ಕೋಟೆನಾಡು ಚಿತ್ರದುರ್ಗದಲ್ಲಿ ಗಾಂಜಾ ಗಮ್ಮತ್ತು, ಕಾಲೇಜು ವಿಧ್ಯಾರ್ಥಿಗಳೇ ಟಾರ್ಗೆಟ್
* ಕೋಟೆನಾಡು ಚಿತ್ರದುರ್ಗದಲ್ಲಿ ಶುರುವಾಗಿದೆ ಗಾಂಜಾ ಗಮ್ಮತ್ತು
* ಕಾಲೇಜು ವಿಧ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಗಾಂಜಾ ಮಾರಾಟ ಮಾಡ್ತಿದ್ದ ಆರೋಪಿಗಳು ಅಂದರ್.
* ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸಿ ಗಾಂಜಾ ಕಿಂಗ್ ಪಿನ್ ಜಪಾನ್ ಸೀನ್ ಎಸ್ಕೇಪ್.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ, (ಮೇ.17): ಗಾಂಜಾ ಕರಿನೆರಳು ಯುವಕರು ಹಾಗೂ ವಿದ್ಯಾರ್ಥಿಗಳ ಪಾಲಿಗೆ ಎಂದೆಂದಿಗೂ ಮಾರಕ. ಚಿತ್ರದುರ್ಗದಲ್ಲಿ ಪೊಲೀಸ್ ಇಲಾಖೆ ಎಷ್ಟೇ ಕಟ್ಟು ನಿಟ್ಟಿನ ಕ್ರಮ ಕೈಗೊಂಡರೂ ಗಾಂಜಾ ಕುರಿತಾದ ಪ್ರಕರಣಗಳು ಮಾತ್ರ ಬೆಳಕಿಗೆ ಬರುತ್ತಲೇ ಇವೆ. ಜಿಲ್ಲೆಯಲ್ಲಿ ಮತ್ತೆ ಗಾಂಜಾ ಗಮ್ಮತ್ತು ಕೇಳಿ ಬಂದಿದ್ದು ಕಾಲೇಜು ವಿದ್ಯಾರ್ಥಿಗಳ ಭವಿಷ್ಯದಿಂದ ಪೋಷಕರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ಒಂದು ವರದಿ ಇಲ್ಲಿದೆ.
ಪ್ಯಾಕೇಟ್ ಮಾಡಿ ಇಟ್ಟಿರೋದು ಏನೋ ತಿಂಡಿ ತಿನಿಸಲ್ಲ. ಮೇಲಾಗಿ ಮಕ್ಕಳ ಭವಿಷ್ಯವನ್ನೇ ಹಾಳು ಮಾಡುವ ಗಾಂಜಾ ಪುಡಿ. ಎಸ್ ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಕೋಟೆನಾಡು ಚಿತ್ರದುರ್ಗ ನಗರದ ಎಸ್ಪಿ ಆಫೀಸ್. ಜಿಲ್ಲೆಯಲ್ಲಿ ಗಾಂಜಾ ಮಾರುತ್ತಿದ್ದ ಇಬ್ಬರು ಆರೋಪಿಗಳ ಜೊತೆಗೆ ಗಾಂಜಾ ಸೇವನೆ ಮಾಡ್ತಿದ್ದ 6 ಮಂದಿಯನ್ನು ಖಾಕಿ ಪಡೆ ಎಡೆಮುರಿ ಕಟ್ಟಿದ್ದಾರೆ. ಆಂಧ್ರದ ವಿಶಾಖಪಟ್ಟಣಕ್ಕೆ ಹೋಗಿ ಅಲ್ಲಿಂದ ಬಳ್ಳಾರಿ ಮಾರ್ಗವಾಗಿ ಗಾಂಜಾ ತರಲಾಗಿತ್ತಂತೆ.
ಹೀಗೆ ಗಾಂಜಾ ತಂದು ಮಾರಾಟ ಮಾಡುವಾಗ ಪೊಲೀಸರ ಅತಿಥಿಯಾದವರು ಸೋಮಶೇಖರ್ ಅಲಿಯಾಸ್ ಡೆಡ್ಲಿ ಸೋಮ, ಭರತ್ ಅಲಿಯಾಸ್ ಬೆಣ್ಣೆ ಎಂಬ ಪುಂಡರು. ಹೀಗೆ ತಂದ ಒಣ ಗಾಂಜಾ ಸೊಪ್ಪನ್ನು ಇವರು ಚಿತ್ರದುರ್ಗ ನಗರದ ಜಟ್ ಪಟ್ ನಗರ ಹಾಗೂ ಕುರುಬರ ಗುಡ್ಡದ ನಡುವಿನ ಸ್ಮಶಾನದ ನಿರ್ಜನ ಪ್ರದೇಶದಲ್ಲಿ ಮಾರುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ನಗರ ಪೊಲೀಸ್ ಠಾಣೆಯ ನಯೀಂ ಅಹ್ಮದ್ ನೇತೃತ್ವದ ತಂಡ ದಾಳಿ ಮಾಡಿ ಗಾಂಜಾ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿದೆ. ಮಾರುತ್ತಿದ್ದವರ ಜೊತೆಗೆ ಗಾಂಜಾ ಸೇವಿಸುತ್ತಿದ್ದ ಆರು ಜನರನ್ನು ಸಹ ಬಂಧಿಸಲಾಗಿದೆ. ಬಂಧಿತರಿಂದ 80 ಸಾವಿರ ಮೌಲ್ಯದ 8 ಕೆಜಿ ಗಾಂಜಾ, ಒಂದು ಆಟೋ ಹಾಗೂ 2000 ನಗದು ವಶಪಡಿಸಿಕೊಳ್ಳಲಾಗಿದೆ.
