ಬೆಂಗಳೂರು: ಟೈರ್‌ ಪಂಕ್ಚರ್‌ ಮಾಡಿ 25 ಲಕ್ಷದ ಚಿನ್ನ ಎಗರಿಸಿದ ಖದೀಮನ ಬಂಧನ

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಒರಂತಗಲ್‌ ಗೊಲ್ಲ ಕುಪ್ಪಂ(ಓಜಿ ಕುಪ್ಪಂ) ನಿವಾಸಿ ಗಿರಿ ಕುಮಾರ್‌ ಅಲಿಯಾಸ್‌ ಗಿರಿ ಬಂಧಿತ. ಆರೋಪಿಯಿಂದ ₹25 ಲಕ್ಷ ಮೌಲ್ಯದ 449 ಗ್ರಾಂ ಚಿನ್ನ ಮತ್ತು ವಜ್ರಾಭರಣ ಜಪ್ತಿ ಮಾಡಲಾಗಿದೆ. 

Accused Arrested For Gold Theft Case in Bengaluru grg

ಬೆಂಗಳೂರು(ನ.26):  ಇತ್ತೀಚೆಗೆ ಕೆಂಗೇರಿಯ ಮೈಸೂರು ರಸ್ತೆಯಲ್ಲಿ ಕಾರು ಪಂಕ್ಚರ್‌ ಆಗಿದೆ ಎಂದು ದಂಪತಿಯ ಗಮನ ಬೇರೆಡೆ ಸೆಳೆದು ಚಿನ್ನಾಭರಣವಿದ್ದ ಬ್ಯಾಗ್‌ ಎಗರಿಸಿದ್ದ ಪ್ರಕರಣ ಸಂಬಂಧ ಕುಖ್ಯಾತ ಓಜಿ ಕುಪ್ಪಂ ಗ್ಯಾಂಗ್‌ನ ಸದಸ್ಯನೊಬ್ಬನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಒರಂತಗಲ್‌ ಗೊಲ್ಲ ಕುಪ್ಪಂ(ಓಜಿ ಕುಪ್ಪಂ) ನಿವಾಸಿ ಗಿರಿ ಕುಮಾರ್‌ ಅಲಿಯಾಸ್‌ ಗಿರಿ(41) ಬಂಧಿತ. ಆರೋಪಿಯಿಂದ ₹25 ಲಕ್ಷ ಮೌಲ್ಯದ 449 ಗ್ರಾಂ ಚಿನ್ನ ಮತ್ತು ವಜ್ರಾಭರಣ ಜಪ್ತಿ ಮಾಡಲಾಗಿದೆ. ಅ.21ರಂದು ಕೆಂಗೇರಿ ಮೈಸೂರು ರಸ್ತೆಯ ಬಿಡಿಎ ಅಪಾರ್ಟ್‌ಮೆಂಟ್‌ ಬಳಿ ರಾಜೇಶ್‌ ಶ್ರೀವಾಸ್ತವ್‌ ಅವರು ತಮ್ಮ ಪತ್ನಿ ಜತೆಗೆ ಕಾರಿನಲ್ಲಿ ಹೋಗುವಾಗ ಕೆಲ ದುಷ್ಕರ್ಮಿಗಳು ಕಾರು ಪಂಕ್ಚರ್‌ ಆಗಿದೆ ಎಂದು ದಂಪತಿಯ ಗಮನ ಬೇರೆಡೆ ಸೆಳೆದು ಕಾರಿನಲ್ಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕದಿಯಲು ಬಂದು ಗಡದ್ ನಿದ್ದೆಗೆ ಜಾರಿದ ಕಳ್ಳ, 2ನೇ ಎಡವಟ್ಟು ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ!

ಏನಿದು ಪ್ರಕರಣ?

ದೂರುದಾರ ರಾಜೇಶ್‌ ದಂಪತಿ ಕೆಂಗೇರಿಯ ಮೈಸೂರು ರಸ್ತೆಯ ಬಿಡಿಎ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದಾರೆ. ಕೆಲ ತಿಂಗಳ ಹಿಂದೆ ಚಂದ್ರಾಲೇಔಟ್‌ನ ಕೆನರಾ ಬ್ಯಾಂಕ್‌ ಶಾಖೆಯಲ್ಲಿ ಲಾಕರ್‌ನಲ್ಲಿ ಸುಮಾರು 500 ಗ್ರಾಂ ಚಿನ್ನಾಭರಣಗಳನ್ನು ಇರಿಸಿದ್ದರು. ಅ.21ರಂದು ರಾಜೇಶ್‌ ದಂಪತಿ ಬ್ಯಾಂಕ್‌ ತೆರಳಿ ಲಾಕರ್‌ನಲ್ಲಿದ್ದ ಚಿನ್ನಾಭರಣ ತೆಗೆದುಕೊಂಡು ಕಾರಿನಲ್ಲಿ ಇರಿಸಿಕೊಂಡು ಮನೆ ಕಡೆಗೆ ಹೊರಟ್ಟಿದ್ದಾರೆ.

