Asianet Suvarna News Asianet Suvarna News

ಕೊಡಗು: ಕೇರಳ ವ್ಯಕ್ತಿಯಿಂದ 61 ಲಕ್ಷ ದರೋಡೆ, 6 ಜನರ ಬಂಧನ

ಕೊಡಗು ಜಿಲ್ಲೆ ವಿರಾಜಪೇಟೆಯ ರಮೇಶ್, ನಾಗೇಶ್, ಪ್ರಶಾಂತ್ ಮತ್ತು ದಿನೇಶ್ ಬಂಧಿತರು. ಕೇರಳದ ಅರು ಮತ್ತು ಜಂಷದ್ ಎಂಬಾತನನ್ನು ಬಂಧಿಸಲಾಗಿದೆ. ರಮೇಶ್, ನಾಗೇಶ್ ಮತ್ತು ಪ್ರಶಾಂತ್ ಈಗಾಗಲೇ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. 
 

6 Arrested For Robbery of Kerala Person in Kodagu grg
Author
First Published Dec 20, 2023, 1:00 AM IST

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ಡಿ.20): ಮೈಸೂರಿನಲ್ಲಿ ಚಿನ್ನವನ್ನು ಮಾರಾಟ ಮಾಡಿ 61 ಲಕ್ಷ ಹಣವನ್ನು ಸಾಗಿಸುತ್ತಿದ್ದ ಕೇರಳದ ಗುತ್ತಿಗೆದಾರರನನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದ ಪ್ರಕರಣವನ್ನು ಭೇದಿಸಿರುವ ಕೊಡಗು ಪೊಲೀಸರು ಪ್ರಮುಖ 6 ಆರೋಪಿಗಳನ್ನು ಬಂಧಿಸಿದ್ದಾರೆ. 

ಕೊಡಗು ಜಿಲ್ಲೆ ವಿರಾಜಪೇಟೆಯ ರಮೇಶ್, ನಾಗೇಶ್, ಪ್ರಶಾಂತ್ ಮತ್ತು ದಿನೇಶ್ ಬಂಧಿತರು. ಕೇರಳದ ಅರು ಮತ್ತು ಜಂಷದ್ ಎಂಬಾತನನ್ನು ಬಂಧಿಸಲಾಗಿದೆ. ರಮೇಶ್, ನಾಗೇಶ್ ಮತ್ತು ಪ್ರಶಾಂತ್ ಈಗಾಗಲೇ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. 

ದುಬೈ ಚಿನ್ನದ ಆಸೆ ತೋರಿಸಿ 60 ಲಕ್ಷ ದೋಚಿದ್ದ  ಐವರು ಆರೋಪಿಗಳು ಅರೆಸ್ಟ್

ಇನ್ನು ದಿನೇಶ್ ಹಿಂದೂಪರ ಸಂಘಟನೆಯಲ್ಲಿದ್ದು ಕೊಲೆ ಪ್ರಕರಣ ಹಾಗೂ ಕೋಮುಗಲಭೆ ಪ್ರಕರಣಗಳಲ್ಲೂ ಪ್ರಮುಖ ಆರೋಪಿಯಾಗಿದ್ದು ಕೇರಳದ ತ್ರಿಶೂರ್ ಜೈಲಿನಲ್ಲಿ ಇದ್ದಾನೆ. ಈತ ಜೈಲಿನಲ್ಲಿ ಇದ್ದುಕೊಂಡೇ ಕೊಡಗಿನ ಈ ಮೂವರಿಗೂ ದರೋಡೆಯ ಎಲ್ಲಾ ರೂಪು ರೇಷೆಗಳನ್ನು ತಿಳಿಸಿದ್ದ ಎಂದು ಕೊಡಗು ಎಸ್ಪಿ ಕೆ. ರಾಮರಾಜನ್ ತಿಳಿಸಿದ್ದಾರೆ. ಅಲ್ಲದೆ ಜೈಲಿನಿಂದ ಪೆರೋಲ್ ಮೇಲೆ ವಿರಾಜಪೇಟೆಗೆ ಬಂದಿದ್ದ ವೇಳೆ ದರೋಡೆಯಲ್ಲಿ ಭಾಗವಹಿಸಿದ್ದ ಇವನು, ದರೋಡೆ ಬಳಿಕ ಮತ್ತೆ ಕೇರಳದ ಜೈಲಿನಲ್ಲಿ ಇದ್ದಾನೆ. ಈ ದಿನೇಶ್ ಹಿಂದೂಪರ ಸಂಘಟನೆಯ ಮುಖಂಡನೂ ಆಗಿದ್ದು, ಇಂತವರಿಂದ ಸಂಘಟನೆಗೆ ಕೆಟ್ಟ ಹೆಸರು. ಹೀಗಾಗಿ ಈತನನ್ನು ಸಂಘಟನೆಯಿಂದ ಹೊರ ಹಾಕುವಂತೆ ಎಸ್ಪಿ ಒತ್ತಾಯಿಸಿದ್ದಾರೆ. 

