Asianet Suvarna News Asianet Suvarna News

ಬೆಂಗಳೂರು: ಪತ್ನಿ-ಮಗು ದೂರವಾಗಿದ್ದಕ್ಕೆ ನೊಂದು ಸಂಬಂಧಿಕಳ ಹತ್ಯೆಗೈದವನ ಬಂಧನ

ಪಾದಾರಾಯನಪುರ 4ನೇ ಕ್ರಾಸ್‌ ನಿವಾಸಿ ಪರ್ವಿನ್‌ ತಾಜ್‌ ಕೊಲೆಯಾದ ದುರ್ದೈವಿ. ಭಾನುವಾರ ರಾತ್ರಿ 7.30ರ ಸುಮಾರಿಗೆ ಈ ಘಟನೆ ನಡೆದಿದೆ. ಈ ಸಂಬಂಧ ಆರೋಪಿ ಅಂಚೆಪಾಳ್ಯದ ಜುನೈದ್‌ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ ಅಧಿಕಾರಿಗಳು 

Accused Arrested for Murder Case in Bengaluru grg
Author
First Published Dec 12, 2023, 11:28 PM IST

ಬೆಂಗಳೂರು(ಡಿ.12):  ಕೌಟುಂಬಿಕ ಕಲಹದಿಂದ ಪತ್ನಿ ದೂರವಾಗಿದ್ದರಿಂದ ಕೋಪಗೊಂಡಿದ್ದ ವ್ಯಕ್ತಿಯೊಬ್ಬ ತನ್ನ ಸಂಬಂಧಿ ಮಹಿಳೆಯ ಮನೆಗೆ ತೆರಳಿ ಜಗಳ ತೆಗೆದು ಚಾಕುವಿನಿಂದು ಇರಿದು ಹತ್ಯೆ ಮಾಡಿರುವ ಅಮಾನುಷ ಘಟನೆ ಜೆ.ಜೆ.ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪಾದಾರಾಯನಪುರ 4ನೇ ಕ್ರಾಸ್‌ ನಿವಾಸಿ ಪರ್ವಿನ್‌ ತಾಜ್‌(33) ಕೊಲೆಯಾದ ದುರ್ದೈವಿ. ಭಾನುವಾರ ರಾತ್ರಿ 7.30ರ ಸುಮಾರಿಗೆ ಈ ಘಟನೆ ನಡೆದಿದೆ. ಈ ಸಂಬಂಧ ಆರೋಪಿ ಅಂಚೆಪಾಳ್ಯದ ಜುನೈದ್‌(26) ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾದಗಿರಿ ಟು ಶಿವಮೊಗ್ಗ ಕಳ್ಳರ ಲಿಂಕ್ ಬೇಧಿಸಿದ ಯಾದಗಿರಿ ಪೋಲಿಸರು: 80 ಕೆಜಿ ಶ್ರೀಗಂಧ ಜಪ್ತಿ

ಏನಿದು ಘಟನೆ?

ಬಂಧಿತ ಆರೋಪಿ ಜುನೈದ್‌, ಕೊಲೆಯಾದ ಪರ್ವಿನ್‌ ತಾಜ್‌ನ ಗಂಡನ ಅಕ್ಕನ ಅಳಿಯನಾಗಿದ್ದಾನೆ. ಈ ಹಿಂದೆ ಅವೆನ್ಯೂ ರಸ್ತೆಯ ಸೀರೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಕೌಟುಂಬಿಕ ಕಲಹದಿಂದ ಪತ್ನಿ ಮತ್ತು ಮಗು ಈತನಿಂದ ದೂರಾಗಿ ಪ್ರತ್ಯೇಕವಾಗಿ ನೆಲೆಸಿದ್ದರು. ಪತ್ನಿ-ಮಗು ದೂರಾದ್ದರಿಂದ ಮಾನಸಿಕವಾಗಿ ನೊಂದಿದ್ದ ಜುನೈದ್‌, ಕಳೆದ ಒಂದು ವರ್ಷದಿಂದ ದುಶ್ಚಟಗಳ ದಾಸನಾಗಿದ್ದ. ಈ ನಡುವೆ ಕೊಲೆಯಾದ ಪರ್ವಿನ್‌ ತಾಜ್‌ ಮನೆಯವರ ಮೇಲೆ ದ್ವೇಷ ಸಾಧಿಸುತ್ತಿದ್ದ.

ಜಗಳ ತೆಗೆದು ಚಾಕು ಇರಿದ:

ಭಾನುವಾರ ಸಂಜೆ 7.30ರ ಸುಮಾರಿಗೆ ಪರ್ವಿನ್‌ ತಾಜ್‌ ಗಂಡ ಊಟ ಮುಗಿಸಿ ಮನೆಯಿಂದ ಹೊರಗೆ ಹೋಗಿದ್ದ. ಇನ್ನು ಇಬ್ಬರು ಮಕ್ಕಳು ಭಾನುವಾರ ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಅಜ್ಜಿ ಮನೆಗೆ ತೆರಳಿದ್ದರು. ಹೀಗಾಗಿ ಮನೆಯಲ್ಲಿ ಪರ್ವಿನ್ ತಾಜ್‌ ಒಬ್ಬರೇ ಇದ್ದರು. ಇದೇ ಸಮಯಕ್ಕೆ ಮನೆಗೆ ಬಂದಿರುವ ಜುನೈದ್‌, ನನ್ನ ಹೆಂಡತಿ-ಮಗುವನ್ನು ತೋರಿಸು ಎಂದು ಜಗಳ ತೆಗೆದು ಬ್ಯಾಗಿನಲ್ಲಿ ತಂದಿದ್ದ ಚಾಕು ತೆಗೆದು ಏಕಾಏಕಿ ಪರ್ವಿನ್‌ ಹೊಟ್ಟೆಗೆ ಇರಿದು ಪರಾರಿಯಾಗಿದ್ದಾನೆ.

ಬೆಂಗಳೂರು: ಲೇಡಿ ಎಸ್‌ಐ ಬಟ್ಟೆ ಬಿಚ್ಚಿಸುವೆ ಎಂದ ಹೋಟೆಲ್‌ ಮಾಲೀಕ..!

ಹೊಟ್ಟೆಯಲ್ಲಿ ಚಾಕು ಇದ್ದಾಗಲೇ ಓಡಿ ಹೊರಗೆ ಬಂದ ಪರ್ವಿನ್‌

ಹೊಟ್ಟೆಯಲ್ಲಿ ಚಾಕು ನಾಟಿರುವ ಸ್ಥಿತಿಯಲ್ಲೇ ರಕ್ತ ಸುರಿಸಿಕೊಂಡು ಪರ್ವಿನ್‌ ತಾಜ್‌ ಮನೆಯಿಂದ ರಸ್ತೆಗೆ ಓಡಿ ಬಂದಿದ್ದಾರೆ. ಈ ವೇಳೆ ಸ್ಥಳೀಯರು ಆಕೆಯ ನೆರವಿಗೆ ಧಾವಿಸಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದ ಪರ್ವಿನ್‌ ತಾಜ್‌ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಪರ್ವಿನ್‌ ತಾಜ್‌ ಪತಿ ನೀಡಿದ ದೂರಿನ ಮೇರೆಗೆ ಜೆ.ಜೆ.ನಗರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿ ಜುನೈದ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios