ಕುಂಭಮೇಳಕ್ಕೆ ತೆರಳಿದ ವ್ಯಕ್ತಿಯೊಬ್ಬ ತಾಯಿಯನ್ನು ಮನೆಯಲ್ಲಿ ಕೂಡಿಹಾಕಿದ ಘಟನೆ ಜಾರ್ಖಂಡ್‌ನ ರಾಮಗಢದಲ್ಲಿ ನಡೆದಿದೆ. ವೃದ್ಧೆ ಹಸಿವಿನಿಂದ ಬಳಲುತ್ತಿದ್ದು, ನೆರೆಹೊರೆಯವರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಾಯಿಯ ಆರೋಗ್ಯ ಸರಿಯಿಲ್ಲದ ಕಾರಣ ಕರೆದುಕೊಂಡು ಹೋಗಲಿಲ್ಲ ಎಂದು ಆತ ಹೇಳಿದ್ದಾನೆ. ಸದ್ಯಕ್ಕೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ಕುಂಭಮೇಳ ಹಿಂದೆಂದೂ ಕಾಣದಷ್ಟು ಜನರನ್ನು ಕಂಡಿದೆ. ಇದಾಗಲೇ 55 ಕೋಟಿಗೂ ಅಧಿಕ ಮಂದಿ ಪುಣ್ಯಸ್ನಾನ ಮಾಡಿದ್ದಾರೆ. ತಾವು ಮಾಡಿರುವ ಪಾಪವನ್ನು ಕಳೆದುಕೊಳ್ಳಲು ಹಲವರು ತ್ರಿವೇಣಿಸಂಗಮದಲ್ಲಿ ಮಿಂದೆದ್ದಿದ್ದಾರೆ. ಆದರೆ, ಉದ್ದೇಶಪೂರ್ವಕವಾಗಿ ಪಾಪ ಮಾಡಿಯೇ ಪುಣ್ಯಸ್ನಾನ ಮಾಡಲು ಬಂದ ಘಟನೆಗಳು ಅದೆಷ್ಟೋ ಗೊತ್ತಿಲ್ಲ! ಮನವು ಶುದ್ಧವಾಗಿರದೇ ತನುವನ್ನು ಶುದ್ಧಮಾಡಿಕೊಳ್ಳಲು ಹೋದ ದುಷ್ಟ ಮಗನೊಬ್ಬನ ನಡವಳಿಗೆ ಈಗ ಬಯಲಾಗಿದೆ. ವೃದ್ಧೆ ಅಮ್ಮನನ್ನು ಹಸಿವೆಯಿಂದ ಬಳಲುವಂತೆ ಮಾಡಿ ಮನೆಯಲ್ಲಿ ಕೂಡಿ ಹಾಕಿ ಹೋದ ಮಹಾಶಯನ ಕಥೆ ಇದು. ಪತ್ನಿ ಮತ್ತು ಮಕ್ಕಳ ಸಮೇತ ಮಾಡಿದ ಪಾಪವನ್ನು ತೊಳೆದುಕೊಳ್ಳಲು ತ್ರಿವೇಣಿ ಸಂಗಮಕ್ಕೆ ಹೋಗಿದ್ದಾರೆ ಈ ಪಾಪಿ ಮಗ!