ಮಲೆನಾಡಲ್ಲಿ ಗಾಂಜಾ ಗಮ್ಮತ್ತು: ಮೂಡಿಗೆರೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನ, ಮೂವರ ಬಂಧನ
ನಗರದ ಪ್ರತಿಷ್ಠಿತ ಕಾಲೇಜಾದ SJM ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿಕೊಂಡು, ಆರೋಪಿತರು ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದಿರಬಹುದು ಎಂಬ ಮಾಹಿತಿ ಸಿಕ್ಕಿದೆ. ಇನ್ನುಳಿದಂತೆ ಗಾಂಜಾ ಕಿಂಗ್ ಪಿನ್ ಜಪಾನ್ ಸೀನ ಪರಾರಿಯಾಗಿದ್ದು ಆತನ ಬಂಧನಕ್ಕೆ ವಿಶೇಷ ತಂಡವನ್ನು ರಚಿಸಲಾಗಿದೆ. ಕೂಡಲೇ ಜಿಲ್ಲೆಯಲ್ಲಿ ಗಾಂಜಾ ಗ್ಯಾಂಗ್ ಗೆ ಕಡಿವಾಣ ಹಾಕಲಾಗುವುದು ಎಂದು ಖಡಕ್ ಎಚ್ಚರಿಕೆ ಕೊಟ್ಟರು.
ಈ ಘಟನೆ ಪ್ರವಾಸಿ ತಾಣವಾಗಿರುವ ಚಿತ್ರದುರ್ಗದ ಜನರಲ್ಲಿ ಆತಂಕ ಮೂಡಿಸಿದೆ. ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳ ಪೋಷಕರಲ್ಲೂ ಈ ಘಟನೆ ಚಿಂತೆಗೀಡು ಮಾಡಿದ್ದು, ವಿದ್ಯಾರ್ಥಿಗಳ ಪೋಷಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಮಕ್ಕಳು ಶಾಲಾ ಕಾಲೇಜು ಗೆ ಹೋಗೋದಕ್ಕೆ ಶುರು ಮಾಡಿದ್ದಾರೆ. ಇಂತಹ ಸಂದರ್ಭಗಳಲ್ಲಿ ಗಾಂಜಾ ಟೀಂ ಏನಾದ್ರು ನಮ್ಮ ಮಕ್ಕಳನ್ನು ಸಂಪರ್ಕಿಸಿ ಎಲ್ಲಿ ಅವರನ್ನು ಹಾಳು ಮಾಡುತ್ತಾರೋ ಎಂಬ ಭಯ ಶುರುವಾಗಿದೆ. ಆದ್ದರಿಂದ ಕೂಡಲೇ ಪೊಲೀಸರು ಇಂತಹ ಗಾಂಜಾ ಗ್ಯಾಂಗ್ ಅನ್ನು ಪತ್ತೆ ಹಚ್ಚಿ ಜನರ ಆತಂಕ ಸಂಪೂರ್ಣ ಶಮನವಾಗಲು ಈ ದಂಧೆಗೆ ಸಂಪೂರ್ಣ ಬ್ರೇಕ್ ಹಾಕಬೇಕಿದೆ ಅಂತಾರೆ ಪೋಷಕರು .
ಈಗಾಗಲೇ ಪ್ರಕರಣದಲ್ಲಿ 8 ಜನ ಆರೋಪಿತರನ್ನು ಬಂಧಿಸಿ, ಜೈಲಿಗಟ್ಟಿರುವ ಪೊಲೀಸರು ಮತ್ತಷ್ಟು ಕಾರ್ಯಪ್ರವೃತ್ತರಾಗಬೇಕಿದೆ. ಮಾರಕವಾದ ಗಾಂಜಾ ಮಾರಾಟ ಜಾಲವನ್ನು ಮಟ್ಟ ಹಾಕಿ ಕೋಟೆ ನಾಡಿನ ಯುವಕರು ಹಾಗೂ ಪೋಷಕರಲ್ಲಿ ನೆಮ್ಮದಿ ಕಾಪಾಡಬೇಕಿದೆ.