ಬೆಂಗಳೂರು: ಸಿನಿಮೀಯ ರೀತಿಯಲ್ಲಿ ದರೋಡೆಕೋರರು ಅರೆಸ್ಟ್‌

ಲಾಂಗ್‌, ಮಚ್ಚು, ರಾಡ್‌ ಹಿಡಿದು ಮನೆಗೆ ನುಗ್ಗಿದ್ದ ದರೋಡೆಕೋರರು, ಸಿಸಿಟಿವಿಯಲ್ಲಿ ಸುಳಿವು, ತಕ್ಷಣ 112ಕ್ಕೆ ಕರೆ, ಅಪ್ಪ-ಮಕ್ಕಳ ಮಾತು ಕೇಳಿ ತಕ್ಷಣ ಕೋಣೆಯೊಳಗೆ ಸೇರಿದ ದರೋಡೆಕೋರರು, 10 ನಿಮಿಷದಲ್ಲೇ ಪೊಲೀಸರಿಗೆ ಸೆರೆ. 

7 Arrested For Robbery Case in Bengaluru grg

ಬೆಂಗಳೂರು(ಜ.14): ಉದ್ಯಮಿಯೊಬ್ಬರ ಮನೆಗೆ ನುಗ್ಗಿ ದರೋಡೆಗೆ ಯತ್ನ ಸಂಬಂಧ ಏಳು ಮಂದಿ ಆರೋಪಿಗಳು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್‌ ಸಿಟಿ ಶಿಕಾರಿಪಾಳ್ಯ ಮುಖ್ಯರಸ್ತೆ ನಿವಾಸಿ ಶೇಕ್‌ ಕಲೀಂ(22), ಬಿಹಾರದ ಮೊಹಮ್ಮದ್‌ ನಿನಾಜ್‌(21), ಉತ್ತರ ಪ್ರದೇಶದ ಮೊಹಮ್ಮದ್‌ ಇಮ್ರಾನ್‌(24), ಸೈಯದ್‌ ಫೈಜಲ್‌ ಆಲಿ(23), ರಾಜಸ್ಥಾನದ ರಾಮ್‌ ಬಿಲಾಸ್‌(27), ಮಧ್ಯಪ್ರದೇಶದ ಸುನೀಲ್‌ ಡಾಂಗಿ(20) ಹಾಗೂ ಒಡಿಸ್ಸಾದ ರಜತ್‌ ಮಲ್ಲಿಕ್‌(21) ಬಂಧಿತರು. ಆರೋಪಿಗಳಿಂದ ಲಾಂಗ್‌, ಕಬ್ಬಿಣದ ರಾಡ್‌, ಖಾರದಪುಡಿ ಪೊಟ್ಟಣ, ಪೈಪುಗಳು, ಹಗ್ಗ ಸೇರಿದಂತೆ ಮಾರಕಾಸ್ತ್ರಗಳಿಂದ ಜಪ್ತಿ ಮಾಡಲಾಗಿದೆ. ಕನಕಪುರ ರಸ್ತೆಯ ನಾರಾಯಣನಗರ ವಿಶ್ರಾಂತಿ ಲೇಔಟ್‌ ನಿವಾಸಿ ಉದ್ಯಮಿ ಅಜಯ್‌ ಕರಾಯ್‌ ಬಾಲಗೋಪಾಲ್‌ ಅವರ ಮನೆಗೆ ಜ.11ರಂದು ಮುಂಜಾನೆ 5.20ರ ಸುಮಾರಿಗೆ ನುಗ್ಗಿ ದರೋಡೆಗೆ ಪ್ರಯತ್ನಿಸುವಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಸಿಟಿವಿಯಲ್ಲಿ ಕಂಡ ದುಷ್ಕರ್ಮಿಗಳು

ಉದ್ಯಮಿ ಅಜಯ್‌ ಕರಾಯ್‌ ಬಾಲಗೋಪಾಲ್‌ ಅವರು ಪುತ್ರರಾದ ರಾಹುಲ್‌ ಕರಾಯ್‌ ಬಾಲಗೋಪಾಲ್‌ ಹಾಗೂ ಸಮೀರ್‌ ಕರಾಯ್‌ ಗೋಪಾಲ್‌ ಅವರೊಂದಿಗೆ ಮನೆಯಲ್ಲಿ ನೆಲೆಸಿದ್ದಾರೆ. ರಾಹುಲ್‌ ಕರಾಯ್‌ ಅವರು ಜ.11ರಂದು ಮುಂಜಾನೆ 5.20ಕ್ಕೆ ಎದ್ದು ಕಾಫಿ ಮಾಡಿಕೊಳ್ಳಲು ಅಡುಗೆ ಕೋಣೆಗೆ ತೆರಳಿ ಫ್ರಿಡ್ಜ್‌ ಕಡೆ ನೋಡಿದಾಗ ಫ್ರಿಡ್ಜ್‌ನಲ್ಲಿ ಇರಿಸಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಕೆಳಗೆ ಬಿದ್ದಿರುವುದು ಕಂಡು ಬಂದಿದೆ. ಯಾರೋ ಕಳ್ಳರು ಮನೆಗೆ ನುಗ್ಗಿರುವ ಬಗ್ಗೆ ಅನುಮಾನಗೊಂಡ ರಾಹುಲ್‌, ಬೆಡ್‌ ರೂಮ್‌ಗೆ ತೆರಳಿ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ, ಐವರು ಅಪರಿಚಿತರು ಮಾರಕಾಸ್ತ್ರ ಹಿಡಿದು ಮನೆಯ ಫರ್ನಿಚರ್‌ಗಳ ಹಿಂದೆ ಅಡಗಿಕೊಂಡಿರುವುದು ಕಂಡು ಬಂದಿದೆ.