 ಜಾರ್ಖಂಡ್‌ನ ರಾಮಗಢ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸಿಸಿಎಲ್ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಯೊಬ್ಬ ತಮ್ಮ 65 ವರ್ಷದ ಅನಾರೋಗ್ಯ ಪೀಡಿತ ತಾಯಿಯನ್ನು ಮನೆಗೆ ಕೂಡಿಹಾಕಿ, ಪತ್ನಿ ಮತ್ತು ಮಕ್ಕಳೊಂದಿಗೆ ಕುಂಭ ಸ್ನಾನ ಮಾಡಲು ಪ್ರಯಾಗ್‌ರಾಜ್‌ಗೆ ತೆರಳಿದ್ದಾನೆ. ನೆರೆಹೊರೆಯವರಿಗೂ ಈ ವಿಷಯ ಹೇಳಿರಲಿಲ್ಲ. ಸಾಲದು ಎನ್ನುವುದಕ್ಕೆ ಹೆತ್ತ ಅಮ್ಮನಿಗೆ ಬೇಕಾದಷ್ಟು ಆಹಾರದ ವ್ಯವಸ್ಥೆಯನ್ನೂ ಈ ಪುತ್ರಮಹಾಶಯ ಮಾಡಿರಲಿಲ್ಲ. ಆದ್ದರಿಂದ ಹಸಿವಿನಿಂದ ಬಳಲುತ್ತಿದ್ದ ವೃದ್ಧ ತಾಯಿ ಸಹಾಯಕ್ಕಾಗಿ ಕೂಗಿಕೊಂಡಾಗ ನೆರೆಹೊರೆಯವರು ಬೀಗ ಒಡೆದು ಒಳಗೆ ಪ್ರವೇಶಿಸಿದರು. ಪರಿಸ್ಥಿತಿ ಎಷ್ಟು ಭೀಕರವಾಗಿತ್ತೆಂದರೆ, ಹಸಿವಿನಿಂದ ಆ ವೃದ್ಧೆ ಪ್ಲಾಸ್ಟಿಕ್ ತಿನ್ನಲು ಪ್ರಯತ್ನಿಸುತ್ತಿದ್ದಳು.

ವಾಚ್​ ಕೊಡುವುದಾಗಿ ಕರೆದು ಬಾಗಿಲು ಹಾಕಿದ... ಬಾಲ್ಯದ ಮೈನಡುಗುವ ಕರಾಳ ಘಟನೆ ನೆನೆದ ನೇಹಾ ಗೌಡ

 ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ನೆರೆಹೊರೆಯವರು ತಮ್ಮ ವಿವಾಹಿತ ಮಗಳು ಮತ್ತು ಮಹಿಳೆಯ ಸಹೋದರನಿಗೆ ಈ ಬಗ್ಗೆ ಮಾಹಿತಿ ನೀಡಿದರು. ಅವರು ಈ ವಿಷಯದ ಬಗ್ಗೆ ರಾಮಗಢ ಪೊಲೀಸರಿಗೆ ಮಾಹಿತಿ ನೀಡಿದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳೀಯರ ಸಹಾಯದಿಂದ ವೃದ್ಧೆಯನ್ನು ಹೊರತೆಗೆದು ಚಿಕಿತ್ಸೆಗಾಗಿ ರಾಮಗಢ ಸದರ್ ಆಸ್ಪತ್ರೆಗೆ ಕಳುಹಿಸಿದರು.

 ತಾಯಿಯ ಆರೋಗ್ಯ ಹದಗೆಟ್ಟ ಕಾರಣ, ಅವರನ್ನು ಪ್ರಯಾಗ್‌ರಾಜ್‌ಗೆ ಕರೆದುಕೊಂಡು ಹೋಗಲಿಲ್ಲ ಎಂದು ಮಗ ಹೇಳಿದ್ದಾನೆ! ಈ ವಿಷಯದ ಬಗ್ಗೆ, ರಾಮಗಢ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್‌ಪೆಕ್ಟರ್ ಕೃಷ್ಣ ಕುಮಾರ್, ಮಾಹಿತಿ ಪಡೆದ ನಂತರ, ವಿವಾಹಿತ ಮಗಳಿಗೆ ಕರೆ ಮಾಡಿ ಮನೆಯ ಮುಖ್ಯ ದ್ವಾರವನ್ನು ಒಡೆದು ವೃದ್ಧೆಯನ್ನು ಹೊರಗೆ ಕರೆದು ರಾಮಗಢ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ವಿಷಯದಲ್ಲಿ ಯಾವುದೇ ದೂರು ದಾಖಲಾಗಿದ್ದರೆ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಕೂಡಲೇ ಆತನ ವಿರುದ್ಧ ಕ್ರಮ ಕೈಗೊಂಡು ಬಂಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. 

ವಾಸಿಯಾಗದ ಕೆಮ್ಮು- ಸ್ಕ್ಯಾನ್​ನಲ್ಲಿ ಕಂಡದ್ದು ಗಡ್ಡೆ, ಆಪರೇಷನ್​ ವೇಳೆ ಸಿಕ್ಕಿದ್ದೇ ಬೇರೆ: ವೈದ್ಯರೇ ಕಂಗಾಲು!