ಬೆಂಗಳೂರಿನಲ್ಲಿ ಹಾಡುಹಗಲೇ ಯುವತಿಯೊಬ್ಬಳ ಮೇಲೆ ಕಾಮುಕನೋರ್ವ ಅಸಭ್ಯವಾಗಿ ವರ್ತಿಸಿ, ಬಲವಂತವಾಗಿ ತಬ್ಬಿಕೊಂಡು ತುಟಿಗೆ ಕಚ್ಚಿದ ಘಟನೆ ನಡೆದಿದೆ. ಗೋವಿಂದಪುರದಲ್ಲಿ ನಡೆದ ಈ ಘಟನೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಮಹಿಳೆಯರ ಸುರಕ್ಷತೆಯ ಬಗ್ಗೆ ಮತ್ತೆ ಚರ್ಚೆ ಹುಟ್ಟಿಕೊಂಡಿದೆ.
ಬೆಂಗಳೂರು (ಜುಲೈ.24): ಹಾಡುಹಗಲೇ ಯುವತಿಯೊಬ್ಬಳನ್ನು ಹಿಂಬಾಲಿಸಿ, ಕಾಮುಕನೋರ್ವ ಸಾರ್ವಜನಿಕ ಸ್ಥಳದಲ್ಲಿ ಬಲವಂತವಾಗಿ ತಬ್ಬಿ ಯುವತಿಯ ತುಟಿ ಕಚ್ಚಿದ ಘಟನೆ ಬೆಂಗಳೂರಿನ ಗೋವಿಂದಪುರ ಪ್ರದೇಶದಲ್ಲಿ ನಡೆದಿದ್ದು, ಆರೋಪಿಯನ್ನ ಬಂಧಿಸಲಾಗಿದೆ.
ಮೊಹಮ್ಮದ್ ಮರೂಫ್ ಶರೀಫ್, ಬಂಧಿತ ಆರೋಪಿ. ಪೊಲೀಸರ ಪ್ರಕಾರ, ಮಹಿಳೆ ಪಡಿತರ ಖರೀದಿಸಲು ಹೊರಗೆ ಹೋದಾಗ ಈ ಘಟನೆ ನಡೆದಿದೆ. ಆರೋಪಿ ಮರೂಫ್ ಆಕೆಯನ್ನು ಹಿಂಬಾಲಿಸಿದ್ದು, ಅಸಭ್ಯವಾಗಿ ವರ್ತಿಸಿ, ಬಲವಂತವಾಗಿ ತಬ್ಬಿಕೊಂಡು ರಸ್ತೆಯ ಮಧ್ಯದಲ್ಲಿ ಆಕೆಯ ತುಟಿಗಳಿಗೆ ಕಚ್ಚಿದ್ದಾನೆ. ಘಟನೆಯಿಂದ ಆಘಾತಕ್ಕೊಳಗಾದ ಮಹಿಳೆ ತಪ್ಪಿಸಿಕೊಂಡು ತನ್ನ ತಾಯಿಗೆ ವಿಷಯ ತಿಳಿಸಿದ್ದಾಳೆ. ನಂತರ ತಾಯಿ ಮತ್ತು ಮಗಳು ಗೋವಿಂದಪುರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ತಕ್ಷಣ ಎಚ್ಚೆತ್ತ ಪೊಲೀಸರು ಕಾಮುಕ ಮರೂಫ್‌ನನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಸಾರ್ವಜನಿಕ ಅಸಭ್ಯತೆಯ ಆರೋಪದಡಿ ಪ್ರಕರಣ ದಾಖಲಾಗಿದೆ. ಈ ಘಟನೆ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಯ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ.
ಇದಕ್ಕೂ ಮುಂಚೆ, ಜೂನ್ 6 ರಂದು ಕುಕ್ ಟೌನ್‌ನ ಮಿಲ್ಟನ್ ಪಾರ್ಕ್ ಬಳಿ ಎರಡು ಸಾರ್ವಜನಿಕ ಕಿರುಕುಳ ಘಟನೆಗಳು ವರದಿಯಾಗಿದ್ದವು. ಒಂದು ಘಟನೆಯಲ್ಲಿ ಕುಟುಂಬದೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬಳ ಮೇಲೆ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿದ್ದ. ಇನ್ನೊಂದು ಘಟನೆಯಲ್ಲಿ, ಉದ್ಯಾನವನದೊಳಗೆ ಬಲವಂತವಾಗಿ ಮಹಿಳೆಯನ್ನು ತಬ್ಬಿಕೊಂಡು ತುಟಿಗಳಿಗೆ ಮುತ್ತಿಟ್ಟಿದ್ದ. ಇದನ್ನ ಎದುರಿಸಿದ್ದ ಮಹಿಳೆಗೆ ಆರೋಪಿ 'ಯಾರಿಗೂ ಹೇಳಿದರೂ ಏನೂ ನಡೆಯೋಲ್ಲ' ಎಂದು ಹೇಳಿ ಪರಾರಿಯಾಗಿದ್ದ. ಇದೇ ರೀತಿ, ಏಪ್ರಿಲ್‌ನಲ್ಲಿ ಬಿಟಿಎಂ ಲೇಔಟ್‌ನಲ್ಲಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಘಟನೆಯೊಂದರಲ್ಲಿ, ಒಬ್ಬ ವ್ಯಕ್ತಿ ಇಬ್ಬರು ಮಹಿಳೆಯರನ್ನು ಹಿಂಬಾಲಿಸಿ, ಒಬ್ಬರನ್ನು ಮುಟ್ಟಿದ ನಂತರ ಪರಾರಿಯಾಗಿರುವ ದೃಶ್ಯ ವೈರಲ್ ಆಗಿತ್ತು.
ಈ ಎಲ್ಲ ಘಟನೆಗಳು ನಗರದಲ್ಲಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಗಂಭೀರ ಆತಂಕವನ್ನು ಹುಟ್ಟುಹಾಕಿವೆ. ಪೊಲೀಸರು ಹೆಚ್ಚಿನ ಜಾಗೃತೆ ವಹಿಸಬೇಕಾಗಿದೆ. ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಿದೆ.