ಬ್ಯಾಂಕ್‌ ಬಳಿ ಕುಳಿತು ನಿಗಾ:

ಈ ನಡುವೆ ಬ್ಯಾಂಕ್‌ ಬಳಿ ಕುಳಿತು ರಾಜೇಶ್‌ ದಂಪತಿ ಚಲನವಲನ ಗಮನಿಸಿರುವ ದುಷ್ಕರ್ಮಿಗಳು, ಕಾರಿನ ಹಿಂಬದಿ ಚಕ್ರ ಪಂಕ್ಚರ್‌ ಮಾಡಿದ್ದಾರೆ. ಕಾರು ಪಂಕ್ಚರ್‌ ಆಗಿರುವುದನ್ನು ಗಮನಿಸದ ದಂಪತಿ ಮನೆ ಕಡೆಗೆ ಹೊರಟ್ಟಿದ್ದಾರೆ. ಕೆಂಗೇರಿ ಮೈಸೂರು ರಸ್ತೆಯ ಬಿಡಿಎ ಅಪಾರ್ಟ್‌ಮೆಂಟ್‌ ಬಳಿ ನಿಧಾನಗತಿಯಲ್ಲಿ ಹೋಗುವಾಗ ದ್ವಿಚಕ್ರ ವಾಹನದಲ್ಲಿ ಫಾಲೋ ಮಾಡಿಕೊಂಡು ಬಂದಿರುವ ಇಬ್ಬರು ದುಷ್ಕರ್ಮಿಗಳು, ಕಾರಿನ ಟೈಯರ್‌ ಪಂಕ್ಚರ್‌ ಆಗಿದೆ ಎಂದು ಹೇಳಿದ್ದಾರೆ. ಈ ವೇಳೆ ರಾಜೇಶ್‌ ಕಾರು ಪಕ್ಕಕ್ಕೆ ಹಾಕಿ ನೋಡಿದಾಗ ಟೈಯರ್‌ ಪಂಕ್ಚರ್‌ ಆಗಿರುವುದು ಕಂಡು ಬಂದಿದೆ.

ಬ್ಯಾಗ್‌ ಎಗರಿಸಿ ಪರಾರಿ:

ಈ ವೇಳೆ ಮತ್ತಿಬ್ಬರು ದ್ವಿಚಕ್ರ ವಾಹನದಲ್ಲಿ ಬಂದು ಸಮೀಪದಲ್ಲೇ ಪಂಕ್ಚರ್‌ ಅಂಗಡಿ ಇದೆ ಎಂದು ದಂಪತಿ ಗಮನ ಬೇರೆಡೆ ಸೆಳೆದಿದ್ದಾರೆ. ಈ ವೇಳೆ ಕಾರಿನಿಂದ ದಂಪತಿ ಕೆಳಗೆ ಇಳಿದು ಪಂಕ್ಚರ್‌ ಅಂಗಡಿ ಕಡೆಗೆ ನೋಡುವಾಗ, ಇನ್ನಿಬ್ಬರು ದ್ವಿಚಕ್ರ ವಾಹನದಲ್ಲಿ ಕಾರಿನ ಬಾಗಿಲು ತೆರೆದು ಚಿನ್ನಾಭರಣವಿದ್ದ ಬ್ಯಾಗ್‌ ಎತ್ತಿಕೊಂಡು ಪರಾರಿಯಾಗಿದ್ದಾರೆ. ಅಷ್ಟರಲ್ಲಿ ಉಳಿದ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಪಂಕ್ಚರ್‌ ಅಂಗಡಿ ಬಳಿಗೆ ಕಾರು ತೆಗೆದುಕೊಂಡು ಹೋಗಲು ರಾಜೇಶ್‌ ದಂಪತಿ ಕಾರಿನೊಳಗೆ ಕೂರಲು ನೋಡಿದಾಗ ಆಸನದ ಮೇಲೆ ಇಟ್ಟಿದ್ದ ಚಿನ್ನಾಭರಣವಿದ್ದ ಬ್ಯಾಗ್‌ ನಾಪತ್ತೆ ಆಗಿರುವುದು ಕಂಡು ಬಂದಿದೆ. ಬಳಿಕ ಕೆಂಗೇರಿ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದರು. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಇನ್ನೂ ಐವರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಓಜಿ ಕುಪ್ಪಂ ಗ್ಯಾಂಗ್‌?

