳಿಕ ಸೋದರ ಮಾವ ರಂಗನಾಥನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಈ ದೂರು ಆಧರಿಸಿ ರಂಗನಾಥನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ನಕ್ಲೇಸ್‌ ಕದ್ದಿದ್ದು ತಾನೇ ಎದ್ದು ತಪ್ಪೊಪ್ಪಿಕೊಂಡಿದ್ದಾನೆ.

ಬೆಂಗಳೂರು: 1800 ವಿದ್ಯಾರ್ಥಿಗಳ ದಾಖಲೆ ಬಳಸಿ 19 ಕೋಟಿ ಸಾಲ ಪಡೆದು ಟೋಪಿ!

ಅಂದು ಅಕ್ಕನ ಮನೆಯ ಕರಗದ ಹಬ್ಬಕ್ಕೆ ರಂಗನಾಥನೂ ಬಂದಿದ್ದ. ಕರಗ ಮುಗಿಸಿಕೊಂಡು ರಾತ್ರಿ ಅಕ್ಕನ ಮನೆಯಲ್ಲೇ ತಂಗಿದ್ದ. ಈ ವೇಳೆ ನಾಲ್ಕೈದು ಬಾರಿ ರೂಮ್‌ ಒಳಗೆ ಹೋಗಿ ಬಂದಿದ್ದ. ಇದನ್ನು ಅಕ್ಕನ ಮಗಳು ಮಂಜುಳಾ ಗಮನಿಸಿದ್ದರು. ಹೀಗೆ ರೂಮ್‌ ಒಳಗೆ ಹೋದಾಗ ರಂಗನಾಥ ಕಬೋರ್ಡ್‌ ತೆರೆದು ನಕ್ಲೇಸ್‌ ಕದ್ದಿದ್ದ. ಬಳಿಕ ಸಂಬಂಧವಿಲ್ಲ ಎಂಬಂತೆ ನಟಿಸಿದ್ದ. ಕುಡಿತದ ಚಟಕ್ಕೆ ಬಿದ್ದಿರುವ ರಂಗನಾಥ ಖರ್ಚಿಗೆ ಹಣ ಹೊಂದಿಸಲು ನಕ್ಲೇಸ್‌ ಕದ್ದಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.