ಡಿಸೆಂಬರ್ 9 ರಂದು ಮಧ್ಯರಾತ್ರಿ 2.30 ರಲ್ಲಿ ಪೊನ್ನಂಪೇಟೆ ತಾಲ್ಲೂಕಿನ ದೇವರಪುರದ ಬಳಿ ಕೇರಳದ ಶಂಜ್ಜಾದ್ ಎಂಬಾತನ ಕಾರನ್ನು ಅಡ್ಡಗಟ್ಟಿ ಬಳಿಕ ದರೋಡೆ ಮಾಡಲಾಗಿತ್ತು. ನಂತರ ಗೋಣಿಕೊಪ್ಪ ಪೊಲೀಸ್ ಠಾಣೆಗೆ ಹೋಗಿದ್ದ ಶಂಜ್ಜಾದ್ ತಾನು 750 ಗ್ರಾಂ ಚಿನ್ನ ಮಾರಾಟ ಮಾಡಿ 50 ಲಕ್ಷ ಕೊಂಡೊಯ್ಯುತ್ತಿದ್ದೆ. ಈ ವೇಳೆ ದರೋಡೆ ಮಾಡಲಾಗಿದೆ ಎಂದು ದೂರು ನೀಡಿದ್ದ. ಆದರೆ ತನಿಖೆಯ ವೇಳೆ ಈತ 993 ಗ್ರಾಂ ಚಿನ್ನ ಮಾರಾಟ ಮಾಡಿ 61 ಲಕ್ಷ ಹಣವನ್ನು ಸಾಗಿಸುತ್ತಿದ್ದ ಎನ್ನುವುದು ಬೆಳಕಿಗೆ ಬಂದಿದೆ ಎಂದು ಎಸ್ಪಿ ರಾಮರಾಜನ್ ತಿಳಿಸಿದ್ದಾರೆ. 

ಸದ್ಯ ಮೈಸೂರಿನ ಚಿನ್ನದ ವ್ಯಾಪಾರಿಯಿಂದ 993 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳಿಂದ 3 ಲಕ್ಷ ಹಣವನ್ನು ವಶಕ್ಕೆ ಪಡೆಯಲಾಗಿದೆ. ಇಷ್ಟೊಂದು ಚಿನ್ನವನ್ನು ಮಾರಾಟ ಮಾಡಿದ್ದರೂ ಯಾವುದೇ ಜಿಎಸ್ಟಿ ಬಿಲ್ಲು ಇಲ್ಲ. ಜೊತೆಗೆ 61 ಲಕ್ಷ ಹಣವನ್ನು ಸಾಗಿಸಿರುವುದು ಕಾನೂನು ಬಾಹಿರ. ಆದ್ದರಿಂದ ಅದನ್ನು ಸಂಬಂಧಿಸಿದ ಜಿಎಸ್ಟಿ ಮತ್ತು ಆದಾಯ ತೆರಿಗೆ ಇಲಾಖೆಗೂ ಮಾಹಿತಿ ನೀಡಲಾಗಿದೆ ಎಂದಿದ್ದಾರೆ.

ಕೃತ್ಯಕ್ಕೆ ಬಳಸಿದ್ದ ಪಿಕಪ್ ಹಾಗೂ ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ.  ಪ್ರಕರಣದ ಗಂಭೀರತೆಯನ್ನು ಗಮನಿಸಿದ್ದ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರೇ ತನಿಖೆಯ ಜವಾಬ್ದಾರಿ ಹೊತ್ತಿದ್ದರು.

Follow Us:
Download App:
  • android
  • ios