ಇದೊಂದು ಕುಖ್ಯಾತ ದರೋಡೆಕೋರರ ಗ್ಯಾಂಗ್‌. ಈ ಗ್ಯಾಂಗ್‌ನ ಸದಸ್ಯರು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಒರಂತಗಲ್‌ ಗೊಲ್ಲ ಕುಪ್ಪಂ(ಓಜಿ ಕುಪ್ಪಂ) ಎಂಬ ಹಳ್ಳಿ ನಿವಾಸಿಗಳು. ಇವರು ವೃತ್ತಿಪರ ದರೋಡೆಕೋರರು. ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳ ಬಳಿ ಕುಳಿತು ಹಣ, ಚಿನ್ನಾಭರಣ ತೆಗೆದುಕೊಂಡು ಬರುವ ಸಾರ್ವಜನಿಕರ ಮೇಲೆ ನಿಗಾ ವಹಿಸಿ, ಫಾಲೋ ಮಾಡಿ ಮಾರ್ಗ ಮಧ್ಯೆ, ಟೈಯರ್‌ ಪಂಕ್ಚರ್‌, ಎಂಜಿನ್‌ನಲ್ಲಿ ಆಯಿಲ್‌ ಸೋರಿಕೆ, ಅಪಘಾತ ಹೀಗೆ ನಾನಾ ರೀತಿಯಲ್ಲಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ನಗದು, ಚಿನ್ನಾಭರಣ ಎಗರಿಸಿ ಪರಾರಿ ಆಗುತ್ತಾರೆ. ಬಳಿಕ ಕದ್ದ ಮಾಲನ್ನು ಹಂಚಿಕೊಂಡು ಮೋಜು-ಮಸ್ತಿ ಮಾಡಿ ವ್ಯಯಿಸುತ್ತಾರೆ. ಈ ಗ್ಯಾಂಗ್‌ನ ಸದಸ್ಯರು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಸಕ್ರಿಯರಾಗಿದ್ದಾರೆ.

ಸಿಸಿಟಿವಿ ನೀಡಿದ ಸುಳಿವು

ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಕೆಂಗೇರಿ ಠಾಣೆ ಪೊಲೀಸರು ತನಿಖೆಗೆ ಇಳಿದಾಗ ಚಂದ್ರಾಲೇಔಟ್‌ನ ಕೆನರಾ ಬ್ಯಾಂಕ್‌ ಬಳಿ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿ ಗಿರಿ ಕುಮಾರ್‌ನ ಚಲನವಲನಗಳು ಸೆರೆಯಾಗಿದ್ದವು. ಈ ಸುಳಿವಿನ ಮೇರೆಗೆ ಇದು ಓಜಿ ಕುಪ್ಪಂ ಗ್ಯಾಂಗ್‌ನ ಕೈ ಚಳಕ ಎಂಬುದು ಖಚಿತಪಡಿಸಿಕೊಂಡು ಸಬ್‌ ಇನ್‌ಸ್ಪೆಕ್ಟರ್‌ ಬೈರಪ್ಪ ನೇತೃತ್ವದ ತಂಡ ಆಂಧ್ರಪ್ರದೇಶದ ಓಜಿ ಕುಪ್ಪಂಗೆ ತೆರಳಿ ಕಾರ್ಯಾಚರಣೆ ನಡೆಸಿ ಆರೋಪಿ ಗಿರಿ ಕುಮಾರ್‌ನನ್ನು ಬಂಧಿಸಿ ನಗರಕ್ಕೆ ತಂದಿದೆ.

ಪತ್ನಿಯ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿರಾಯ!

ಆರೋಪಿ ಗಿರಿ ಕುಮಾರ್‌ ಈ ಹಿಂದೆ ನಗರದ ಜಿಗಣಿ, ಅಮೃತಹಳ್ಳಿ, ಆನೇಕಲ್‌ ಸೇರಿದಂತೆ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ದರೋಡೆ ಮಾಡಿ ಜೈಲು ಸೇರಿದ್ದ. ಜಾಮೀನು ಪಡೆದು ಹೊರಬಂದ ಬಳಿಕವೂ ಮತ್ತೆ ತಮ್ಮ ಗ್ಯಾಂಗ್‌ ಜತೆ ಸೇರಿಕೊಂಡು ಅಪರಾಧ ಪ್ರಕರಣಗಳಲ್ಲಿ ತೊಡಗಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಬೈಕ್‌ಗಳಲ್ಲಿ ಬರುತ್ತಾರೆ!

ಈ ಓಜಿ ಕುಪ್ಪಂನ ಗ್ಯಾಂಗ್‌ ಸದಸ್ಯರು ಆಂಧ್ರಪ್ರದೇಶದ ದ್ವಿಚಕ್ರ ವಾಹನಗಳಲ್ಲಿ ನಗರಕ್ಕೆ ಬರುತ್ತಾರೆ. ದ್ವಿಚಕ್ರ ವಾಹನಗಳ ನೋಂದಣಿ ಫಲಕ ಬದಲಿಸಿಕೊಂಡು ನಗರದಲ್ಲಿ ಕೃತ್ಯ ಎಸೆಗಿ ಪರಾರಿ ಆಗುತ್ತಾರೆ. ಆರೋಪಿಗಳು ತಮ್ಮ ತಮ್ಮ ಪಾತ್ರಗಳ ಬಗ್ಗೆ ಮೊದಲೇ ಚರ್ಚಿಸಿಕೊಂಡು ಅದರಂತೆ ತಮ್ಮ ಕಾರ್ಯ ನಿರ್ವಹಿಸುತ್ತಾರೆ. ಬಹಳ ತಾಳ್ಮೆಯಿಂದ ಕಾದು ತಮ್ಮ ಯೋಜನೆ ಕಾರ್ಯರೂಪಕ್ಕೆ ಇಳಿಸಿಕೊಂಡು ಪರಾರಿಯಾಗುತ್ತಾರೆ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

Latest Videos
Follow Us:
Download App:
  • android
  • ios