ಬೆಂಗಳೂರು(ಏ.09): ಫೇಸ್‌ಬುಕ್‌ನಲ್ಲಿ ‘ಬೆತ್ತಲೆ ಗ್ಯಾಂಗ್‌’ ಗಾಳಕ್ಕೆ ಸಿಲುಕಿ ಯುವಕನ ಆತ್ಮಹತ್ಯೆ ಘಟನೆ ಮರೆಯುವ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳನ್ನು ಸ್ನೇಹದ ಬಲೆ ಬೀಸಿ, ಲೈಂಗಿಕವಾಗಿ ಶೋಷಿಸಿ ವಂಚಿಸಿರುವ ಹೀನಾಯ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದಿವಾಕರ್‌ ಅಲಿಯಾಸ್‌ ಹರ್ಷ (30)ನನ್ನು ಬಂಧಿಸಲಾಗಿದೆ. ಆರೋಪಿಯಿಂದ ಸುಮಾರು ಹತ್ತಕ್ಕೂ ಹೆಚ್ಚು ಅಪ್ರಾಪ್ತ ಬಾಲಕಿಯರು ಅನ್ಯಾಯಕ್ಕೊಳಗಾಗಿದ್ದಾರೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ನೀಡಿದ ದೂರಿನ್ವಯ ಆರೋಪಿಯನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶೋಕಿಲಾಲನಾದ ದಿವಾಕರ್‌ ಪಿಯುಸಿ ವರೆಗೆ ಓದಿದ್ದು, ಯುವತಿಯರನ್ನು ಸೆಳೆಯಲು ಆಕರ್ಷಕ ವೇಷಭೂಷಣ ತೊಟ್ಟು ತೆಗೆಸಿಕೊಂಡು ಭಾವಚಿತ್ರಗಳನ್ನು ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿದ್ದ.
ಈ ಫೋಟೋಗಳನ್ನು ನೋಡಿ ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಆಗ ಹೆಣ್ಣು ಮಕ್ಕಳಿಗೆ ಗಾಳ ಹಾಕುತ್ತಿದ್ದ ಆತ, ತಾನಾಗಿಯೇ ಬಾಲಕಿಯರಿಗೆ ಫ್ರೆಂಡ್‌ ರಿಕ್ವಸ್ಟ್‌ ಕಳುಹಿಸಿ ಸ್ನೇಹ ಮಾಡಿಕೊಳ್ಳುತ್ತಿದ್ದ. ಬಳಿಕ ಅವರೊಂದಿಗೆ ಚಾಟ್‌ ಶುರು ಮಾಡುತ್ತಿದ್ದ. ಹೀಗೆ ಆತ್ಮೀಯತೆ ಬೆಳೆದ ಬಳಿಕ ಪರಸ್ಪರ ಮೊಬೈಲ್‌ ನಂಬರ್‌ಗಳು ವಿನಿಮಿಯವಾಗುತ್ತಿದ್ದವು. ಆ ಗೆಳೆಯರ ಪೈಕಿ ಕೆಲವರಿಗೆ ತನ್ನನ್ನು ಉದ್ಯಮಿ ಎಂದೂ, ಮತ್ತೆ ಕೆಲವರಿಗೆ ಐಎಎಸ್‌ ಪರೀಕ್ಷೆ ತಯಾರಿ ನಡೆಸಿರುವ ವಿದ್ಯಾರ್ಥಿ ಎಂದೂ ಸುಳ್ಳು ಹೇಳಿ ಬಿಲ್ಡಪ್‌ ಕೊಟ್ಟಿದ್ದ. ಕಂಪನಿಗಳು ಹಾಗೂ ಐಷರಾಮಿ ಮನೆಗಳ ಮುಂದೆ ಸೆಲ್ಫಿ ಫೋಟೋ, ವಿಡಿಯೋ ಮಾಡಿಕೊಂಡು ಅಪ್ರಾಪ್ತೆಯರಿಗೆ ಕಳುಹಿಸಿ ಆತ ವಿಶ್ವಾಸಗೊಳಿಸಲು ಯತ್ನಿಸಿದ್ದ. ಆದರೆ ಈ ನಾಜೂಕಯ್ಯನ ಹಿಂದಿರುವ ಕಪಟ ಅರಿಯದ ಬಾಲಕಿಯರು, ಆತನ ಮಾತಿಗೆ ಮರಳಾಗುತ್ತಿದ್ದರು. ಬಳಿಕ ಆತನೊಂದಿಗೆ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದರು. ಕೆಲವರಿಗೆ ಲೈಂಗಿಕವಾಗಿ ಶೋಷಿಸಿ ಆತನ ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾವೇರಿ: ಇಂಗ್ಲೆಂಡ್‌ನಲ್ಲಿ ಕೆಲಸ ಕೊಡಿಸೋದಾಗಿ ಟೋಪಿ ಹಾಕಿದ ಖದೀಮ..!

ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ 17 ವರ್ಷದ ಪಿಯುಸಿ ವಿದ್ಯಾರ್ಥಿನಿಗೆ ಮೋಸವಾಗಿತ್ತು. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಆತನ ಮೊಬೈಲ್‌ ಪರಿಶೀಲಿಸಿದಾಗ ಆರೋಪಿಯಿಂದ ಮತ್ತೆ ಏಳು ಮಂದಿ ವಂಚನೆಗೊಳಗಾಗಿರುವುದು ಗೊತ್ತಾಯಿತು. ಆದರೆ ಆರೋಪಿ ವಿರುದ್ಧ ಸಂತ್ರಸ್ತೆಯರು ದೂರು ಕೊಡಲು ಹಿಂದೇಟು ಹಾಕಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಬ್ಯೂಟಿ ಪಾರ್ಲರ್‌ ಕೆಲಸದಾಕೆಗೆ ವಂಚನೆ

ಐಎಎಸ್‌ ಪರೀಕ್ಷೆ ತಯಾರಿ ನಡೆಸಿದ್ದೇನೆ ಎಂದು ಹೇಳಿ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಸ್ನೇಹದ ಬಲೆಗೆ ಆತ ಬೀಳಿಸಿಕೊಂಡಿದ್ದ. ಬಳಿಕ ಆಕೆಗೆ ಮದುವೆ ಆಗುವುದಾಗಿ ನಂಬಿಸಿ ಕೆಲ ತಿಂಗಳು ಲಿವಿಂಗ್‌ ಟುಗೆದರ್‌ನಲ್ಲಿ ನೆಲೆಸಿದ್ದ. ಆದರೆ ಗೆಳೆಯನ ನಿಜವಾದ ಮುಖವಾಡ ತಿಳಿದು ಆಕೆ ದೂರವಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ದೂರು ನೀಡಿದರೆ ಕ್ರಮ

ಆರೋಪಿಯಿಂದ ವಂಚನೆಗೊಳಗಾದವರು ದೂರು ನೀಡಿದರೆ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತದೆ. ಆದರೆ ಕೆಲವರು ಮರ್ಯಾದೆಗೆ ಅಂಜಿ ದೂರು ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.