ಗುರುತೇ ಸಿಗದಂತೆ ವೇಷ ಬದಲಿಸಿದ ಸ್ಯಾಂಟ್ರೋ ರವಿ ಬಂಧನ, ರಾಜ್ಯ ರಾಜಕೀಯದಲ್ಲಿ ಸಂಚಲನ!

ಸಮಯ ಪ್ರಜ್ಞೆ ಕೆಲಸ

ತಕ್ಷಣ ಎಚ್ಚೆತ್ತ ರಾಹುಲ್‌, ನಿದ್ರೆಯಲ್ಲಿದ್ದ ತಂದೆಯನ್ನು ಎಬ್ಬಿಸಿ ದರೋಡೆಗೆ ಕಳ್ಳರು ಮನೆಗೆ ನುಗ್ಗಿರುವ ವಿಚಾರ ತಿಳಿಸಿದ್ದಾರೆ. ಸಮಯ ಪ್ರಜ್ಞೆ ಬಳಸಿ ಪೊಲೀಸ್‌ ಸಹಾಯವಾಣಿ 112ಗೆ ಕರೆ ಮಾಡಿ ಮನೆಗೆ ದುಷ್ಕರ್ಮಿಗಳು ನುಗ್ಗಿರುವ ವಿಷಯ ತಿಳಿಸಿದ್ದಾರೆ. ಅಷ್ಟರಲ್ಲಿ ಐವರು ದುಷ್ಕರ್ಮಿಗಳು, ರಾಹುಲ್‌ ಹಾಗೂ ಅವರ ತಂದೆಯ ಸಂಭಾಷಣೆ ಕೇಳಿಸಿಕೊಂಡು ಮನೆಯ ಗೆಸ್ಟ್‌ ರೂಮ್‌ಗೆ ತೆರಳಿ ಬಚ್ಚಿಟ್ಟುಕೊಂಡು ಒಳಗಿನಿಂದ ಬಾಗಿಲು ಲಾಕ್‌ ಮಾಡಿಕೊಂಡಿದ್ದಾರೆ. ಈ ನಡುವೆ ಕರೆ ಸ್ವೀಕರಿಸಿದ 10 ನಿಮಿಷದಲ್ಲೇ ತಲಘಟ್ಟಪುರ ಪೊಲೀಸ್‌ ಠಾಣೆಯ ಹೊಯ್ಸಳ ಗಸ್ತು ಸಿಬ್ಬಂದಿ ಉದ್ಯಮಿಯ ಮನೆ ಬಳಿ ಬಂದಿದ್ದು, ಗೆಸ್ಟ್‌ ರೂಮ್‌ನಲ್ಲಿ ಲಾಕ್‌ ಆಗಿದ್ದ ಐವರು ದುಷ್ಕರ್ಮಿಗಳನ್ನು ವಶಕ್ಕೆ ಪಡೆದು ಮಾರಕಾಸ್ತ್ರಗಳನ್ನು ಜಪ್ತಿ ಮಾಡಿದ್ದಾರೆ.

ತಾರಸಿ ಬಾಗಿಲು ಮೀಟಿ ಮನೆಯ ಒಳಗೆ ಪ್ರವೇಶ

ದರೋಡೆಗೆ ಬಂದ ಏಳು ಮಂದಿ ದುಷ್ಕರ್ಮಿಗಳ ಪೈಕಿ ಶೇಖ್‌ ಖಲೀಂ ಮತ್ತು ಮೊಹಮ್ಮದ್‌ ನಿನಾಜ್‌ ಮನೆಯ ತಾರಿಸಿ ಮೇಲೆ ನಿಂತು ಹೊರಗಿನ ಚಲನವಲನ ಗಮನಿಸುತ್ತಿದ್ದರು. ಉಳಿದ ಐವರು ಗೋಡೆಯ ಸಜ್ಜಾದ ಸಹಾಯ ಪಡೆದು ತಾರಸಿ ಪ್ರವೇಶಿಸಿ ಕಬ್ಬಿಣದ ರಾಡ್‌ನಿಂದ ತಾರಸಿ ಬಾಗಿಲು ಮುರಿದು ಮನೆ ಪ್ರವೇಶಿಸಿದ್ದರು. ಇತ್ತ ಹೋಯ್ಸಳ ವಾಹನ ಉದ್ಯಮಿ ಮನೆಯ ಬಳಿ ಬರುತ್ತಿದ್ದಂತೆ ತಾರಸಿ ಮೇಲೆ ಕಾವಲು ಕಾಯುತ್ತಿದ್ದ ಇಬ್ಬರು ದುಷ್ಕರ್ಮಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದರು. ಬಳಿಕ ಪೊಲೀಸರು ಈ ಇಬ್ಬರನ್ನು ಆನೇಕಲ್‌ನ ಬಸ್‌ ನಿಲ್ದಾಣದ ಬಳಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

