ಬೆಂಗಳೂರು(ಸೆ.23): ಮಾದಕ ವಸ್ತು ದಂಧೆ ವಿರುದ್ಧ ಉತ್ತರ ಮತ್ತು ಪೂರ್ವ ವಿಭಾಗಗಳ ಪೊಲೀಸರ ಕಾರ್ಯಾಚರಣೆ ಬಿರುಸಿನಿಂದ ಸಾಗಿದ್ದು, ವಿದೇಶಿ ಪ್ರಜೆ ಸೇರಿದಂತೆ ಒಂಭತ್ತು ಪೆಡ್ಲರ್‌ಗಳನ್ನು ಸೆರೆ ಹಿಡಿದು 17 ಲಕ್ಷ ಮೌಲ್ಯದ ವಶಪಡಿಸಿಕೊಂಡಿದ್ದಾರೆ.

ಸುಡಾನ್‌ ಮೂಲದ ಅಹಮದ್‌ ಓಮರ್‌ ಅಹಮದ್‌ ಸಾಯಿದ್‌, ಕೊತ್ತನೂರಿನ ತಾಬ್‌ಶೀರ್‌, ಲಝೀಮ್‌ ನಾಸೀರ್‌, ಕೆ.ಜಿ.ಹಳ್ಳಿಯ ಸೈಯದ್‌ ಶಕೀರ್‌, ಆರ್‌.ಟಿ.ನಗರದ ಮೊಹಮ್ಮದ್‌ ಶಹೀಮ್‌, ಆಂಧ್ರಪ್ರದೇಶದ ಸುರೇಂದ್ರ ಅಲಿಯಾಸ್‌ ಸೂರ್ಯ, ಭೀಮಣ್ಣ, ನನ್ನರಾವ್‌ ಹಾಗೂ ಭೂಪಸಂದ್ರದ ಶಬ್ಬೀರ್‌ ಖಾನ್‌ ಬಂಧಿತರು. ಈ ಆರೋಪಿಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಹೊರ ರಾಜ್ಯಗಳಿಂದ ಗಾಂಜಾ, ಎಂಡಿಎಂಎ ಸೇರಿದಂತೆ ಇತರೆ ಡ್ರಗ್ಸ್‌ ತಂದು ನಗರದಲ್ಲಿ ಮಾರುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರತಿಷ್ಠಿತ ಕಾಲೇಜಿನ ಎಂಸಿಎ ವಿದ್ಯಾರ್ಥಿ

ಪ್ರತಿಷ್ಠಿತ ಖಾಸಗಿ ಕಾಲೇಜ್‌ನಲ್ಲಿ ಎಂಸಿಎ ವಿದ್ಯಾರ್ಥಿ ಓಮರ್‌ ಅಹಮದ್‌, ಹಣದಾಸೆಗೆ ಅಡ್ಡ ದಾರಿ ತುಳಿದಿದ್ದ. ಕಲ್ಯಾಣ ನಗರದಲ್ಲಿ ನೆಲೆಸಿದ್ದ ಆತ, ತನ್ನ ಆಫ್ರಿಕಾ ದೇಶದ ಗೆಳೆಯನ ಜತೆ ಸೇರಿ ಡ್ರಗ್ಸ್‌ ದಂಧೆ ಶುರು ಮಾಡಿದ್ದ. ತಾನು ನೆಲೆಸಿದ್ದ ಫ್ಲ್ಯಾಟ್‌ನಲ್ಲಿ ಡ್ರಗ್ಸ್‌ ಸಂಗ್ರಹಿಸುತ್ತಿದ್ದ ಓಮರ್‌, ತನ್ನ ಸಹಪಾಠಿಗಳನ್ನೇ ವ್ಯಸನಿಗಳನ್ನಾಗಿಸಿದ್ದ. ಆರೋಪಿ ಫ್ಲ್ಯಾಟ್‌ಗೆ ಬಂದು ಗ್ರಾಹಕರು ಡ್ರಗ್ಸ್‌ ಕೊಳ್ಳುತ್ತಿದ್ದರು.

'ಆದಿತ್ಯ ಆಳ್ವಾ ಎಲ್ಲಿದ್ದರೂ ಸಿಸಿಬಿ ಬಲೆಗೆ ಬೀಳಲೇಬೇಕು' ಎಂಥಾ ಪ್ಲಾನ್!

ಈ ಬಗ್ಗೆ ಮಾಹಿತಿ ಆಧರಿಸಿ ಆರೋಪಿ ಫ್ಲ್ಯಾಟ್‌ ಮೇಲೆ ದಾಳಿ ನಡೆಸಿದ ಹೆಣ್ಣೂರು ಠಾಣೆ ಪೊಲೀಸರು, .5 ಲಕ್ಷ ಮೌಲ್ಯದ 50 ಗ್ರಾಂ ಜುರಾಸ್ಸಿಸ್‌ ಮಾತ್ರೆ, 10 ಗ್ರಾಂ ಎಂಡಿಎಂಎ ಡ್ರಗ್ಸ್‌ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ಎಸ್‌.ಡಿ. ಶರಣಪ್ಪ ತಿಳಿಸಿದ್ದಾರೆ.

ಲಾಕ್‌ಡೌನ್‌ ನಷ್ಟಕ್ಕೆ ಡ್ರಗ್ಸ್‌ ದಂಧೆ!

ಲಾಕ್‌ ಡೌನ್‌ ಹಿನ್ನೆಲೆ ಹಣಕಾಸು ಸಮಸ್ಯೆಗೆ ಸಿಲುಕಿದ ಆಟೋ ಚಾಲಕ ಶಬ್ಬೀರ್‌ ಖಾನ್‌ ಡ್ರಗ್ಸ್‌ ದಂಧೆಗಿಳಿದು ಈಗ ಸಂಜಯನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ತನ್ನ ಸ್ನೇಹಿತ ವಿಶಾಖಪಟ್ಟಣದ ಭೀಮಣ್ಣ ಮತ್ತು ನನ್ನರಾವ್‌ನನ್ನು ಸಂಪರ್ಕಿಸಿ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ತರುತ್ತಿದ್ದ. ಬಳಿಕ ನಗರದಲ್ಲಿ ದುಬಾರಿ ಬೆಲೆಗೆ ಗಾಂಜಾ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಖಾನ್‌ ತಂಡವನ್ನು ಸೆರೆ ಹಿಡಿಯಲಾಯಿತು ಎಂದು ಉತ್ತರ ವಿಭಾಗದ ಡಿಸಿಪಿ ಧಮೇಂದ್ರ ಕುಮಾರ್‌ ಮೀನಾ ಹೇಳಿದ್ದಾರೆ.

ಹಣದಾಸೆಗೆ ಡ್ರಗ್ಸ್‌ ಮಾರಾಟ ಶುರು ಮಾಡಿದ್ದ ಮತ್ತೊಬ್ಬ ಖಾಸಗಿ ಕಾಲೇಜಿನ ವಿದ್ಯಾರ್ಥಿ ಸೋಲದೇವನಹಳ್ಳಿ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಅನಂತಪುರದಲ್ಲಿ ಬಿಎಸ್ಸಿ ಓದುತ್ತಿದ್ದ ಸುರೇಂದ್ರ, ಆಂಧ್ರಪ್ರದೇಶದಿಂದ ಗಾಂಜಾ ತಂದು ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಸೆರೆಯಾಗಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ.