ಚೆನ್ನೈ, (ಮಾ.02): ತಮಿಳು ನಟಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೆನ್ನೈನ ತಿರುವೊಟ್ಟಿಯೂರ್ ಎಂಬಲ್ಲಿ ನಡೆದಿದೆ.

ಪಿ.ಪದ್ಮಜಾ (23) ಆತ್ಮಹತ್ಯೆ ಮಾಡಿಕೊಂಡ ನಟಿ. ಈಕೆ ಅನೇಕ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾಳೆ. ಆದರೆ ಭಾನುವಾರ ತಿರುವೊಟ್ಟಿಯೂರ್ ನಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ವಿಶ್ವಾಸ ಕಳೆದುಕೊಂಡಿತಾ ಜೆಡಿಎಸ್, ಸದ್ದು ಮಾಡುತ್ತಿದೆ ದೀಪಿಕಾ ಡ್ರೆಸ್; ಮಾ.2ರ ಟಾಪ್ 10 ಸುದ್ದಿ!

2 ದಿನಗಳಿಂದ ಮನೆ ಲಾಕ್ ಆಗಿರುವುದನ್ನು ನೋಡಿದ ಮನೆಯ ಮಾಲೀಕ ಎಸ್.ಕಾಶಿನಾಥನ್, ಅನುಮಾನಗೊಂಡು ತಿರುವೊಟ್ಟಿಯೂರ್ ಪೊಲೀಸರಿಗೆ ಫೋನ್ ಮಾಡಿ ತಿಳಿಸಿದ್ದಾರೆ. 

ಮಾಹಿತಿ ತಿಳಿದು ಸ್ಥಳಕ್ಕೆ ಬಂದು ಬಾಗಿಲು ಮುರಿದು ನೋಡಿದಾಗ ಪದ್ಮಜಾ ನೇಣು ಬಿಗಿದ ಸ್ಥಿತಿಯಲ್ಲಿರುವುದು ಬೆಳಕಿಗೆಬಂದಿದೆ. ಪದ್ಮಜಾ ಕಲಾದಿಪೇಟೆಯ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಳು. 

ಪವನ್ (25) ಎಂಬವರ ಜೊತೆ ಮದುವೆಯಾಗಿದ್ದು, 2. ವರ್ಷದ ಮಗನಿದ್ದಾನೆ. ಆದರೆ ಪತಿಯ ಜೊತೆ ಜಗಳ ಮಾಡಿಕೊಂಡು ಪ್ರತ್ಯೇಕವಾಗಿ ವಾಸಿಸುತ್ತಿದ್ದಳು.  ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪದ್ಮಜಾ ಕಳೆದ ತಿಂಗಳು ಪತಿಯಿಂದ ದೂರವಾಗಿದ್ದಳು.

ಪತಿ ಪವನ್ ಆಂಧ್ರ ಪ್ರದೇಶಕ್ಕೆ ಶಿಫ್ಟ್ ಆಗಿದ್ದರು. ಸಾಲದ ಕಾರಣದಿಂದಾಗಿ ಪದ್ಮಜಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಅಂದರೆ ಶನಿವಾರ ತನ್ನ ಸಹೋದರಿಗೆ ವಿಡಿಯೋ ಕಾಲ್ ಮಾಡಿದ್ದಳು. ಈ ವೇಳೆ ಪದ್ಮಜಾ ಆರ್ಥಿಕ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದಳು.

ಅಲ್ಲದೇ ಸಿನಿಮಾ ಮತ್ತು ಸೀರಿಯಲ್‍ನಲ್ಲಿ ಮುಖ್ಯವಾದ ಪಾತ್ರಗಳು ಸಿಗುತ್ತಿಲ್ಲ ಎಂದು ತನ್ನ ಅಳಲು ತೋಡಿಕೊಂಡಿದ್ದಳು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.