11 ದಿನಗಳ ಬಳಿಕ ಸ್ಯಾಂಟ್ರೋ ರವಿ ಅರೆಸ್ಟ್, ಗುಜರಾತ್‌ನಲ್ಲಿ ಬಂಧಿಸಿದ ಮೈಸೂರು ಪೊಲೀಸ್!

ಬಾಂಬೆ ಫ್ರೆಂಡ್ಸ್‌!

ಬಂಧಿತ ಏಳು ಮಂದಿ ಆರೋಪಿಗಳ ಪೈಕಿ ಆರು ಮಂದಿ ಹೊರ ರಾಜ್ಯದವರು. ಎಲೆಕ್ಟ್ರಾನಿಕ್‌ ಸಿಟಿ ಶಿಕಾರಿಪಾಳ್ಯ ಮುಖ್ಯರಸ್ತೆ ನಿವಾಸಿ ಶೇಕ್‌ ಕಲೀಂ(22) ಈ ಗ್ಯಾಂಗ್‌ನ ಲೀಡರ್‌. ಏಳು ಮಂದಿ ಆರೋಪಿಗಳು ಬಾಂಬೆಯ ಹೋಟೆಲ್‌ನಲ್ಲಿ ಕೆಲಸ ಮಾಡುವಾಗ ಸ್ನೇಹಿತರಾಗಿದ್ದರು. ಆರೋಪಿ ಈ ಶೇಕ್‌ ಕಲೀಂ ಬಾಂಬೆಯಿಂದ ಬೆಂಗಳೂರಿಗೆ ವಾಪಾಸಾಗಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಇತರೆ ಆರೋಪಗಳ ಜತೆ ಸೇರಿಕೊಂಡು ಅಪರಾಧ ಕೃತ್ಯ ನಡೆಸಲು ತೀರ್ಮಾನಿಸಿದ್ದ. ಅದರಂತೆ ನಗರದ ಹೊರವಲಯದಲ್ಲಿರುವ ಉದ್ಯಮಿ ಮನೆಯನ್ನು ಗುರುತಿಸಿ ಉಳಿದ ಆರೋಪಿಗಳನ್ನು ಕರೆಸಿಕೊಂಡು ಗ್ಯಾಂಗ್‌ ಕಟ್ಟಿದರೋಡೆಗೆ ಮುಂದಾಗಿದ್ದ ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ.

ಆರೋಪಿಗಳ ವಿಚಾರಣೆ

ಆರೋಪಿಗಳು ಹಗಲಿನಲ್ಲಿ ನಗರದ ಹೊರವಲಯದಲ್ಲಿ ಸುತ್ತಾಡಿಕೊಂಡು ಒಂಟಿ ಮನೆಗಳನ್ನು ಗುರುತಿಸಿ, ಮನೆಯ ಸದಸ್ಯರ ಚಲನವಲನದ ಬಗ್ಗೆ ನಿಗಾವಹಿಸುತ್ತಿದ್ದರು. ರಾತ್ರಿ ವೇಳೆ ಮನೆಯ ಸಜ್ಜಾ, ಕಿಟಕಿ ಸಹಾಯದಿಂದ ತಾರಿಸಿ ಏರಿ ಬಳಿಕ ತಾರಸಿಯ ಬಾಗಿಲ ಚಿಲಕ ಮುರಿದು ಮನೆ ಪ್ರವೇಶಿಸಿ, ಮನೆಯ ಸದಸ್ಯರಿಗೆ ಮಾರಕಾಸ್ತ್ರದಿಂದ ಹಲ್ಲೆಗೈದು ದರೋಡೆ ಮಾಡುವ ಪ್ರವೃತ್ತಿಯವರಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಈ ಹಿಂದೆ ಆರೋಪಿಗಳು ಎಲ್ಲೆಲ್ಲಿ ಅಪರಾಧ ಕೃತ್ಯಗಳನ್ನು ಎಸೆಗಿದ್ದಾರೆ ಎಂಬುದು ಮುಂದಿನ ತನಿಖೆಯಿಂದ ತಿಳಿದು ಬರಲಿದೆ.

Latest Videos
Follow Us:
Download App:
  • android
  • ios