ಬೆಂಗಳೂರು: ಹಸುವಿನ ಚಿತ್ರ ಆಧರಿಸಿ ಅಪಘಾತ ಆರೋಪಿ ಸೆರೆ
ಮಂಡ್ಯ ಜಿಲ್ಲೆ ತೂಬಿನಕೆರೆ ನಿವಾಸಿಗಳಾದ ಸಂದೀಪ್ ಹಾಗೂ ಸುನೀಲ್ ಬಂಧಿತರಾಗಿದ್ದು, ಆರೋಪಿಗಳಿಂದ ಐಷರ್ ಜಪ್ತಿ ಮಾಡಲಾಗಿದೆ. ನಾಗರಬಾವಿ ಹೊರ ವರ್ತುಲ ರಸ್ತೆಯ ಮಾಳಗಾಳ ಬಳಿ ಬೈಕ್‌ನಿಂದ ಆಯತಪ್ಪಿ ಕೆಳಗೆ ಬಿದ್ದಿದ್ದ ನೇಪಾಳ ಮೂಲದ ದಿನೇಶ್ ಮೇಲೆ ಐಷರ್ ಹರಿಸಿ ಆರೋಪಿಗಳು ಪರಾರಿಯಾಗಿದ್ದರು.
ಬೆಂಗಳೂರು(ಮೇ.28): ಐದು ತಿಂಗಳ ಹಿಂದೆ ನಾಗರಬಾವಿ ಹೊರವರ್ತುಲ ರಸ್ತೆಯ ಮಾಳಗಾಳ ಸೇತುವೆ ಬಳಿ ಹಿಟ್ ಆ್ಯಂಡ್ ರನ್ ಮಾಡಿ ನೇಪಾಳ ದೇಶದ ಪ್ರಜೆ ಸಾವಿಗೆ ಕಾರಣರಾಗಿದ್ದ ಸರಕು ಸಾಗಾಣಿಕೆ ವಾಹನ (ಐಷರ್) ಮಾಲಿಕ ಸೇರಿ ಇಬ್ಬರನ್ನು ಹಸುವಿನ ಚಿತ್ರದ ಸುಳಿವು ಆಧರಿಸಿ ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.
ಮಂಡ್ಯ ಜಿಲ್ಲೆ ತೂಬಿನಕೆರೆ ನಿವಾಸಿಗಳಾದ ಸಂದೀಪ್ ಹಾಗೂ ಸುನೀಲ್ ಬಂಧಿತರಾಗಿದ್ದು, ಆರೋಪಿಗಳಿಂದ ಐಷರ್ ಜಪ್ತಿ ಮಾಡಲಾಗಿದೆ. ನಾಗರಬಾವಿ ಹೊರ ವರ್ತುಲ ರಸ್ತೆಯ ಮಾಳಗಾಳ ಬಳಿ ಬೈಕ್‌ನಿಂದ ಆಯತಪ್ಪಿ ಕೆಳಗೆ ಬಿದ್ದಿದ್ದ ನೇಪಾಳ ಮೂಲದ ದಿನೇಶ್ ಮೇಲೆ ಐಷರ್ ಹರಿಸಿ ಆರೋಪಿಗಳು ಪರಾರಿಯಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ರಸ್ತೆ ಬಿದ್ದವರ ಮೇಲೆ ಹರಿದ ವಾಹನ:
ಕಳೆದ ಜನವರಿ 14ರಂದು ನಸುಕಿನ 2 ಗಂಟೆ ಸುಮಾರಿಗೆ ನಾಗರಬಾವಿ ಹೊರವರ್ತುಲ ರಸ್ತೆಯಲ್ಲಿ ತಮ್ಮ ಸ್ನೇಹಿತ ಟಿಕಾರಾಜ್ ಜತೆ ಬೈಕ್‌ನಲ್ಲಿ ನೇಪಾಳ ಮೂಲದ ದಿನೇಶ್ ತೆರಳುತ್ತಿದ್ದರು. ಮಾರ್ಗ ಮಧ್ಯೆ ಪಾನಮತ್ತನಾಗಿ ಬೈಕ್ ಓಡಿಸುತ್ತಿದ್ದರಿಂದ ಮಾಳಗಾಳ ಸೇತುವೆ ಬಳಿ ಚಾಲನೆ ಮೇಲೆ ನಿಯಂತ್ರಣ ತಪ್ಪಿ ಗೆಳೆಯರು ರಸ್ತೆಗೆ ಬಿದ್ದಿದ್ದರು. ಆಗ ಸೇತುವೆಯಿಂದ ಟಿಕಾರಾಜ್ ಕೆಳಗೆ ಬಿದ್ದರೆ, ಸೇತುವೆಯಲ್ಲಿ ಉರುಳಿದ್ದ ದಿನೇಶ್ ಮೇಲೆ ಹಿಂದಿನಿಂದ ಬಂದ ಐಷರ್ ವಾಹನ ಹರಿಯಿತು. ಇದರಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದ. ಈ ಅಪಘಾತದ ಬಳಿಕ ವಾಹನವನ್ನು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದ. ಈ ಘಟನೆ ನಡೆದಾಗ ಆ ವಾಹನದಲ್ಲಿ ಮಾಲಿಕ ಸಂದೀಪ್ ಸಹ ಇದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಸುವಿದ್ದ ಫೋಟೋ, ಚಕ್ರಕ್ಕೆ ಅಂಟಿದ್ದ ಮಾಂಸ, ರಕ್ತ!
