ಕಾರವಾರ, (ಏ.12): ಸ್ನೇಹಿತನ ಅಣ್ಣ ಪತ್ನಿಯೊಂದಿಗೆ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದವನನ್ನು ಹತ್ಯೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಳಿಯಾಳ ತಾಲೂಕಿನ ಬೆಳವಟಗಿಯ ಮಾರುತಿ ಮಾದಪ್ಪಗೌಡ ಬಂಧಿತ ಆರೋಪಿ. ಈತ ತನ್ನ ಸ್ನೇಹಿತ ನಾಗರಾಜ್‍ನನ್ನು ಕೊಲೆ ಮಾಡಿದ್ದನು.

ಪತ್ನಿಯೇ ಪ್ರಿಯಕರ ಜೊತೆ ಸೇರಿ ಪತಿಯನ್ನ ಕೊಂದ ಪ್ರಕರಣ: ಆರೋಪಿಗಳ ಬಂಧನ

ಏನಿದು ಪ್ರಕರಣ?
ಏಪ್ರಿಲ್ 4 ರಂದು ಬೆಳವಟಗಿಯ ನಾಗರಾಜ್ ಕೊಳದಾರ (31) ಮನೆಯಿಂದ ದೇವಸ್ಥಾನದ ಹತ್ತಿರ ಹೋಗಿ ಬರುವುದಾಗಿ ಹೇಳಿ ನಾಪತ್ತೆಯಾಗಿದ್ದನು. ಆದರೆ ಈತನ ಮೃತದೇಹ ಏಪ್ರಿಲ್ 7 ರಂದು ಬೆಳವಟಗಿಯ ಅರಣ್ಯ ಪ್ರದೇಶದ ಬಳಿಯ ಒಣಗಿದ ಹಳ್ಳದಲ್ಲಿ ರುಂಡವಿಲ್ಲದೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಈ ಬಗ್ಗೆ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಸಿಪಿಐ ಬಿ.ಎಸ್.ಲೋಕಾಪುರ ನೇತೃತ್ವದಲ್ಲಿ ಪಿಎಸ್‍ಐ ಯಲ್ಲಾಲಿಂಗ ಕನ್ನೂರು ಸೇರಿದಂತೆ ಪೊಲೀಸರ ತಂಡ ತನಿಖೆ ಕೈಗೊಂಡಿತ್ತು. ಈ ಪ್ರಕರಣದ ಜಾಡು ಹಿಡಿದ ಪೊಲೀಸರು ಮೃತ ನಾಗರಾಜ್ ಸ್ನೇಹಿತ, ಅದೇ ಗ್ರಾಮದ ಆರೋಪಿ ಮಾದಪ್ಪಗೌಡನ ಮೇಲೆ ಅನುಮಾನಗೊಂಡು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯಿಬಿಟ್ಟಿದ್ದಾನೆ.

ಆರೋಪಿ ಮಾದಪ್ಪಗೌಡ ಮೃತ ನಾಗರಾಜ್ ಸಹೋದರನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಇದಕ್ಕೆ ಮೃತ ನಾಗರಾಜ್ ಅಡ್ಡಿಯಾಗಿದ್ದನು. ಇದರಿಂದ ಕಟ್ಟಿಗೆ ತೆಗೆದುಕೊಂಡು ಬರಲು ಹೋಗೋಣವೆಂದು ಕರೆದುಕೊಂಡು ಹೋಗಿ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.