ಮೈಸೂರು ಗ್ಯಾಂಗ್‌ರೇಪ್: 7ನೇ ಆರೋಪಿಯೂ ಸೆರೆ
* ಆ.24 ರಂದು ನಡೆದಿದ್ದ ಸಾಮೂಹಿಕ ಅತ್ಯಾಚಾರ
* ತಮಿಳುನಾಡು ಮೂಲದ ಸೆಲ್ವ ಎಂಬಾತನೇ ಬಂಧಿತ ಆರೋಪಿ
* ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನ್ಯಾಯಾಲಯ
ಮೈಸೂರು(ಸೆ.08): ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಚಾಮುಂಡಿಬೆಟ್ಟ ತಪ್ಪಲಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿದ್ದ 7ನೇ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತಮಿಳುನಾಡು ಮೂಲದ ಸೆಲ್ವ(27) ಎಂಬಾತನೇ ಬಂಧಿತ 7ನೇ ಆರೋಪಿ. ಇದರೊಂದಿಗೆ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಎಲ್ಲಾ ಆರೋಪಿಗಳ ಬಂಧನವಾಗಿದೆ. ಪೊಲೀಸರು ಸೆಲ್ವನನ್ನು ಮೈಸೂರಿಗೆ ಕರೆ ತರುತ್ತಿದ್ದು ಈತನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ, ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈ ನಡುವೆ ಈಗಾಗಲೇ ಬಂಧಿತ 6 ಮಂದಿಯ ಪೊಲೀಸ್ ಕಸ್ಟಡಿ ಅವಧಿ ಮಂಗಳವಾರ ಅಂತ್ಯವಾಗಿದ್ದು, ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಮೈಸೂರು ಗ್ಯಾಂಗ್ ರೇಪ್: ಕಾಂಗ್ರೆಸ್ ಸತ್ಯಶೋಧ ವರದಿ ಸಲ್ಲಿಕೆ
ಆರೋಪಿಗಳಲ್ಲಿ 17 ವರ್ಷದ ಅಪ್ರಾಪ್ತ ವಯಸ್ಸಿನ ಯುವಕನನ್ನು ಬಾಲಮಂದಿರಕ್ಕೆ ಹಾಗೂ ಉಳಿದ 5 ಮಂದಿ ಆರೋಪಿಯನ್ನು ಮೈಸೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಆ.24 ರಂದು ಚಾಮುಂಡಿಬೆಟ್ಟ ತಪ್ಪಲಿನ ಲಲಿತಾದ್ರಿಪುರ ನಿರ್ಜನ ಪ್ರದೇಶದಲ್ಲಿ ಸ್ನೇಹಿತನೊಂದಿಗಿದ್ದ ವಿದ್ಯಾರ್ಥಿನಿ ಮೇಲೆ ಆರೋಪಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದರು.
ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದರು. ಪ್ರಕರಣ ದಾಖಲಿಸಿದ್ದ ಆಲನಹಳ್ಳಿ ಠಾಣೆ ಪೊಲೀಸರು 6 ಆರೋಪಿಗಳನ್ನು ತಮಿಳುನಾಡಿನಲ್ಲಿ ಬಂಧಿಸಿದ್ದರು. ತಮಿಳುನಾಡಿನ ಪೊಲೀಸರ ಸಹಕಾರದೊಂದಿಗೆ ಶೋಧ ಮುಂದುವರೆಸಿದ್ದ ಮೈಸೂರಿನ ಪೊಲೀಸರು ಮಂಗಳವಾರ ಸೆಲ್ವನನ್ನು ಸಹ ಬಂಧಿಸಿದ್ದಾರೆ.