ಚಂಡೀಗಢ(ಆ.02): ಯಥೇಚ್ಛ ಮಾದಕ ವಸ್ತುಗಳ ದುರ್ಬಳಕೆಯಿಂದ ಉಡ್ತಾ ಪಂಜಾಬ್‌ ಎಂದೇ ಕುಖ್ಯಾತಿ ಗಳಿಸಿದ ಪಂಜಾಬ್‌ನಲ್ಲಿ ಕಳ್ಳಭಟ್ಟಿ ಸೇವಿಸಿ ಅನಾರೋಗ್ಯಕ್ಕೆ ತುತ್ತಾಗಿದ್ದ 47 ಜನರು ಶನಿವಾರ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಪಂಜಾಬ್‌ನಲ್ಲಿ ಕಳೆದ ಬುಧವಾರ ರಾತ್ರಿಯಿಂದೀಚೆಗೆ ಕಳ್ಳಭಟ್ಟಿಸೇವನೆಗೆ ಬಲಿಯಾದವರ ಸಂಖ್ಯೆ 86ಕ್ಕೆ ತಲುಪಿದೆ. 

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್‌ ಸಿಂಗ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ, ಈ ಪ್ರಕರಣಕ್ಕೆ 7 ಮಂದಿ ಅಬಕಾರಿ ಅಧಿಕಾರಿಗಳು ಹಾಗೂ 6 ಮಂದಿ ಪೊಲೀಸ್‌ ಸಿಬ್ಬಂದಿಯನ್ನು ಅಮಾನತು ಮಾಡಿದೆ.

ಏತನ್ಮಧ್ಯೆ, ಕಳ್ಳಭಟ್ಟಿ ಸೇವನೆಯಿಂದ ಜನ ಸಾಯುತ್ತಿದ್ದರೂ, ಈ ಬಗ್ಗೆ ದೂರು ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಅಲ್ಲದೆ, ಸಾವನ್ನಪ್ಪಿದ್ದವರು ಕಳ್ಳಭಟ್ಟಿ ಸಾರಯಿಯಿಂದಲೇ ಎಂಬುದನ್ನು ಒಪ್ಪಿಕೊಳ್ಳಲು ಸಂತ್ರಸ್ತರ ಕುಟುಂಬಗಳೇ ಒಪ್ಪಿಕೊಳ್ಳುತ್ತಿಲ್ಲ. ತನ್ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಾವಿಗೀಡಾದ ಕುಟುಂಬಸ್ಥರೇ ಅಡ್ಡಿಯಾಗಿದ್ದಾರೆ ಎಂದು ಗುರ್‌ದಾಸ್‌ಪುರ ಉಪ ಆಯುಕ್ತ ಮೊಹಮ್ಮದ್‌ ಇಶ್ಫಾಕ್‌ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 

ತರಣ್‌ ತರಣ್‌ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ 42 ಜನ, ಅಮೃತಸರದಲ್ಲಿ 11 ಮತ್ತು ಗುರುದಾಸ್‌ಪುರ ಜಿಲ್ಲೆಯಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಇದು ಪಂಜಾಬ್ ರಾಜ್ಯದ್ಯಂತ ಸಂಚಲನಕ್ಕೆ ಕಾರಣವಾಗಿದೆ. ಇನ್ನು ಕಳೆದ ಎರಡು ದಿನಗಳ ಹಿಂದಷ್ಟೇ ಆಂಧ್ರಪ್ರದೇಶದಲ್ಲಿ ಮದ್ಯ ಸಿಗದೇ ಸ್ಯಾನಿಟೈಸರ್ ಸೇವಿರಿ ಹತ್ತು ಮಂದಿ ಸಾವನ್ನಪ್ಪಿದ್ದರು.