ಅಪಘಾತದ ಪ್ರಕರಣದ ತನಿಖೆಗಿಳಿದ ಕಾಮಾಕ್ಷಿಪಾಳ್ಯ ಸಂಚಾರ ಇನ್‌ಸ್ಪೆಕ್ಟರ್ ಟಿ.ಕೆ.ಯೋಗೇಶ್ ನೇತೃತ್ವದ ತಂಡವು, ಘಟನಾ ಸ್ಥಳದಲ್ಲಿ ರಕ್ತದ ಕಲೆಯಿರುವ ಹೆಲ್ಮೆಟ್ ಸೇರಿದಂತೆ ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸಿದ್ದರು. ಬಳಿಕ ಆ ರಸ್ತೆಯುದ್ದಕ್ಕೂ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಸರಕು ಸಾಗಾಣಿಕೆ ವಾಹನ ಮೇಲೆ ಹಸುವಿನ ಚಿತ್ರವಿರುವುದು ಗೊತ್ತಾಯಿತು. ಈ ಸುಳಿವು ಆಧರಿಸಿ ಮತ್ತಷ್ಟು ತನಿಖೆಗಿಳಿದಾಗ ಕೊನೆಗೆ ಮಂಡ್ಯದ ಕೈಗಾರಿಕಾ ಪ್ರದೇಶದಲ್ಲಿದ್ದ ಪಶು ಆಹಾರ ಕಂಪನಿಗೆ ಸೇರಿದ ವಾಹನ ಎಂಬ ಸಂಗತಿ ಬೆಳಕಿಗೆ ಬಂದಿತು. ಅಂತೆಯೇ ಆ ವಾಹನವನ್ನು ಜಪ್ತಿ ಮಾಡಿ ಚಕ್ರಗಳನ್ನು ಲೂಮಿನಾರ್ ಪರೀಕ್ಷೆಗೆ ಒಳಪಡಿಸಲಾಯಿತು. ಆಗ ಚಕ್ರಗಳಲ್ಲಿ ಅಂಟಿದ್ದ ರಕ್ತದ ಕಲೆಗಳು ಹಾಗೂ ಮಾಂಸದ ತುಂಡುಗಳನ್ನು ಸಂಗ್ರಹಿಸಿ ನಂತರ ಅದನ್ನು ಮೃತ ವ್ಯಕ್ತಿಯ ರಕ್ತಕ್ಕೂ ಹೋಲಿಸಿದಾಗ ತಾಳೆಯಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ವೈಜ್ಞಾನಿಕ ವರದಿ ಆಧಾರದ ಮೇರೆಗೆ ತಲೆಮರೆಸಿಕೊಂಡಿದ್ದ ಐಷರ್ ವಾಹನ ಚಾಲಕ ಮಾಲಿಕ ಸಂದೀಪ್ ಹಾಗೂ ಚಾಲಕ ಸುನೀಲ್ ನನ್ನು ಬಂಧಿಸಲಾಗಿದೆ. ಅಲ್ಲದೆ ಪಾನಮತ್ತನಾಗಿ ಬೈಕ್ ಓಡಿಸಿ ಗೆಳೆಯನ ಸಾವಿಗೆ ಕಾರಣನಾದ ಆರೋಪದ ಮೇರೆಗೆ ಮೃತನ ಸ್ನೇಹಿತ ಟಿಕಾರಾಜ್‌ನನ್ನು ಸಹ ಬಂಧಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.