ಶಿರಾಳಕೊಪ್ಪ(ಜೂ.02): ಶಿರಾಳಕೊಪ್ಪ ಸಮೀಪದ ಮಳೂರು ಗ್ರಾಮದಲ್ಲಿ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತನನ್ನು ಶಿವಮೂರ್ತಪ್ಪ (44) ಎಂದು ಹೇಳಲಾಗಿದೆ. 

ತಮ್ಮ ಶುಂಠಿ ಬೆಳೆದ ಜಮೀನಿನಲ್ಲಿ ವಿಷ ಕುಡಿದು ಒದ್ದಾಡುತ್ತಿದ್ದಾಗ ಜಮೀನಿನ ಹತ್ತಿರವಿದ್ದವರು ತಕ್ಷಣ ಶಿರಾಳಕೊಪ್ಪ ಸಮುದಾಯ ಆಸ್ಪತ್ರೆಗೆ ಅವರನ್ನು ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಶಿಕಾರಿಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿ ಆಗದೆ ರೈತ ಸಾವನ್ನಪ್ಪಿದ್ದಾರೆ.

ರಾಷ್ಟ್ರೀಯ ಖೋ ಖೋ ಆಟಗಾರ ನೀರಿನಲ್ಲಿ ಮುಳುಗಿ ಸಾವು: ಕೊಲೆ ಶಂಕೆ

ಸಾವಿಗೀಡಾದ ರೈತ ಶಿವಮೂರ್ತಪ್ಪ ತನ್ನ ಜಮೀನಿನಲ್ಲಿ ಶುಂಠಿ ಬೆಳೆ ಬೆಳೆದಿದ್ದು, ಸರಿಯಾಗಿ ಬೆಳೆ ಬಾರದೇ ಹಾಗೂ ಸರಿಯಾದ ಬೆಲೆಯೂ ಸಿಗದೇ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ. ಇವರು ಶಿರಾಳಕೊಪ್ಪ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ 1 ಲಕ್ಷ ಹಾಗೂ ಖಾಸಗಿಯಾಗಿ ಕೈಸಾಲ 2 ಲಕ್ಷ ಮಾಡಿದ್ದರು ಎಂದು ಪತ್ನಿ ಶಾಂತಮ್ಮ ತಿಳಿಸಿದ್ದಾರೆ. ಮೃತರಿಗೆ ಪತ್ನಿ, ಒಬ್ಬ ಪುತ್ರಿ, ಒಬ್ಬ ಪುತ್ರ ಇದ್ದಾರೆ. ಈ ಸಂಬಂಧ ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

ರೇವಣಪ್ಪ ಶೆಟ್ಟರ್‌ ನಿಧನ

ಶಿಕಾರಿಪುರ: ಪಟ್ಟಣದ ದೊಡ್ಡಪೇಟೆ ವೀರಶೈವ ಸಮಾಜದ ಹಿರಿಯ ಸದಸ್ಯ ರೇವಣಪ್ಪ ಲಂಗೋಟಿ ಶೆಟ್ಟರ್‌ (70) ತೀವ್ರ ಹೃದಯಾಘಾತದಿಂದ ಕುಂಬಾರಗುಂಡಿಯ ಸ್ಪಗೃಹದಲ್ಲಿ ಸೋಮವಾರ ಬೆಳಗಿನ ಜಾವ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.

ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹಿರೇಮಾಗಡಿ ಸುಕ್ಷೇತ್ರದ ಶಿವಮೂರ್ತಿ ಮುರುಘರಾಜೇಂದ್ರ ಶ್ರೀಗಳು,ಪುರಸಭಾ ಸದಸ್ಯ ಪ್ರಕಾಶ್‌ ಗೋಣಿ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ಅಧ್ಯಕ್ಷ ರುದ್ರಮುನಿ, ದೊಡ್ಡಪೇಟೆ ವೀರಶೈವ ಸಮಾಜ¨ ಪದಾಧಿಕಾರಿಗಳು ಕುಟುಂಬದವರಿಗೆ ಸಾಂತ್ವನ ಹೇಳಿದರು. ಸೋಮವಾರ ಸಂಜೆ ವೀರಶೈವ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಿತು.